ವಿಶ್ವದಾಖಲೆಯ ವೀಕ್ಷಣೆ ಪಡೆದ ಇಂಡೋ-ಪಾಕ್ ಪಂದ್ಯ; ಐಪಿಎಲ್ ಫೈನಲ್​ ದಾಖಲೆ ಛಿದ್ರ!
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವದಾಖಲೆಯ ವೀಕ್ಷಣೆ ಪಡೆದ ಇಂಡೋ-ಪಾಕ್ ಪಂದ್ಯ; ಐಪಿಎಲ್ ಫೈನಲ್​ ದಾಖಲೆ ಛಿದ್ರ!

ವಿಶ್ವದಾಖಲೆಯ ವೀಕ್ಷಣೆ ಪಡೆದ ಇಂಡೋ-ಪಾಕ್ ಪಂದ್ಯ; ಐಪಿಎಲ್ ಫೈನಲ್​ ದಾಖಲೆ ಛಿದ್ರ!

India vs Pakistan: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರೋಚಕತೆ ಹುಟ್ಟುಹಾಕಿದ್ದ ಭಾರತ-ಪಾಕಿಸ್ತಾನ ಪಂದ್ಯವು ಹೊಸದೊಂದು ದಾಖಲೆ ಬರೆದಿದೆ. ಈ ಹಿಂದಿದ್ದ ದಾಖಲೆಗಳನ್ನು ಅಳಿಸಿಹಾಕಿದೆ.

ಗೆಲುವಿನ ಬಳಿಕ ಭಾರತ-ಪಾಕಿಸ್ತಾನ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಂಡರು.
ಗೆಲುವಿನ ಬಳಿಕ ಭಾರತ-ಪಾಕಿಸ್ತಾನ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಂಡರು.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭಾರತ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ರಣ ರೋಚಕ ಪಂದ್ಯದಲ್ಲಿ ರೋಹಿತ್​ ಪಡೆ, ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿತು.

ಟೂರ್ನಿಯಲ್ಲಿ ಸತತ 3ನೇ ಗೆಲುವು ಸಾಧಿಸಿದ ಟೀಮ್ ಇಂಡಿಯಾ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಅಲ್ಲದೆ, ಪಾಕಿಸ್ತಾನ ವಿರುದ್ಧ ವಿಶ್ವಕಪ್​​​ನಲ್ಲಿ ಸತತ 8ನೇ ಗೆಲುವಿಗೆ ಮುತ್ತಿಕ್ಕಿತು. ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರೋಚಕತೆ ಹುಟ್ಟುಹಾಕಿದ್ದ ಈ ಪಂದ್ಯವು ಹೊಸದೊಂದು ದಾಖಲೆ ಬರೆದಿದೆ. ಈ ಹಿಂದಿದ್ದ ದಾಖಲೆಗಳನ್ನು ಅಳಿಸಿಹಾಕಿದೆ.

ವೀಕ್ಷಣೆಯಲ್ಲಿ ವಿಶ್ವದಾಖಲೆ

ಇಂಡೋ-ಪಾಕ್​ ಪಂದ್ಯವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ 3.5 ಕೋಟಿ ವೀಕ್ಷಣೆ ಕಂಡಿದೆ. ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ ಇತಿಹಾಸದಲ್ಲೇ ಇದು ದಾಖಲೆಯ ವೀಕ್ಷಣೆ. ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಜಾಗತಿಕ ದಾಖಲೆ ಬರೆದಿದೆ. ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಪಂದ್ಯದ ಅಧಿಕ ವೀಕ್ಷಣೆ ಪಡೆದ ಮೊದಲ ಪಂದ್ಯವಾಗಿದೆ.

ಐಪಿಎಲ್ ಫೈನಲ್​ ದಾಖಲೆ ಛಿದ್ರ

ಭಾರತ-ಪಾಕಿಸ್ತಾನ ದಾಖಲೆಯ ವೀಕ್ಷಣೆ ಪಡೆಯುವ ಮೂಲಕ ಐಪಿಎಲ್ ಫೈನಲ್ ಪಂದ್ಯದ ದಾಖಲೆಯನ್ನು ಮುರಿದಿದೆ. ಐಪಿಎಲ್​ ಫೈನಲ್​ನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಮತ್ತು ಹಾರ್ದಿಕ್ ನೇತೃತ್ವದ ಗುಜರಾತ್ ಟೈಟಾನ್ಸ್​ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು 3.2 ಕೋಟಿ ಜನರು ವೀಕ್ಷಿಸಿ ದಾಖಲೆ ಬರೆದಿತ್ತು.

ಏಷ್ಯಾಕಪ್​​ನಲ್ಲಿ 2.8 ಕೋಟಿ ವೀಕ್ಷಣೆ

ಕಳೆದ ತಿಂಗಳು ಸೆಪ್ಟೆಂಬರ್​​​ನಲ್ಲಿ ನಡೆದ ಏಷ್ಯಾಕಪ್​​ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯವು 2.8 ಕೋಟಿ ವೀಕ್ಷಣೆ ಪಡೆದಿತ್ತು. 2019ರ ವಿಶ್ವಕಪ್​​ನ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಸೆಮಿಫೈನಲ್ ಪಂದ್ಯವನ್ನು 2.53 ಕೋಟಿ ಜನರು ವೀಕ್ಷಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಇದು ಹೊಸ ವಿಶ್ವದಾಖಲೆ ಬರೆದಿತ್ತು.

ಬಾರ್ಕ್​​ನಿಂದ ಸಮೀಕ್ಷೆ

ಭಾರತ-ಪಾಕಿಸ್ತಾನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಟಿವಿ ಪ್ರೇಕ್ಷಕರ ಅಂಕಿ-ಅಂಶಗಳನ್ನು ದಾಖಲಿಸುವ ಸಂಸ್ಥೆಯಾದ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಸಮೀಕ್ಷೆ ನಡೆಸಲಿದೆ. ಈ ವಾರದ ಅಂತ್ಯದ ವೇಳೆಗೆ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಿದೆ.

ಡಿಸ್ನಿಯಿಂದ ಉಚಿತ ವೀಕ್ಷಣೆ

ಐಪಿಎಲ್​​ನಲ್ಲಿ ಜಿಯೋಸಿನಿಮಾ ಅಭಿಮಾನಿಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ನೀಡಿತ್ತು. ಇದು ಡಿಜಿಟಲ್ ಫ್ಲಾಟ್​ ಫಾರಂನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿತ್ತು. ಹಾಗಾಗಿ ಹಾಟ್​ಸ್ಟಾರ್ ಚಂದಾದಾರರ ಸಂಖ್ಯೆ ಗಣನೀಯ ಇಳಿಕೆ ಕಂಡಿತ್ತು. ಇದೀಗ ವಿಶ್ವಕಪ್​ ನೇರಪ್ರಸಾರದ ಹಕ್ಕನ್ನು ಪಡೆದಿರುವ ಹಾಟ್​ಸ್ಟಾರ್​ ಉಚಿತ ವೀಕ್ಷಣೆಗೆ ಅವಕಾಶ ನೀಡಿದೆ.

Whats_app_banner