ವನಿತೆಯರ ಏಷ್ಯಾಕಪ್‌: ಸೆಮಿಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಸೋಲು; ಭಾರತ vs ಶ್ರೀಲಂಕಾ ದಾಖಲೆಯ 6ನೇ ಫೈನಲ್‌ಗೆ ವೇದಿಕೆ ಸಿದ್ಧ
ಕನ್ನಡ ಸುದ್ದಿ  /  ಕ್ರಿಕೆಟ್  /  ವನಿತೆಯರ ಏಷ್ಯಾಕಪ್‌: ಸೆಮಿಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಸೋಲು; ಭಾರತ Vs ಶ್ರೀಲಂಕಾ ದಾಖಲೆಯ 6ನೇ ಫೈನಲ್‌ಗೆ ವೇದಿಕೆ ಸಿದ್ಧ

ವನಿತೆಯರ ಏಷ್ಯಾಕಪ್‌: ಸೆಮಿಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಸೋಲು; ಭಾರತ vs ಶ್ರೀಲಂಕಾ ದಾಖಲೆಯ 6ನೇ ಫೈನಲ್‌ಗೆ ವೇದಿಕೆ ಸಿದ್ಧ

ಭಾರತ ಮತ್ತು ಶ್ರೀಲಂಕಾ ವನಿತೆಯರ ತಂಡಗಳ ನಡುವಿನ ಏಷ್ಯಾಕಪ್‌ ಫೈನಲ್‌ ಪಂದ್ಯವು ಜುಲೈ 28ರ ಭಾನುವಾರ ಡಂಬುಲ್ಲಾದಲ್ಲಿ ನಡೆಯಲಿದೆ. ಪಂದ್ಯವು ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ.

ಭಾರತ vs ಶ್ರೀಲಂಕಾ ದಾಖಲೆಯ 6ನೇ ಫೈನಲ್‌ಗೆ ವೇದಿಕೆ ಸಿದ್ಧ
ಭಾರತ vs ಶ್ರೀಲಂಕಾ ದಾಖಲೆಯ 6ನೇ ಫೈನಲ್‌ಗೆ ವೇದಿಕೆ ಸಿದ್ಧ (X)

ವನಿತೆಯರ ಏಷ್ಯಾಕಪ್‌ ಫೈನಲ್‌ ಪಂದ್ಯಕ್ಕೆ ಮುಹೂರ್ತ ನಿಗದಿಯಾಗಿದೆ. ಕಳೆದ ಬಾರಿಯ ಏಷ್ಯಾಕಪ್‌ ಟೂರ್ನಿಯ ಫೈನಲಿಸ್ಟ್‌ಗಳೇ ಈ ಬಾರಿಯೂ ಮತ್ತೆ ಮುಖಾಮುಖಿಯಾಗಲಿದ್ದಾರೆ. ಭಾರತ ಮತ್ತು ಶ್ರೀಲಂಕಾ ‌ವನಿತೆಯರ ತಂಡಗಳು ಏಷ್ಯಾಕಪ್‌ ಇತಿಹಾಸದಲ್ಲಿ ದಾಖಲೆಯ 6ನೇ ಬಾರಿಗೆ ಏಷ್ಯಾಕಪ್‌ನಲ್ಲಿ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ. ವಿಶೇಷವೆಂದರೆ, ಭಾರತ ವಿರುದ್ಧದ ಈವರೆಗಿನ 5 ಫೈನಲ್‌ ಪಂದ್ಯಗಳಲ್ಲಿ ಒಂದರಲ್ಲಿಯೂ ಲಂಕಾ ವನಿತೆಯರು ಗೆದ್ದಿಲ್ಲ. ಎಲ್ಲಾ 5 ಬಾರಿಗೂ ಭಾರತವೇ ಗೆದ್ದು ಟ್ರೋಫಿ ಎತ್ತಿ ಹಿಡಿದಿದೆ.ಈ ಬಾರಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡವು ದಾಖಲೆಯ ಎಂಟನೇ ಬಾರಿಗೆ ಟ್ರೋಫಿ ಗೆಲ್ಲಲು ಸಜ್ಜಾಗಿದ್ದಾರೆ, ಲಂಕಾ ತಂಡವು ಚೊಚ್ಚಲ ಕಪ್‌ ಗೆಲುವಿನ ನಿರೀಕ್ಷೆಯಲ್ಲಿದೆ.

