ಕನ್ನಡ ಸುದ್ದಿ  /  Cricket  /  India Vs Pakistan Icc T20 World Cup 2024 Ticket Prices Soar To 1.86 Crore More Than Thrice Of Odi World Cup New York Prs

ಇಂಡೋ-ಪಾಕ್ ಪಂದ್ಯದ ಟಿಕೆಟ್ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ; 1 ಟಿಕೆಟ್ ದರ ಲಕ್ಷ-ಕೋಟಿ ರೂಪಾಯಿಗಳಲ್ಲಿ!

India vs Pakistan : ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ 2024 ಪಂದ್ಯದ ಟಿಕೆಟ್​ ಬೆಲೆಗಳು ಲಕ್ಷ ಮತ್ತು ಕೋಟಿಗಳಿಗೆ ಏರಿದೆ. ಕನಿಷ್ಠ ಮತ್ತು ದುಬಾರಿ ಟಿಕೆಟ್ ಎಷ್ಟು? ಇಲ್ಲಿದೆ ವಿವರ.

ಇಂಡೋ-ಪಾಕ್ ಪಂದ್ಯದ ಟಿಕೆಟ್ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ
ಇಂಡೋ-ಪಾಕ್ ಪಂದ್ಯದ ಟಿಕೆಟ್ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ

ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಮೆಗಾ ಈವೆಂಟ್​ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಪಂದ್ಯಗಳ ಟಿಕೆಟ್​ಗಳ ಖರೀದಿಗೆ ಐಸಿಸಿ ಅವಕಾಶ ನೀಡಿದ್ದು, ಬಹುತೇಕ ಟಿಕೆಟ್​ಗಳು ಮಾರಾಟವಾಗಿವೆ. ಅದರಲ್ಲೂ ವಿಶೇಷವಾಗಿ ಸಾಂಪ್ರಾದಾಯಿಕ ಎದುರಾಳಿ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಬೆಲೆ ಎಂತಹವರನ್ನೂ ತಲೆ ತಿರುಗುವಂತೆ ಮಾಡಿದೆ.

ಮಾರ್ಚ್​ 22ರಿಂದ ಭಾರತದಲ್ಲಿ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದೆ. ಈ ಶ್ರೀಮಂತ ಟೂರ್ನಿ ಮುಗಿದ ಕೆಲವೇ ದಿನಗಳಲ್ಲಿ ಐಸಿಸಿ ವಿಶ್ವಕಪ್​ ಹಬ್ಬ ಆರಂಭವಾಗಲಿದೆ. ಜೂನ್ 1ರಿಂದ ಮೆಗಾ ಟೂರ್ನಿಗೆ ಚಾಲನೆ ಸಿಗಲಿದ್ದು, ಜೂನ್ 9ರಂದು ಇಂಡೋ-ಪಾಕ್ ಫೈಟ್ ನಡೆಯಲಿದೆ. ಆದರೆ ಇನ್ನೂ ಎಲ್ಲೋ ಇರುವ ಪಂದ್ಯಕ್ಕೆ ನಿರೀಕ್ಷೆ ಹೆಚ್ಚಾಗಿದ್ದು, ಉಭಯ ದೇಶಗಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಮೈದಾನದಲ್ಲೇ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಟಿ20 ವಿಶ್ವಕಪ್ ಪಂದ್ಯಗಳು ಜನಸಾಮಾನ್ಯರ ಕೈಗೆಟಕುವಂತಿದೆ. ಇಂಡೋ-ಪಾಕ್ ಪಂದ್ಯಗಳ ಟಿಕೆಟ್ ಮಾರಾಟ ಹೊರತುಪಡಿಸಿ ಉಳಿದ ಪಂದ್ಯಗಳ ಟಿಕೆಟ್​ ಬೆಲೆ ಭಾರಿ ಕಡಿಮೆ ಇದೆ. ಅಂದರೆ ಕಡಿಮೆ ಬೆಲೆಯ ಟಿಕೆಟ್ 6 ಡಾಲರ್ ಅಂದರೆ ಭಾರತದ ಕರೆನ್ಸಿಯಲ್ಲಿ ಸುಮಾರು 500 ರೂಪಾಯಿಗೆ ನಿಗದಿಪಡಿಸಲಾಗಿದೆ. ಇನ್ನು ವಿಐಪಿ ಮತ್ತು ಪ್ರೀಮಿಯಂ ಟಿಕೆಟ್​​ಗಳು ಅತ್ಯಂತ ದುಬಾರಿಯಾಗಿವೆ. ಅತ್ಯಂತ ದುಬಾರಿ ಟಿಕೆಟ್ ತೆರಿಗೆ ಇಲ್ಲದೆ 2 ಸಾವಿರಕ್ಕೂ ಹೆಚ್ಚಿದೆ. ಈ ಟಿಕೆಟ್​ ಬೆಲೆ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಬೆಲೆ ಕೇಳಿ ಶಾಕ್ ಆಗಿದ್ದಾರೆ.

