ಅಂಡರ್ 19 ವಿಶ್ವಕಪ್ ಸೆಮಿಫೈನಲ್; ಅಜೇಯ ಭಾರತಕ್ಕೆ ಆತಿಥೇಯ ದಕ್ಷಿಣ ಆಫ್ರಿಕಾ ಸವಾಲು, ಹೀಗಿದೆ ತಂಡಗಳ ಬಲಾಬಲ
ICC Under 19 World Cup 2024: ಅಂಡರ್ 19 ವಿಶ್ವಕಪ್‌ನಲ್ಲಿ 6ನೇ ಪ್ರಶಸ್ತಿಗಾಗಿ ಭಾರತ ಮುನ್ನುಗ್ಗುತ್ತಿದೆ. ಅತ್ತ ಆತಿಥೇಯ ದಕ್ಷಿಣ ಆಫ್ರಿಕಾ ತವರಿನ ಬಲದೊಂದಿಗೆ ಮುನ್ನಡೆಯುತ್ತಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಅಂಡರ್ 19 ತಂಡಗಳ ಸೆಮಿಫೈನಲ್ ಕದನ ರೋಚಕತೆ ಸೃಷ್ಟಿಸಿದೆ.
ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯು (ICC Under 19 World Cup 2024) ಅಂತಿಮ ಹಂತ ತಲುಪಿದೆ. ಜನವರಿ 06ರ ಮಂಗಳವಾರವಾದ ಇಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾಗೆ ಅಜೇಯ ಭಾರತ (India U19 vs South Africa U19) ತಂಡ ಸವಾಲೊಡ್ಡಲಿದೆ.
ಬೆನೊನಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆದುಕೊಳ್ಳಲಿದೆ. ರೆಡ್-ಹಾಟ್ ಫಾರ್ಮ್‌ನಲ್ಲಿರುವ ಭಾರತವು ಟೂರ್ನಿಯಲ್ಲಿ ಈವರೆಗೆ ಒಂದೂ ಪಂದ್ಯ ಸೋತಿಲ್ಲ. ಆಡಿದ ಎಲ್ಲಾ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಭರ್ಜರಿಯಾಗಿ ಗೆದ್ದಿದೆ. ಅಲ್ಲದೆ, ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಟೂರ್ನಿಗೆ ಎಂಟ್ರಿಕೊಟ್ಟ ಯುವಪಡೆ, ಗೆಲ್ಲುವ ಫೇವರೆಟ್ ತಂಡವಾಗಿದೆ.
ಆಲ್‌ರೌಂಡ್ ಪ್ರದರ್ಶನ
ಪಂದ್ಯಾವಳಿಯಲ್ಲಿ ಗುಂಪು ಹಂತ ಸೇರಿದಂತೆ ಸತತ ಐದು ಗೆಲುವುಗಳ ಬಳಿಕ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ತಂಡದಲ್ಲಿ ಯುವ ಪ್ರತಿಭೆಗಳ ದಂಡೇ ಇದ್ದು, ತಮ್ಮ ಪ್ರಾಬಲ್ಯವನ್ನು ಖಚಿತಪಡಿಸಿಕೊಳ್ಳಲು ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ತಂಡ ಉತ್ತಮವಾಗಿದೆ. ಅಲ್ಲದೆ ಉದಯ್ ಸಹರಾನ್ ನಾಯಕತ್ವವೂ ತಂಡಕ್ಕಿದೆ.
ಮುಶೀರ್ ಖಾನ್ ಅಗ್ರ ರನ್ ಸ್ಕೋರರ್
ಟೂರ್ನಿಯಲ್ಲಿ ಎರಡು ಶತಕಗಳು ಮತ್ತು ಒಂದು ಅರ್ಧಶತಕದೊಂದಿಗೆ, 18 ವರ್ಷದ ಮುಶೀರ್ ಖಾನ್ ಪ್ರಸಕ್ತ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿ 83.50ರ ಸರಾಸರಿಯಲ್ಲಿ ಅವರು 334 ರನ್ ಗಳಿಸಿದ್ದಾರೆ.
