ಇಂಗ್ಲೆಂಡ್ಗೆ ದೊಡ್ಡ ಆಘಾತ; ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ಸ್ಟಾರ್ ಆಟಗಾರ
Harry Brook pulls out of India Test series: ಜನವರಿ 25ರಿಂದ ಭಾರತದ ವಿರುದ್ಧ ಆರಂಭವಾಗುವ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಹಿಂದೆ ಸರಿದಿದ್ದಾರೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ (India vs England) ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಇಂಗ್ಲೆಂಡ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರರ ಸಂಪೂರ್ಣ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೌದು, ಹ್ಯಾರಿ ಬ್ರೂಕ್ (Harry Brook) ವೈಯಕ್ತಿಕ ಕಾರಣಗಳಿಂದ ಭಾರತ ಪ್ರವಾಸಕ್ಕಾಗಿ ಇಂಗ್ಲೆಂಡ್‌ನ ಟೆಸ್ಟ್ ತಂಡದಿಂದ ಹಿಂದೆ ಸರಿದಿದ್ದಾರೆ. ಇದು ಆಂಗ್ಲರಿಗೆ ದೊಡ್ಡ ಪಟ್ಟು ನೀಡಿದಂತಾಗಿದೆ.
ಬ್ರೂಕ್ಗೆ ಬದಲಿ ಆಟಗಾರ ಆಯ್ಕೆ
ಐದು ಟೆಸ್ಟ್‌ಗಳ ಸರಣಿಯನ್ನು ಕಳೆದುಕೊಳ್ಳಲು ಸಿದ್ಧರಾದ ಹ್ಯಾರಿ ಬ್ರೂಕ್ ಅವರಿಗೆ ಬದಲಿಯಾಗಿ ಡಾನ್ ಲಾರೆನ್ಸ್ ಅವರನ್ನು ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಜನವರಿ 25ರಿಂದ ಮೊದಲ ಟೆಸ್ಟ್ಗೂ ಮುನ್ನ ಭಾನುವಾರ (ಜ.21) ಹೈದರಾಬಾದ್‌ಗೆ ಆಗಮಿಸಬೇಕಿತ್ತು. ಆದರೆ, ಬ್ರೂಕ್ ಯುಎಇಯಲ್ಲಿ ತಂಡದ ತರಬೇತಿ ಶಿಬಿರದಿಂದ ನೇರವಾಗಿ ಮನೆಗೆ ಪ್ರಯಾಣಿಸಿದ್ದಾರೆ.
ಗೌಪತ್ಯೆಯನ್ನು ಗೌರವಿಸಿ ಎಂದು ಮನವಿ
ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೇಳಿಕೆ ಬಿಡುಗಡೆ ಮಾಡಿದ್ದು, 5 ಪಂದ್ಯಗಳ ಟೆಸ್ಟ್ ಸರಣಿಗೆ ವೈಯಕ್ತಿಕ ಕಾರಣಗಳಿಂದ ಭಾರತದ ಪ್ರವಾಸ ಕೈಗೊಳ್ಳುತ್ತಿಲ್ಲ. ಹ್ಯಾರಿ ಬ್ರೂಕ್ ತಕ್ಷಣದ ಪರಿಣಾಮದೊಂದಿಗೆ ತವರಿಗೆ ಮರಳಲು ಸಿದ್ಧರಾಗಿದ್ದಾರೆ. ಈ ಅವಧಿಯಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕರು ಬ್ರೂಕ್ ಅವರ ಖಾಸಗಿ ಜೀವನದ ಗೌಪತ್ಯೆಯನ್ನು ಗೌರವಿಸಬೇಕು ಎಂದು ವಿನಂತಿಸಿದೆ.
