ಇಂಡೋ-ಕಿವೀಸ್ 3ನೇ ಟೆಸ್ಟ್; ಜಡೇಜಾ ಮತ್ತೆ ಮಿಂಚು, ನ್ಯೂಜಿಲೆಂಡ್ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ಕಿವೀಸ್ 3ನೇ ಟೆಸ್ಟ್; ಜಡೇಜಾ ಮತ್ತೆ ಮಿಂಚು, ನ್ಯೂಜಿಲೆಂಡ್ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಭಾರತ

ಇಂಡೋ-ಕಿವೀಸ್ 3ನೇ ಟೆಸ್ಟ್; ಜಡೇಜಾ ಮತ್ತೆ ಮಿಂಚು, ನ್ಯೂಜಿಲೆಂಡ್ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಭಾರತ

India vs New Zeland 3rd Test: ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಹಿಡಿತ ಸಾಧಿಸಿದೆ.

ಇಂಡೋ-ಕಿವೀಸ್ 3ನೇ ಟೆಸ್ಟ್; ಜಡೇಜಾ ಮತ್ತೆ ಮಿಂಚು, ನ್ಯೂಜಿಲೆಂಡ್ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಭಾರತ
ಇಂಡೋ-ಕಿವೀಸ್ 3ನೇ ಟೆಸ್ಟ್; ಜಡೇಜಾ ಮತ್ತೆ ಮಿಂಚು, ನ್ಯೂಜಿಲೆಂಡ್ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಭಾರತ (Nitin Lawate)

ಮೊದಲ 3 ಟೆಸ್ಟ್​ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್​​ನಲ್ಲಿ 5 ವಿಕೆಟ್ ಪಡೆದಿದ್ದ ರವೀಂದ್ರ ಜಡೇಜಾ, ಕಿವೀಸ್​ನ ಎರಡನೇ ಇನ್ನಿಂಗ್ಸ್​ನಲ್ಲೂ 4 ವಿಕೆಟ್ ಪಡೆದು ಮತ್ತೆ ಕಾಡಿದ್ದಾರೆ. ಸದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯವು ರೋಚಕ ಘಟ್ಟ ತಲುಪಿದಿದೆ. ಎರಡು ತಂಡಗಳು ಜಯ ಸಾಧಿಸಲು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ಮೊದಲ ಇನ್ನಿಂಗ್ಸ್​​ನಲ್ಲಿ 28 ರನ್​ ಮುನ್ನಡೆ ಸಾಧಿಸಿದ್ದ ಭಾರತ, ಕಿವೀಸ್​ನ ಎರಡನೇ ಇನ್ನಿಂಗ್ಸ್​ನಲ್ಲೂ ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಮೂಲಕ ಗಮನ ಸೆಳೆದಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ 235 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 263 ರನ್ ಕಲೆ ಹಾಕಿ 28 ರನ್​ಗಳ ಮುನ್ನಡೆ ಸಾಧಿಸಿತ್ತು. ಈ ಹಿನ್ನಡೆಯೊಂದಿಗೆ ಕಿವೀಸ್ 2ನೇ ಇನ್ನಿಂಗ್ಸ್ ಆರಂಭಿಸಿತು. ಆದರೆ ಸ್ಪಿನ್ನರ್​ಗಳ ದಾಳಿಗೆ ಮತ್ತೆ ಹಿನ್ನಡೆ ಪ್ರವಾಸಿ ತಂಡ 2ನೇ ದಿನದ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು 171 ರನ್​ ಗಳಿಸಿದೆ. ಆ ಮೂಲಕ 143 ರನ್​ಗಳ ಮುನ್ನಡೆ ಸಾಧಿಸಿದೆ. ಇನ್ನೊಂದು ವಿಕೆಟ್ ಉಳಿದಿದ್ದು, 3ನೇ ದಿನದಂದು ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಬ್ಲ್ಯಾಕ್ ಕ್ಯಾಪ್ಸ್​ ಪರ ಮತ್ತೆ ವಿಲ್ ಯಂಗ್ ಮಿಂಚಿದ್ದು, ಸತತ 2ನೇ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 100 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್​ ಸಹಿತ 51 ರನ್ ಗಳಿಸಿದರು.

