IND vs NZ 2nd Test: ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್ಗೂ ಮಳೆ ಕಾಟ ಇದೆಯೇ; ಹೇಗಿದೆ ಪಿಚ್ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ 11?
IND vs NZ 2nd Test: ಬೆಂಗಳೂರು ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳ ನಿರಾಶಾದಾಯಕ ಸೋಲಿನ ನಂತರ 2ನೇ ಟೆಸ್ಟ್ಗೆ ಭಾರತ ತಂಡ ಸಜ್ಜಾಗಿದೆ. 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ಲೇಯಿಂಗ್ 11, ಹವಾಮಾನ ಮತ್ತು ಪಿಚ್ ವರದಿ ಇಲ್ಲಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳ ನಿರಾಶಾದಾಯಕ ಸೋಲಿನ ನಂತರ ಭಾರತ ತಂಡವು, ಇದೀಗ 2ನೇ ಟೆಸ್ಟ್ಗೆ ತಯಾರಿ ನಡೆಸುತ್ತಿದೆ. ಮುಂದಿನ ಪಂದ್ಯಕ್ಕೂ ಮುನ್ನ ಪುಣೆಗೆ ಆಗಮಿಸಿರುವ ರೋಹಿತ್ ಪಡೆ ಅಂತಿಮ ಹಂತದ ತಯಾರಿಯಲ್ಲಿ ತೊಡಗಿದೆ. ಸೋಲಿಗೆ ತಿರುಗೇಟು ನೀಡಿ ಸಮಬಲ ಸಾಧಿಸುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೆಸ್ಟ್ ಫೈನಲ್ ಹಾದಿ ಸುಗಮ ಮಾಡಿಕೊಳ್ಳಲು ಆತಿಥೇಯರು ಉತ್ಸುಕರಾಗಿದ್ದಾರೆ. ಈ ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಪ್ರಥಮ ಟೆಸ್ಟ್‌ನಲ್ಲಿ ಚಿನ್ನಸ್ವಾಮಿ ಪಿಚ್ ಭಾರತಕ್ಕೆ ದೊಡ್ಡ ಸವಾಲು ನೀಡಿತ್ತು. ಇಲ್ಲಿ ಪಂದ್ಯಕ್ಕೂ ಮುನ್ನ ಕಳೆದ 2 ದಿನಗಳಿಂದಲೂ ಮಳೆ ಕಾರಣ ಪಿಚ್ ತೇವವಾಗಿದೆ ಎಂದು ತಿಳಿದಿದ್ದರೂ ಟಾಸ್ ಗೆದ್ದಿದ್ದ ರೋಹಿತ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಬಲಿಷ್ಠ ವೇಗಿಗಳಿಗಿರುವ ನ್ಯೂಜಿಲೆಂಡ್‌ಗೆ ಇದು ವರದಾನವಾಯಿತು. ಭಾರತ ತಂಡ 46ಕ್ಕೆ ಆಲೌಟ್ ಆಗಿ ಸೋಲಿಗೆ ಮುನ್ನುಡಿ ಬರೆದುಕೊಂಡಿತು. ಪಿಚ್ ತೇವಾಂಶ ಆಗಿರುವ ಕುರಿತು ಅರಿವಿದ್ದರೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಪಂದ್ಯ ಕೈಚೆಲ್ಲಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ 2ನೇ ಟೆಸ್ಟ್ಗೂ ಮುನ್ನ ಪಿಚ್ ಬಗ್ಗೆ ಚರ್ಚೆ ನಡೆಯುತ್ತಿದೆ.
ಭಾರತ ತಂಡವು ತವರಿನ ಲಾಭ ಪಡೆಯಲು ಸಜ್ಜಾಗಿದ್ದು, ಅದರಂತೆ ಟರ್ನಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ನೋಡಿದಕ್ಕಿಂತ ಪುಣೆಯಲ್ಲಿನ ಮೇಲ್ಮೈ ಕಡಿಮೆ ಬೌನ್ಸ್ ಇರುತ್ತದೆ. ಎಂಸಿಎ ಸ್ಟೇಡಿಯಂನಲ್ಲಿ ಕಪ್ಪು ಮಣ್ಣಿನ ಟ್ರ್ಯಾಕ್ ಆಗಿದ್ದು, ಸ್ಪಿನ್ಗೆ ನೆರವಾಗಲಿದೆ. ಇದರೊಂದಿಗೆ ಭಾರತ ತಂಡ, ಎದುರಾಳಿಗೆ ಸ್ಪಿನ್ ಬಲೆ ಬಿಗಿಗೊಳಿಸುವ ನಿರೀಕ್ಷೆಯಲ್ಲಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಜೊತೆಗೆ ಅಕ್ಷರ್ ಅಥವಾ ಕುಲ್ದೀಪ್ ಈ ಮೂವರು ಸ್ಪಿನ್ನರ್ಸ್ ಕಣಕ್ಕಿಳಿಸಲು ಮ್ಯಾನೇಜ್ಮೆಂಟ್ ಸಿದ್ದತೆ ನಡೆಸಿದೆ.