ಇಂಡೋ-ಪಾಕ್ ಪಂದ್ಯಕ್ಕೆ ಟಿಕೆಟ್​ ಬೆಲೆಯನ್ನು ಐಸಿಸಿ ಹೆಚ್ಚಿಸಿದೆ. ಕನಿಷ್ಠ ಟಿಕೆಟ್ ಬೆಲೆ 14,450 ಮತ್ತು ಗರಿಷ್ಠ ಟಿಕೆಟ್ ಬೆಲೆ 33 ಸಾವಿರ ರೂಪಾಯಿಗೆ ನಿಗದಿಪಡಿಸಿತ್ತು. ಆದರೆ ಇದೇ ದುಬಾರಿ ಆಗುತ್ತಿದೆ ಎನ್ನುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಈ ಪಂದ್ಯಗಳ ಮರುಮಾರಾಟದ ಟಿಕೆಟ್ ಬೆಲೆ ನಿದ್ದೆಗೆಡಿಸಿದೆ. ಸ್ಟಬ್​ಹಬ್ ಮತ್ತು ಸೀಟ್​​ಗೀಕ್​ನಂತಹ ಮರುಮಾರಾಟದ ವೇದಿಕೆಗಳಲ್ಲಿ ಫ್ಯಾನ್ಸ್​ಗೆ ತಲೆ ತಿರುಗುವ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ಟಿಕೆಟ್​​ಗಳನ್ನು ಅವುಗಳ ಆರಂಭಿಕ ಬೆಲೆಗಿಂತ ಹಲವು ಪಟ್ಟುಗಳ ದೊಡ್ಡ ಮೊತ್ತಕ್ಕೆ ಖರೀದಿಸಬೇಕು.

ಅತ್ಯಂತ ದುಬಾರಿ ಟಿಕೆಟ್ 1.86 ಕೋಟಿ

ಒಂದು ಟಿಕೆಟ್​ನ ಅಧಿಕೃತ ಬೆಲೆ 400 ಡಾಲರ್ ಆಗಿದ್ದರೆ, ಮರುಮಾರಾಟ ವೆಬ್‌ಸೈಟ್‌ಗಳಲ್ಲಿ ಇದರ ಬೆಲೆ 40 ಸಾವಿರ ಡಾಲರ್​ ಅಂದರೆ 33 ಲಕ್ಷ ರೂಪಾಯಿಗೂ ಅಧಿಕ. ಪ್ಲಾಟ್‌ಫಾರ್ಮ್ ಮತ್ತು ಇತರೆ ಶುಲ್ಕವನ್ನು ಸೇರಿಸಿದರೆ, ಒಂದು ಟಿಕೆಟ್​ನ ಒಟ್ಟು ಮೊತ್ತ 41 ಲಕ್ಷ ರೂಪಾಯಿಗೂ ಅಧಿಕ. ಇನ್ನು ಅತ್ಯಂತ ದುಬಾರಿ ಟಿಕೆಟ್ ಬೆಲೆ 1,75,000 ಡಾಲರ್ ಆಗಿದೆ. ಅಂದರೆ 1.4 ಕೋಟಿ ರೂಪಾಯಿ. ಈ ಟಿಕೆಟ್​​ಗೆ ಇತರೆ ಶುಲ್ಕಗಳನ್ನು ಸೇರಿಸಿದರೆ ಒಂದು ಟಿಕೆಟ್ ಬೆಲೆ 1.86 ಕೋಟಿ ರೂಪಾಯಿಗೂ ಹೆಚ್ಚು ಆಗಲಿದೆ ಎಂದು ಯುಎಸ್ಎ ಟುಡೆ ವರದಿ ಮಾಡಿದೆ.

ಟಿಕೆಟ್ ಬೆಲೆ ಕೇಳಿದವರು ಪಂದ್ಯವನ್ನು ಮನೆಯಲ್ಲೇ ಅಥವಾ ಮೊಬೈಲ್​ನಲ್ಲೇ ನೋಡುತ್ತೇವೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇಷ್ಟೊಂದು ಹಣ ಸಿಕ್ಕರೆ, ನಮ್ಮ ಲೈಫ್ ಸೆಟಲ್ ಎಂದು ಹೇಳುತ್ತಿದ್ದಾರೆ. ಆದರೆ ಕೆಲವರು ಇದಕ್ಕಿಂತ ಹೆಚ್ಚು ದುಬಾರಿಯಾದರೂ ಸರಿ ಅಷ್ಟು ದುಡ್ಡನ್ನು ಟಿಕೆಟ್ ಖರೀದಿಸಿ ಇಂಡೋ-ಪಾಕ್ ಪಂದ್ಯವನ್ನು ನೋಡುತ್ತೇವೆ ಎಂದು ಹೇಳುವವರೂ ಇದ್ದಾರೆ. ಹಾಗಾಗಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾಳಗಕ್ಕೆ ನಿರೀಕ್ಷೆ ಮತ್ತಷ್ಟು ಏರುವಂತೆ ಮಾಡಿದೆ.