ಅಧಿಕೃತವಾಗಿ ಸಂಪೂರ್ಣ ಪ್ರವಾಸದಿಂದ ಹೊರಗುಳಿದಿದ್ದರೂ ಬ್ರೂಕ್ ನಂತರದ ದಿನಗಳಲ್ಲಿ ಹಿಂತಿರುಗಬಹುದು ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. 2012ರ ನಂತರ ಭಾರತದ ನೆಲದಲ್ಲಿ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿರುವ ಈ ಹೊತ್ತಲ್ಲಿ ಬ್ರೂಕ್ ಅಲಭ್ಯತೆ ಇಂಗ್ಲೆಂಡ್ಗೆ ಹೊಡೆತವಾಗಿದೆ. 2012ರ ನಂತರ ಯಾವುದೇ ವಿದೇಶಿ ತಂಡವು ಭಾರತ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ.
ಹ್ಯಾರಿ ಬ್ರೂಕ್ ಪ್ರದರ್ಶನ
2022ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬ್ರೂಕ್, 12 ಟೆಸ್ಟ್ ಪಂದ್ಯಗಳಲ್ಲಿ 62.15 ಸರಾಸರಿಯಲ್ಲಿ 91.76 ಸ್ಟ್ರೈಕ್ರೇಟ್ನಲ್ಲಿ 1181 ರನ್ ಗಳಿಸಿದ್ದಾರೆ. 7 ಅರ್ಧಶತಕ ಮತ್ತು 4 ಶತಕಗಳನ್ನೂ ಸಿಡಿಸಿದ್ದಾರೆ. ಆದರೆ ಭಾರತದ ನೆಲದಲ್ಲಿ ಹ್ಯಾರಿ ಬ್ರೂಕ್ ಅವರಂತಹ ಬ್ಯಾಟ್ಸ್ಮನ್ ಅಗತ್ಯ ಇಂಗ್ಲೆಂಡ್ ತಂಡಕ್ಕಿತ್ತು. ಆದರೀಗ ಅವರು ಅಲಭ್ಯರಾಗುತ್ತಿದ್ದು, ಹಿನ್ನಡೆ ಉಂಟು ಮಾಡಿದೆ.
24 ವರ್ಷದ ಬ್ರೂಕ್ ಸಿಡಿಸಿದ 4 ಶತಕಗಳ ಪೈಕಿ ಮೂರು ಶತಕಗಳು ಪಾಕಿಸ್ತಾನ ವಿರುದ್ಧವೇ ಬಂದಿವೆ ಎಂಬುದು ವಿಶೇಷ. ಪಾಕ್ ವಿರುದ್ದ ಆಡಿದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 468 ರನ್ ಗಳಿಸಿದ್ದರು. ಇದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಬ್ರೂಕ್ ಅವರನ್ನು ಮುಂದಿನ ವಿರಾಟ್ ಕೊಹ್ಲಿ ಎಂದು ಕರೆದರು.
ಆದರೆ ಕಳೆದ ವರ್ಷ ತವರಿನಲ್ಲಿ ನಡೆದ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರೂಕ್ 9 ಇನ್ನಿಂಗ್ಸ್‌ಗಳಲ್ಲಿ 40 ಸರಾಸರಿಯಲ್ಲಿ 4 ಅರ್ಧಶತಕ ಸಹಿತ 363 ರನ್ ಕಲೆ ಹಾಕಿದ್ದರು. ಸದ್ಯ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಸಾವಿರ ರನ್ ಕಲೆ ಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಭಾರತದ ಸರಣಿಗೆ ಇಂಗ್ಲೆಂಡ್ ಪರಿಷ್ಕೃತ ತಂಡ
ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋ (ವಿಕೆಟ್ ಕೀಪರ್), ಶೋಯೆಬ್ ಬಶೀರ್, ಡಾನ್ ಲಾರೆನ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಆಲಿ ಪೋಪ್, ಆಲ್ಲಿ ರಾಬಿನ್ಸನ್, ಜೋ ರೂಟ್ಸನ್, ಮಾರ್ಕ್ ವುಡ್.