ಇದನ್ನೂ ಓದಿ | U-19 World Cup: ಸಚಿನ್-ಉದಯ್ 215 ರನ್ ಜೊತೆಯಾಟ, ನೇಪಾಳ ವಿರುದ್ಧ ಸುಲಭ ಗೆಲುವು; ಸೆಮಿಫೈನಲ್ ಲಗ್ಗೆ ಇಟ್ಟ ಭಾರತ
ಇದೇ ವೇಳೆ 61.60ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಭಾರತದ ನಾಯಕ ಉದಯ್ ಸಹರಾನ್, ಎರಡು ಅರ್ಧಶತಕ ಹಾಗೂ ಒಂದು ಶತಕದೊಂದಿಗೆ 304 ರನ್ ಗಳಿಸಿ, ತಂಡವನ್ನು ಮುನ್ನಡೆಸುತ್ತಿದ್ದಾರೆ. ಅತ್ತ ನೇಪಾಳ ವಿರುದ್ಧದ ಭಾರತದ ಕೊನೆಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸಚಿನ್ ದಾಸ್ 116 ರನ್ ಗಳಿಸಿದ್ದರು. ಹೀಗಾಗಿ ಟೂರ್ನಿಯಲ್ಲಿ ಭಾರತೀಯ ಬ್ಯಾಟರ್‌ಗಳಿಂದ ಶತಕದಾಟ ಹೊರಹೊಮ್ಮುತ್ತಿವೆ. ರನ್ ಗಳಿಕೆಯಲ್ಲಿ ಇವರು ಎರಡನೇ ಸ್ಥಾನದಲ್ಲಿದ್ದಾರೆ.
ಭಾರತದ ಉಪನಾಯಕ ಮತ್ತು ಎಡಗೈ ಸ್ಪಿನ್ನರ್ ಸೌಮಿ ಪಾಂಡೆ ಈವರೆಗೆ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ | ವಾರೆವ್ಹಾ! ಎಂಎಸ್ ಧೋನಿಯನ್ನು ನೆನಪಿಸಿದ ಮುಶೀರ್ ಖಾನ್ ಹೆಲಿಕಾಪ್ಟರ್ ಶಾಟ್; ವಿಡಿಯೋ ಇಲ್ಲಿದೆ
ಅತ್ತ ದಕ್ಷಿಣ ಆಫ್ರಿಕಾ ತಂಡವು ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಆತಿಥೇಯ ಬಲದೊಂದಿಗೆ ತಂಡ ಸೆಮೀಸ್‌ಗೆ ಮುನ್ನಡೆದಿದೆ.
ವಿಲೋಮೂರ್ ಪಾರ್ಕ್‌ನಲ್ಲಿ ಫೆಬ್ರವರಿ 8ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಎರಡು ಸೆಮೀಸ್‌ಗಳಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.
ಭಾರತ ತಂಡ
ಉದಯ್ ಸಹರಾನ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ಧಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರವೆಲ್ಲಿ ಅವನೀಶ್ ರಾವ್ (ವಿಕೆಟ್ ಕೀಪರ್), ಸೌಮಿ ಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ ಮತ್ತು ನಮನ್ ತಿವಾರಿ.
ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ
ದಕ್ಷಿಣ ಆಫ್ರಿಕಾ ತಂಡ
ಜುವಾನ್ ಜೇಮ್ಸ್ (ನಾಯಕ), ಎಸೋಸಾ ಐಹೆವ್ಬಾ, ರಯೀಕ್ ಡೇನಿಯಲ್ಸ್, ಕ್ವೆನಾ ಮಫಕಾ, ದಿವಾನ್ ಮರೈಸ್, ನ್ಕೊಬಾನಿ ಮೊಕೊಯೆನಾ, ರಿಲೆ ನಾರ್ಟನ್, ರೊಮಾಶನ್ ಪಿಲ್ಲೆ, ಸಿಫೊ ಪೊಟ್ಸಾನೆ, ಎನ್ಟಾಂಡೊ ಜುಮಾ (ವಿಕೆಟ್ ಕೀಪರ್), ಲುವಾನ್-ಡ್ರೆ ಪ್ರಿಟೋರಿಯಸ್ (ವಿಕೆಟ್ ಕೀಪರ್), ರಿಚರ್ಡ್ ಸೆಲೆಟ್ಸ್, ಸ್ಟೀವ್ ಸ್ಟೋಕ್, ಡೇವಿಡ್ ಟೀಗರ್, ಆಲಿವರ್ ವೈಟ್‌ಹೆಡ್.