ವಿರಾಟ್-ರೋಹಿತ್ ಔಟ್, ಸಾಯಿ ಸುದರ್ಶನ್ ಇನ್, ಗಿಲ್ ನಾಯಕ; ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಸಂಭಾವ್ಯ ಟೆಸ್ಟ್ ತಂಡ
ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತದ ಸಂಭಾವ್ಯ ತಂಡ ಹೇಗಿರಲಿದೆ? ಯಾರಿಗೆಲ್ಲಾ ಅವಕಾಶ ಸಿಗಲಿದೆ? ರೋಹಿತ್-ಕೊಹ್ಲಿ ಇಲ್ಲದ ತಂಡ ಹೇಗಿರಲಿದೆ? ಇಲ್ಲಿದೆ ಮಾಹಿತಿ.

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮದ ಬಳಿಕ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೇ 17ರಿಂದ ಮತ್ತೆ ಆರಂಭವಾಗಲಿದೆ. ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬೆನ್ನಲ್ಲೇ ಭಾರತೀಯ ಆಟಗಾರರು, ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆದರೆ ಈ ಪ್ರತಿಷ್ಠಿತ ಪ್ರವಾಸಕ್ಕೆ ಇಬ್ಬರು ಘಟಾನುಘಟಿ ಆಟಗಾರರೇ ಇರುವುದಿಲ್ಲ. ಹೌದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಲ್ಲದೆ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ.
ಮೇ 7ರಂದು ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಮೇ 12 ರಂದು ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಇದೀಗ ಇವರ ಸ್ಥಾನ ಯಾರು ತುಂಬುತ್ತಾರೆ ಎಂಬುವುದೇ ದೊಡ್ಡ ಸವಾಲು. ಈ ಆಧುನಿಕ ದಿಗ್ಗಜರಿಂದ ತೆರವಾದ ಸ್ಥಾನಗಳಿಗೆ ಬಿಸಿಸಿಐ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಸಹ ದೊಡ್ಡ ಕುತೂಹಲವೂ ಆಗಿದೆ. ಹಾಗಿದ್ದರೆ ಇಂಗ್ಲೆಂಡ್ ಸರಣಿಗೆ ಭಾರತದ ಸಂಭಾವ್ಯ ತಂಡ ಹೇಗಿರಲಿದೆ? ಇಲ್ಲಿದೆ ವಿವರ.
ಸಾಯಿ ಸುದರ್ಶನ್ಗೆ ಅವಕಾಶ
ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದು ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ ಜೈಸ್ವಾಲ್ ಸಹ ಆಟಗಾರ ಯಾರು ಎನ್ನುವುದೇ ದೊಡ್ಡ ಪ್ರಶ್ನೆ. ರೋಹಿತ್ ಶರ್ಮಾ ಅಲಭ್ಯರಾಗಿದ್ದು, ಅವರ ಸ್ಥಾನಕ್ಕೆ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಬಹುದು. ಐಪಿಎಲ್ನಲ್ಲೂ ಮಿಂಚುತ್ತಿರುವ ಸುದರ್ಶನ್, ದೀರ್ಘಕಾಲದಿಂದ ಬ್ಯಾಕಪ್ ಓಪನರ್ ಆಗಿ ಪರಿಗಣನೆಗೆ ಒಳಗಾಗುತ್ತಿದ್ದರು. ಇದೀಗ ಪ್ರಮುಖ ತಂಡ ಮತ್ತು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.
2024–25ರ ರಣಜಿ ಟ್ರೋಫಿಯಲ್ಲೂ 76ರ ಸರಾಸರಿಯಲ್ಲಿ 304 ರನ್ ಗಳಿಸಿದ್ದ ಸುದರ್ಶನ್ ಪ್ರಸಕ್ತ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಪರ 11 ಪಂದ್ಯಗಳಲ್ಲಿ 509 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಆರಂಭಿಕ ಆಟಗಾರನಾದರೂ ಅನುಭವಿ ಎಂಬ ಕಾರಣಕ್ಕೆ ಮಧ್ಯಮ ಕ್ರಮಾಂಕ ಅವರಿಗೆ ಫಿಕ್ಸ್ ಮಾಡಬಹುದು. ಶುಭ್ಮನ್ ಗಿಲ್ ಸಹ ಓಪನರ್ ಆದ್ರೂ ಅವರಿಗೆ ಮೂರನೇ ಸ್ಥಾನ ಫಿಕ್ಸ್ ಆಗಿದೆ. ಸಾಯಿ ಸುದರ್ಶನ್ ಭಾರತ ಎ ತಂಡಗಳಲ್ಲಿ ಸ್ಥಾನ ಗಳಿಸಿ ಮಿಂಚಿದ್ದಾರೆ.
2023ರಿಂದ ಟೆಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿ 37ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿರುವ ಶುಭ್ಮನ್ ಗಿಲ್, ಅದೇ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಜೊತೆಗೆ ಗಿಲ್ ಅವರನ್ನೇ ನಾಯಕನನ್ನಾಗಿ ನೇಮಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಕೊಹ್ಲಿಯಿಂದ ತೆರವಾದ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಆಯ್ಕೆಯಾಗಲಿದ್ದಾರೆ. ಅವರು ಕೂಡ ಸಮರ್ಥ ಆಟಗಾರ. ಈ ಸ್ಥಾನಕ್ಕೆ ಪ್ರಬಲ ಸ್ಫರ್ಧಿಯೂ ಹೌದು. ಐದನೇ ಸ್ಥಾನದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಲಿದ್ದಾರೆ. ಬಳಿಕ ವಿಕೆಟ್ ಕೀಪರ್ ರಿಷಭ್ ಪಂತ್ ಆಡುವುದು ಖಚಿತ.
ಮಧ್ಯಮ ಕ್ರಮಾಂಕಕ್ಕೆ ಬ್ಯಾಕಪ್ ಆಟಗಾರರಾಗಿ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಆಯ್ಕೆಯಾಗಲಿದ್ದಾರೆ. ಜುರೆಲ್ ಬ್ಯಾಕಪ್ ವಿಕೆಟ್ ಕೀಪರ್ ಕೂಡ ಹೌದು. ಇನ್ನು ವೇಗದ ಆಲ್ರೌಂಡರ್ ಆಗಿ ನಿತೀಶ್ ಕುಮಾರ್ ರೆಡ್ಡಿ ಮತ್ತು ಸ್ಪಿನ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಸ್ಥಾನ ಭದ್ರ. ಅಲ್ಲದೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಸಹ ಈ ಸೀರೀಸ್ನ ಭಾಗವಾಗಲಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಹರ್ಷಿತ್ ರಾಣಾ ಅವರು ವೇಗಿಗಳ ಕೋಟಾದಲ್ಲಿ ಸ್ಥಾನ ಪಡೆಯಬಹುದು. ಒಂದು ವೇಳೆ ಸಿರಾಜ್ಗೆ ಕೊಕ್ ಕೊಟ್ಟರೆ ಪ್ರಸಿದ್ಧ್ ಕೃಷ್ಣಗೆ ಚಾನ್ಸ್ ಸಿಗಬಹುದು.
ಇಂಗ್ಲೆಂಡ್ ಸರಣಿಗೆ ಭಾರತದ ಸಂಭಾವ್ಯ ತಂಡ
ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ನಿತೀಶ್ ಕುಮಾರ್ ರೆಡ್ಡಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ.