ಶ್ರೀಲಂಕಾ ವಿರುದ್ಧ ಭಾರತದ 100ನೇ ಗೆಲುವಿಗೆ ಮಳೆ ಅಡ್ಡಿ ಸಾಧ್ಯತೆ; ಮೊದಲ ಏಕದಿನ ಪಂದ್ಯದ ಪಿಚ್, ಹವಾಮಾನ ವರದಿ
ಆಗಸ್ಟ್ 2ರ ಶುಕ್ರವಾರ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಲಂಕಾ ವಿರುದ್ಧ ಈವರೆಗೆ ಆಡಿರುವ 168 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ 99 ಪಂದ್ಯಗಳಲ್ಲಿ ಗೆದ್ದಿದೆ. ಈ ಗೆಲುವಿನೊಂದಿಗೆ ಶತಕ ಸಾಧನೆಯ ಹೊಸ್ತಿಲಲ್ಲಿದೆ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಸಜ್ಜಾಗಿದೆ. ಕೊಲಂಬೊದಲ್ಲಿ ಆಗಸ್ಟ್ 2ರ ಶುಕ್ರವಾರ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಇದರೊಂದಿಗೆ ಲಂಕಾ ವಿರುದ್ಧ ಏಕದಿನ ಸ್ವರೂಪದಲ್ಲಿ ನೂರನೇ ಗೆಲುವು ದಾಖಲಿಸುವ ಇರಾದೆ ಹೊಂದಿದೆ. ಟಿ20 ವಿಶವಕಪ್ ಫೈನಲ್ ಪಂದ್ಯದ ಬಳಿಕ ಸುದೀರ್ಘ ವಿಶ್ರಾಂತಿಯಲ್ಲಿದ್ದ ರೋಹಿತ್ ಶರ್ಮಾ, ಏಕದಿನ ಸ್ವರೂಪದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿಗೆ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಕುಲ್ದೀಪ್ ಯಾದವ್ ಕೂಡ ಮರಳಲಿದ್ದಾರೆ. ಶ್ರೀಲಂಕಾ ತಂಡವನ್ನು ಚರಿತ್ ಅಸಲಂಕಾ ಮುನ್ನಡೆಸಲಿದ್ದಾರೆ. ಈಗಾಗಲೇ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿರುವ ಭಾರತ ತಂಡ, ಇದೀಗ ಏಕದಿನ ಸರಣಿಯಲ್ಲಿಯೂ ಗೆಲ್ಲುವ ಫೇವರೆಟ್ ತಂಡವಾಗಿದೆ.
ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ತಂಡ ನಂಬರ್ 1 ಸ್ಥಾನದಲ್ಲಿದ್ದರೆ, ಶ್ರೀಲಂಕಾ 7ನೇ ಸ್ಥಾನದಲ್ಲಿದೆ. ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೆ ತಂಡ ಸೇರಿಕೊಂಡಿದ್ದಾರೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಅನ್ನು ಸಿರಾಜ್ ಮತ್ತು ಅರ್ಷದೀಪ್ ಮುನ್ನಡೆಸಲಿದ್ದಾರೆ. ಕುಲ್ದೀಪ್ ಯಾದವ್ ಸ್ಪಿನ್ ಪಡೆಯನ್ನು ಮುನ್ನಡೆಸಲಿದ್ದಾರೆ.
ಶತಕ ಸಾಧನೆಗೆ ಭಾರತ ತವಕ
ಶ್ರೀಲಂಕಾ ವಿರುದ್ಧ ಈವರೆಗೆ ಆಡಿರುವ 168 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಭಾರತ 99 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಶುಕ್ರವಾರದ ಪಂದ್ಯ ಗೆದ್ದರೆ, ಶತಕ ಸಾಧನೆ ಮಾಡಿದಂತಾಗುತ್ತದೆ. ಶ್ರೀಲಂಕಾ ವಿರುದ್ಧ ಭಾರತ ಆಡಿರುವ ಕೊನೆಯ 5 ಪಂದ್ಯಗಳಲ್ಲಿಯೂ ಜಯ ಸಾಧಿಸಿದೆ. ಇದರಲ್ಲಿ ಎರಡರಲ್ಲಿ 300ಕ್ಕೂ ಅಧಿಕ ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.
ಕೊಲಂಬೋ ಪಿಚ್ ವರದಿ
ಪ್ರೇಮದಾಸದ ಪಿಚ್ ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ವೇಗಿಗಳು ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದರೂ, ನಿಧಾನಗತಿಯ ಬೌಲರ್‌ಗಳು ಮ್ಯಾಜಿಕ್ ಮಾಡಲಿದ್ದಾರೆ.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣವು 2020ರಿಂದ 19 ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮತ್ತು ಚೇಸಿಂಗ್ ಮಾಡಿದ ತಂಡಗಳು ತಲಾ 9 ಪಂದ್ಯಗಳಲ್ಲಿ ಗೆದ್ದಿವೆ. ಟಾಸ್ ಗೆದ್ದ ತಂಡವು ಈ ಅವಧಿಯಲ್ಲಿ 15 ಬಾರಿ ಬ್ಯಾಟಿಂಗ್ ಆಯ್ಕೆ ಮಾಡಿವೆ. ಅಚ್ಚರಿಯ ಅಂಶವೆಂದರೆ, ಇಲ್ಲಿ ಟಾಸ್ ಗೆದ್ದ ತಂಡವು ಪಂದ್ಯದಲ್ಲಿ ಗೆದ್ದಿರುವುದು ಕೇವಲ 5 ಬಾರಿ ಮಾತ್ರ. ಉಳಿದ 13 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡವೇ ಸೋತಿದೆ.
2020ರಿಂದ ಕೊಲಂಬೊದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಸರಾಸರಿ ಮೊತ್ತ 244 ರನ್. ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿರುವುದು, ಈ ಅವಧಿಯಲ್ಲಿ ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡದ ಗರಿಷ್ಠ ಮೊತ್ತವಾಗಿದೆ. ಅದೇ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ ಕೇವಲ 50 ರನ್ ಗಳಿಗೆ ಆಲೌಟ್ ಆಗಿತ್ತು. ಅದು ಇಲ್ಲಿ ದಾಖಲಾದ ಅತಿ ಕಡಿಮೆ ಮೊತ್ತವಾಗಿದೆ.
ಹವಾಮಾನ ವರದಿ
ಪಂದ್ಯದ ದಿನವಾದ ಶುಕ್ರವಾರ ಕೊಲಂಬೊದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ಮತ್ತು ಒದ್ದೆ ಮೈದಾನ ಅಡ್ಡಿಯಾಗುವ ಸಾಧ್ಯತೆಯಿದೆ.