ಮುಂದಿನ ತಿಂಗಳು ಆಸ್ಟ್ರೇಲಿಯ ಪ್ರವಾಸ ಇರುವುದರಿಂದ ಅದಕ್ಕೆ ತಯಾರಾಗುವ ಸಲುವಾಗಿ ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪೇಸ್ ಪಿಚ್ ಸಿದ್ಧಪಡಿಸಿತ್ತು. ಆದರೆ, ದುರ್ಬಲ ಬಾಂಗ್ಲಾದೇಶದ ವಿರುದ್ಧ ಮೇಲುಗೈ ಸಾಧಿಸಿದರೂ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಪೇಸ್ ತಂತ್ರ ಫಲಿಸದ ಕಾರಣ ಸ್ಪಿನ್ ಟ್ರ್ಯಾಕ್ಗೆ ಒತ್ತು ನೀಡಲಾಗಿದೆ. ಡಬ್ಲ್ಯುಟಿಸಿ ಫೈನಲ್ ಸ್ಥಾನದ ರೇಸ್‌ನಲ್ಲಿರಲು ಟೀಮ್ ಇಂಡಿಯಾಕ್ಕೆ ಪುಣೆ ಟೆಸ್ಟ್ ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ರೋಹಿತ್ ಶರ್ಮಾ, ಗೌತಮ್ ಗಂಭೀರ್ ಅವರು ಪ್ರಯೋಗಗಳ ಬದಲು ಬಲಿಷ್ಠ ಸ್ಪಿನ್ ತಂತ್ರವನ್ನು ಅಳವಡಿಸುವ ನಿರೀಕ್ಷೆಯಿದೆ. ಭಾರತ ಇಬ್ಬರು ವೇಗಿಗಳು, ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಲಿದೆ.
ಪುಣೆ ಹವಾಮಾನ ವರದಿ ಹೇಗಿದೆ?
ಪುಣೆಯಲ್ಲಿ ಹವಾಮಾನ ವರದಿ, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದಿಲ್ಲ ಎಂದು ಹೇಳುತ್ತಿದೆ. ತಾಪಮಾನ 24° ಸೆಲ್ಸಿಯಸ್ನಿಂದ 33° ಸೆಲ್ಸಿಯಸ್ ಇರುತ್ತದೆ. ಪಂದ್ಯ ಮುಂದುವರೆದಂತೆ ತೇವಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಮಳೆಯು ಮಹತ್ವದ ಪಾತ್ರವನ್ನು ವಹಿಸುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಯಾವುದೇ ಅಡೆತಡೆ ಇಲ್ಲದೆ, ಸಂಪೂರ್ಣ ಪಂದ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮೊದಲ ದಿನ ಶೇ 4ರಷ್ಟು ಮಳೆಯಾಗುವ ನಿರೀಕ್ಷೆ ಇದೆ. 2ನೇ ದಿನ ಶೇ 0, ಮೂರನೇ ದಿನ 1, ನಾಲ್ಕನೇ ದಿನ 5ರಷ್ಟು, 5ನೇ ದಿನ 10ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಬಲವಾಗಿ ಪುಟಿದೇಳುವ ಒತ್ತಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಭಾರತ, ಸ್ಪಿನ್ಗಳನ್ನೇ ಹೆಚ್ಚು ನೆಚ್ಚಿಕೊಂಡಿದೆ.
ಭಾರತದ ಸಂಭಾವ್ಯ XI: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್/ವಾಷಿಂಗ್ಟನ್ ಸುಂದರ್/ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್ ಸಂಭಾವ್ಯ XI: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ವಿಲಿಯಂ ಓ'ರೂರ್ಕ್, ಅಜಾಜ್ ಪಟೇಲ್, ಮ್ಯಾಟ್ ಹೆನ್ರಿ.