ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆ ಭೀತಿ; ಜೂನ್‌ 9ರ ನ್ಯೂಯಾರ್ಕ್‌ ಹವಾಮಾನ ವರದಿ ಹೀಗಿದೆ

ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆ ಭೀತಿ; ಜೂನ್‌ 9ರ ನ್ಯೂಯಾರ್ಕ್‌ ಹವಾಮಾನ ವರದಿ ಹೀಗಿದೆ

India vs Pakistan: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಜಾಗತಿಕ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಬಹುನಿರೀಕ್ಷಿತ ಪಂದ್ಯದಂದು ನ್ಯೂಯಾರ್ಕ್‌ನಲ್ಲಿ ಮಳೆಯಾಗುವ ಭೀತಿ ಇದೆ. ಜೂನ್‌ 9ರ ಹವಾಮಾನ ವರದಿ ಇಲ್ಲಿದೆ.

ಭಾರತ vs ಪಾಕಿಸ್ತಾನದ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆ ಭೀತಿ
ಭಾರತ vs ಪಾಕಿಸ್ತಾನದ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆ ಭೀತಿ (ICC - X)

ಟಿ20 ವಿಶ್ವಕಪ್‌ 2024ರ (ICC T20 World Cup 2024) ಅತಿರೋಚಕ ಪಂದ್ಯಕ್ಕೆ ಜಾಗತಿಕ ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಈ ಬಾರಿ ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ನಡೆಯುತ್ತಿರುವ ಪಂದ್ಯಾವಾಳಿಯು ನೀರಸವಾಗಿ ಸಾಗುತ್ತಿದ್ದರೂ, ಇಂಡೋ-ಪಾಕ್‌ ಕದನಕ್ಕೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಜೂನ್ 9ರ ಭಾನುವಾರ ಸಂಜೆ ನ್ಯೂಯಾರ್ಕ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಣಕ್ಕಿಳಿಯುತ್ತಿವೆ. ಹೈವೋಲ್ಟೇಜ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಷಣಕ್ಷಣವೂ ರೋಚಕತೆ ಹೆಚ್ಚಿಸುವ ಪಂದ್ಯಕ್ಕೆ ಅಭಿಮಾನಿಗಳ ನಿರೀಕ್ಷೆ ಹೆಚ್ಚುತ್ತಿದ್ದಂತೆಯೇ, ಪಂದ್ಯಕ್ಕೆ ಮಳೆಯ ಆತಂಕ ಕೂಡಾ ಎದುರಾಗಿದೆ. ಸದ್ಯ ದೊರಕಿರುವ ಹವಾಮಾನ ಮುನ್ಸೂಚನೆ ಪ್ರಕಾರ, ವರುಣನ ಸಂಭಾವ್ಯ ಅವಕೃಪೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ನಡೆಯುವುದೇ ಅನುಮಾನವಾಗಿದೆ.

ಟ್ರೆಂಡಿಂಗ್​ ಸುದ್ದಿ

ನ್ಯೂಯಾರ್ಕ್‌ನಲ್ಲಿ ನಿರ್ಮಾಣವಾಗಿರುವ ನೂತನ ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗುತ್ತದೆ. ಆದರೆ, ಪಂದ್ಯಕ್ಕೆ ಮಳೆಯ ಆತಂಕ ಹೆಚ್ಚಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ಟಾಸ್ ಸಮಯದಲ್ಲಿ 40ರಿಂದ 50 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆ ಇದೆ. ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 10:30ಕ್ಕೆ ಪಂದ್ಯ ಆರಂಭವಾಗುತ್ತದೆ. ಹೀಗಾಗಿ ಅಲ್ಲಿ ಮಧ್ಯಾಹ್ನ 1 ಗಂಟೆಗೆ ವೇಳೆಗೆ ಮಳೆಯ ಪ್ರಮಾಣ 10 ಶೇಕಡದಷ್ಟಿದೆ. ಸಂಜೆ 3 ಗಂಟೆ ವೇಳೆ ಮತ್ತೆ 40 ಪ್ರತಿಶತ ಮಳೆಯ ಸಾಧ್ಯತೆ ಇದೆ.

ಜೂನ್ 9ರಂದು ನ್ಯೂಯಾರ್ಕ್ ಹವಾಮಾನ ವರದಿ

ಆಕ್ಯುವೆದರ್ ಪ್ರಕಾರ, ಜೂನ್ 9ರ ಭಾನುವಾರದಂದು 42 ಪ್ರತಿಶತ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಸಮಯದಲ್ಲಿ ತಾಪಮಾನವು ಸುಮಾರು 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆರಂಭ ಸಮಯದಲ್ಲಿ ಮಳೆಯ ಸಂಭಾವ್ಯತೆ ಇರುವುದರಿಂದ ಟಾಸ್ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ. ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ಪಂದ್ಯದಲ್ಲಿ ಮಳೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.

ಈಗಾಗಲೇ ಭಾರತ ತಂಡ ಈ ಮೈದಾನದಲ್ಲಿ ಅಭ್ಯಾಸ ಪಂದ್ಯ ಸೇರಿದಂತೆ ಎರಡು ಪಂದ್ಯಗಳನ್ನಾಡಿದೆ. ಅಮೆರಿಕ ನೆಲಕ್ಕೆ ಉಭಯ ತಂಡಗಳು ಹೊಂದಿಕೊಳ್ಳಲು ಪ್ರಯತ್ನಿಸುತ್ತಿವೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತವು ಎದುರಾಳಿಯನ್ನು ಕೇವಲ 96 ರನ್‌ಗಳಿಗೆ ಆಲೌಟ್ ಮಾಡಿತ್ತು. ಪಾಕಿಸ್ತಾನ ತಂಡವು ಇಲ್ಲಿ ಯಾವುದೇ ಪಂದ್ಯ ಆಡಿಲ್ಲ. ಹೀಗಾಗಿ ತಂಡಕ್ಕೆ ಸವಾಲು ತುಸು ಹೆಚ್ಚಿದೆ.

ಭಾರತ ಟಿ20 ವಿಶ್ವಕಪ್ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷರ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಸಿರಾಜ್ , ಸಂಜು ಸ್ಯಾಮ್ಸನ್, ಶಿವಂ ದುಬೆ.

ಪಾಕಿಸ್ತಾನದ ಟಿ20 ವಿಶ್ವಕಪ್ ತಂಡ

ಬಾಬರ್ ಅಜಮ್ (ನಾಯಕ), ಸೈಮ್ ಅಯೂಬ್, ಮೊಹಮ್ಮದ್ ರಿಜ್ವಾನ್ (ವಿಕೆಟ್‌ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಅಜಮ್ ಖಾನ್, ಶಾದಾಬ್ ಖಾನ್, ಇಮಾದ್ ವಾಸಿಮ್, ಹಾರಿಸ್ ರೌಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಅಬ್ಬಾಸ್ ಅಫ್ರಿದಿ, ಉಸ್ಮಾನ್ ಖಾನ್, ಅಬ್ರಾರ್ ಅಹಮದ್.

ಟಿ20 ವರ್ಲ್ಡ್‌ಕಪ್ 2024