ನೆದರ್ಲೆಂಡ್ಸ್ ವಿರುದ್ಧದ ಅಭ್ಯಾಸ ಪಂದ್ಯವೂ ಮಳೆಯಿಂದ ರದ್ದು; ವಾರ್ಮ್‌ಅಪ್ ಇಲ್ಲದೆ ವಿಶ್ವಕಪ್ ಆಡಲಿದೆ ಭಾರತ
ICC Cricket World Cup 2023: ತವರಿನಲ್ಲೇ ವಿಶ್ವಕಪ್‌ಗೆ ಫೇವರೆಟ್ ತಂಡವಾಗಿ ಕಾಲಿಡುತ್ತಿರುವ ಭಾರತ ತಂಡವು, ಒಂದೇ ಒಂದು ಅಭ್ಯಾಸ ಪಂದ್ಯವನ್ನೂ ಆಡದೆ ಟೂರ್ನಿಯಲ್ಲಿ ಆಡಬೇಕಿದೆ.

ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಅಭ್ಯಾಸ ಪಂದ್ಯವು ಭಾರಿ ಮಳೆಯಿಂದಾಗಿ ರದ್ದುಗೊಂಡಿದೆ. ತಿರುವನಂತಪುರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇಲ್ಲಿನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ರದ್ದುಪಡಿಸಲಾಗಿದೆ. ಪಂದ್ಯದಲ್ಲಿ ಕನಿಷ್ಠ ಟಾಸ್ ಪ್ರಕ್ರಿಯೆ ಕೂಡಾ ನಡೆದಿಲ್ಲ.
ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಭಾರತದ ಮೊದಲ ಅಭ್ಯಾಸ ಪಂದ್ಯ ಕೂಡಾ ಮಳೆಯಿಂದಾಗಿ ರದ್ದಾಗಿತ್ತು. ಆ ಪಂದ್ಯವು ಟಾಸ್ ಪ್ರಕ್ರಿಯೆ ನಡೆದ ಬಳಿಕ ನಿಂತಿತ್ತು. ಆದರೆ, ಇಂದಿನ ಪಂದ್ಯವು ಟಾಸ್ ಇಲ್ಲದೆಯೇ ರದ್ದಾಗಿದೆ. ತವರಿನಲ್ಲೇ ವಿಶ್ವಕಪ್‌ಗೆ ಫೇವರೆಟ್ ತಂಡವಾಗಿ ಕಾಲಿಡುತ್ತಿರುವ ಭಾರತವು, ಒಂದೇ ಒಂದು ಅಭ್ಯಾಸ ಪಂದ್ಯವನ್ನೂ ಆಡದೆ, ಮುಖ್ಯ ಟೂರ್ನಿಯಲ್ಲಿ ಆಡಬೇಕಿದೆ.
ಕೇರಳದ ರಾಜಧಾನಿ ತಿರುವನಂತಪುರದಲ್ಲಿ ನಡೆಯುತ್ತಿರುವ ಎಲ್ಲಾ ಅಭ್ಯಾಸ ಪಂದ್ಯಗಳಿಗೂ ಮಳೆ ಅಡ್ಡಿಪಡಿಸಿದೆ. ಇಂದು ಕೂಡಾ ಎಡೆಬಿಡದೆ ಸುರಿದ ಮಳೆಯಿಂದಾಗಿ ಅಭ್ಯಾಸ ಪಂದ್ಯವು ಟಾಸ್ ಇಲ್ಲದೆ, ಒಂದೇ ಒಂದು ಎಸೆತ ಕಾಣದೆ ರದ್ದುಗೊಳಿಸಲಾಯಿತು.
ಭಾರತವು ಮುಂದೆ ಅಭ್ಯಾಸ ಪಂದ್ಯವನ್ನೇ ಆಡದೆ ನೇರವಾಗಿ ಚೆನ್ನೈಗೆ ಪ್ರಯಾಣಿಸಲಿದೆ. ರೋಹಿತ್ ಶರ್ಮಾ ಬಳಗವು ಅಕ್ಟೋಬರ್ 8ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ನೆದರ್ಲೆಂಡ್ಸ್ ತಂಡವು ಮುತ್ತಿನ ನಗರಿ ಹೈದರಾಬಾದ್‌ಗೆ ಪ್ರಯಾಣಿಸಲಿದೆ. ಅಕ್ಟೋಬರ್ 6ರಂದು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಆಡಲಿದೆ.
ಅಕ್ಟೋಬರ್ 5ರ ಗುರುವಾರ ನಡೆಯುವ ಏಕದಿನ ವಿಶ್ವಕಪ್‌ಗೆ ಅದ್ಧೂರಿ ಚಾಲನೆ ಸಿಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದ್ದು, 2019ರ ವಿಶ್ವಕಪ್‌ನ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್