ಮತ್ತೆ ಮಿಂಚಿದ ಸ್ಪಿನ್ನರ್​​ಗಳು

ಟೀಮ್ ಇಂಡಿಯಾ ಪರ ಜಡೇಜಾ 4 ಹಾಗೂ ಅಶ್ವಿನ್ 3 ವಿಕೆಟ್ ಪಡೆದರು. ಉಳಿದಂತೆ ಆಕಾಶ್ ದೀಪ್ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಸಾಥ್ ನೀಡಿದ್ದಾರೆ. ಕೇವಲ ಭಾರತ ಮಾತ್ರವಲ್ಲ, ನ್ಯೂಜಿಲೆಂಡ್ ತಂಡದ ಸ್ಪಿನ್ನರ್​ಗಳು ಸಹ ಮಿಂಚಿದರು. ಅಜಾಜ್ ಪಟೇಲ್ 5 ವಿಕೆಟ್ ಉರುಳಿಸಿದರೆ, ಗ್ಲೆನ್ ಫಿಲಿಪ್ಸ್, ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು. ಇದೀಗ ಮೊದಲ ಎರಡು ದಿನಗಳು ಸಹ ಸ್ಪಿನ್ನರ್​ಗಳೇ ದರ್ಬಾರ್ ನಡೆಸಿದ್ದು, ಮೂರನೇ ದಿನವೂ ಮತ್ತೆ ಅವರೇ ಮಿಂಚುವ ನಿರೀಕ್ಷೆ ಇದೆ. ಹೀಗಾಗಿ ಭಾರತ ತಂಡವು ಎಚ್ಚರಿಕೆಯಿಂದ ಹೋರಾಟ ನಡೆಸಬೇಕಿದೆ. ಕೊಂಚ ಎಡವಟ್ಟಾದರೂ ತವರಿನಲ್ಲಿ ಹ್ಯಾಟ್ರಿಕ್ ಸೋಲು ಕಾಣಬೇಕಾಗುತ್ತದೆ.

ಭಾರತದ 2ನೇ ಇನ್ನಿಂಗ್ಸ್ ಹೇಗಿತ್ತು?

ಟೀಮ್ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ 86 ರನ್ ಗಳಿಸಿ 4 ವಿಕೆಟ್ ನಷ್ಟವಾಗಿತ್ತು. ಇದೇ ಸ್ಕೋರ್​ನಿಂದ ಭಾರತ 2ನೇ ದಿನದಾಟ ಆರಂಭಿಸಿತು. ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಸೇರಿ 96 ರನ್​ಗಳ ಪಾಲುದಾರಿಕೆ ಒದಗಿಸಿದರು. ಇದೇ ವೇಳೆ ಪಂತ್, ವೇಗದ ಅರ್ಧಶತಕ ಸಿಡಿಸಿದರು. 36 ಎಸೆತಗಳಲ್ಲಿ 50 ರನ್ ಪೂರೈಸಿದರು. ಅಂತಿಮವಾಗಿ 59 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 60 ರನ್ ಬಾರಿಸಿದರು. ಮತ್ತೊಂದೆಡೆ ಗಿಲ್ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಮುನ್ನಡೆಸಿದರು. ಆದರೆ ಶತಕದ ಅಂಚಿನಲ್ಲಿ ಎಡವಿದರು. 146 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 90 ರನ್ ಬಾರಿಸಿ ಅಜಾಜ್ ಪಟೇಲ್​ ಬೌಲಿಂಗ್​ನಲ್ಲಿ ಔಟಾದರು. ಆ ಬಳಿಕ ರವೀಂದ್ರ ಜಡೇಜಾ 14, ಸರ್ಫರಾಜ್ ಖಾನ್ 0, ವಾಷಿಂಗ್ಟನ್ ಸುಂದರ್ ಅಜೇಯ 38 ರನ್ ಗಳಿಸಿದರು. ಇದರೊಂದಿಗೆ 263 ರನ್​ ಗಳಿಸಿ 28 ರನ್​ಗಳ ಮುನ್ನಡೆ ಸಾಧಿಸಿತು.

ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಕಳಪೆ ಆರಂಭ ಪಡೆಯಿತು. ಆರಂಭಿಕ ಓವರ್​​ನಲ್ಲೇ ಆಕಾಶ್ ದೀಪ್ ಅವರು ಟಾಮ್ ಲಾಥಮ್ ಅವರನ್ನು ಔಟ್ ಮಾಡಿದರು. ಡೆವೋನ್ ಕಾನ್ವೆ (22) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ರಚಿನ್ ರವೀಂದ್ರ (4) ಸಹ ಬೇಗನೇ ಔಟಾದರು. ಡ್ಯಾರಿಲ್ ಮಿಚೆಲ್ (21), ಟಾಮ್ ಬ್ಲಂಡೆಲ್ (4), ಗ್ಲೆನ್ ಫಿಲಿಪ್ಸ್ (26), ಇಶ್ ಸೋಧಿ (8), ಮ್ಯಾಟ್ ಹೆನ್ರಿ (10) ನಿರಾಸೆ ಮೂಡಿಸಿದರು. 51 ರನ್ ಸಿಡಿಸಿದ ವಿಲ್ ಯಂಗ್ ಹೋರಾಟ ನಡೆಸಿದರು. ಜಡೇಜಾ 4 ವಿಕೆಟ್, ಅಶ್ವಿನ್ 3, ಸುಂದರ್, ಆಕಾಶ್ ದೀಪ್ ತಲಾ 1 ವಿಕೆಟ್ ಪಡೆದರು. 2ನೇ ದಿನದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿದ್ದು, 141 ರನ್​ಗಳ ಮುನ್ನಡೆ ಪಡೆದಿದೆ.

Whats_app_banner