ಜುಲೈ 26ರ ಶುಕ್ರವಾರ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವನಿತೆಯರ ತಂಡವನ್ನು ಮಣಿಸಿದ ಲಂಕಾ, ಫೈನಲ್‌ಗೆ ಲಗ್ಗೆ ಇಟ್ಟಿತು. ಡಂಬುಲ್ಲಾದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ 4 ವಿಕೆಟ್‌ ಕಳೆದುಕೊಂಡು 140 ರನ್‌ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಶ್ರೀಲಂಕಾ, ಆರಂಭಿಕ ಆಘಾತದ ನಡುವೆಯೂ ಛಲ ಬಿಡದೆ ಹೋರಾಡಿತು. ಕೊನೆಯ ಓವರ್‌ವರೆಗೂ ಸಾಗಿದ ಪಂದ್ಯದಲ್ಲಿ ಕೊನೆಗೂ ಗೆದ್ದು ಬೀಗಿತು. ಒಂದು ಎಸೆತ ಉಳಿಸಿ 3 ವಿಕೆಟ್‌ಗಳ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಆ ಮೂಲಕ ಏಷ್ಯಾಕಪ್‌ ಇತಿಹಾಸದಲ್ಲಿ ಆರನೇ ಬಾರಿ ಫೈನಲ್‌ ಪ್ರವೇಶಿಸಿತು.

ಲಂಕಾ ಪರ ನಾಯಕಿ ಚಾಮರಿ ಅಥಾಪತ್ತು ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡವು ಮೊದಲ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ, ನಾಯಕಿಯ ಆಟವಾಡಿ ತಂಡವನ್ನು ಮುನ್ನಡೆಸಿದರು. 48 ಎಸೆತ ಎದುರಿಸಿದ ಅವರು, 63 ರನ್‌ ಪೇರಿಸಿದರು. ಕೊನೆಯಲ್ಲಿ ಅನುಷ್ಕಾ ಸಂಜೀವನಿ ಅಜೇಯ 24 ರನ್‌ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ, ಬಾಂಗ್ಲಾದೇಶ ವಿರುದ್ಧ ಭಾರತ ವನಿತೆಯರ ತಂಡ 10 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಇದುವರೆಗೆ ನಡೆದ ಎಲ್ಲಾ 9 ಆವೃತ್ತಿಗಳಲ್ಲೂ ಫೈನಲ್‌ ಪ್ರವೇಶಿಸಿದ ವಿಶ್ವದಾಖಲೆ ನಿರ್ಮಿಸಿತು. ಈ ಹಿಂದೆ ನಡೆದ 8 ಆವೃತ್ತಿಗಳಲ್ಲಿ ಒಂದು ಬಾರಿ ಮಾತ್ರ ಫೈನಲ್‌ನಲ್ಲಿ ಸೋತಿರುವ ಭಾರತ, ಉಳಿದ ಎಲ್ಲಾ 7 ಟೂರ್ನಿಗಳಲ್ಲಿ ಏಷ್ಯಾ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದೀಗ 8ನೇ ಟ್ರೋಫಿ ಗೆಲುವಿಗೆ ಶ್ರೀಲಂಕಾ ವಿರುದ್ಧ ಆರನೇ ಬಾರಿ ಏಷ್ಯಾಕಪ್‌ ಫೈನಲ್‌ನಲ್ಲಿ ಸೆಣಸಲಿದೆ.

ಫೈನಲ್‌ ಪಂದ್ಯ ಯಾವಾಗ?

ಭಾರತ ಮತ್ತು ಶ್ರೀಲಂಕಾ ನಡುವಿನ ಫೈನಲ್‌ ಪಂದ್ಯವು ಡಂಬುಲ್ಲಾದಲ್ಲೇ ನಡೆಯಲಿದೆ. ಜುಲೈ 28ರ ಭಾನುವಾರ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಪಂದ್ಯವು ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಇದೇ ವೇಳೆ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸಬಹುದು.

Whats_app_banner