ಟಿ20 ವಿಶ್ವಕಪ್: ಭಾರತ vs ಯುಎಸ್‌ಎ ಮೊಟ್ಟಮೊದಲ ಮುಖಾಮುಖಿ; ನ್ಯೂಯಾರ್ಕ್ ಪಿಚ್, ಹವಾಮಾನ ವರದಿ
ಕ್ರಿಕೆಟ್‌ನಲ್ಲಿ ನಂಬರ್ ವನ್ ಶ್ರೇಯಾಂಕದ ಭಾರತ ತಂಡವು, ಯುಎಸ್‌ಎ ವಿರುದ್ಧ ಇದೇ ಮೊದಲ ಬಾರಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಟಿ20 ವಿಶ್ವಕಪ್‌ನಲ್ಲಿ ನ್ಯೂಯಾರ್ಕ್ ಮೈದಾನದಲ್ಲಿ ತಂಡವು ಮೂರನೇ ಪಂದ್ಯವಾಡುತ್ತಿದೆ. ಪಂದ್ಯಕ್ಕೂ ಮುನ್ನ ಪಿಚ್ ಹಾಗೂ ಹವಾಮಾನ ವರದಿ ತಿಳಿಯೋಣ.

ಟಿ20 ವಿಶ್ವಕಪ್ 2024ರಲ್ಲಿ ಜೂನ್ 12ರ ಬುಧವಾರ ಭಾರತ ತಂಡವು ಆತಿಥೇಯ ಯುಎಸ್‌ಎ (United States vs India) ತಂಡದ ವಿರುದ್ಧ ಕಣಕ್ಕಿಳಿಯುತ್ತಿದೆ. ಉಭಯ ತಂಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಗೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ಈ ಬಾರಿಯ ಟೂರ್ನಿಯ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಲಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಇದೇ ಮೈದಾನದಲ್ಲಿ ರೋಹಿತ್ ಶರ್ಮಾ ಪಡೆ ಸತತ ಮೂರನೇ ಪಂದ್ಯವಾಡುತ್ತಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಅಜೇಯವಾಗಿ ಮುನ್ನಡೆಯುತ್ತಿದ್ದು, ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿವೆ. ಇಂದು ಅಜೇಯ ಓಟ ಮುಂದುವರೆಸುವ ತಂಡವು ಮುಂದಿನ ಹಂತದಲ್ಲಿ ಕಾಣಿಸಿಕೊಳ್ಳಲಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ, ಐರ್ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿತು. ನಂತರದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಆರು ರನ್‌ಗಳಿಂದ ಮಣಿಸಿತು. ಅತ್ತ ಯುಎಸ್ಎ ತಂಡ ಆರಂಭಿಕ ಪಂದ್ಯದಲ್ಲಿ ಕೆನಡಾ ವಿರುದ್ಧ ಜಯಗಳಿಸಿದರೆ, ನಂತರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿತ್ತು. ಇದೀಗ ಭಾರತವನ್ನು ಕೂಡಾ ಮಣಿಸಬಹುದು ಎಂಬ ಲೆಕ್ಕಾಚಾರದಲ್ಲಿ ತಂಡವಿದೆ.
ನ್ಯೂಯಾರ್ಕ್ ಹವಾಮಾನ ಮುನ್ಸೂಚನೆ
ನ್ಯೂಯಾರ್ಕ್ ನಗರದಲ್ಲಿ ಪಂದ್ಯದ ದಿನದಂದು ಭಾಗಶಃ ಬಿಸಿಲಿನ ವಾತಾವರಣ ಇರುವ ಸೂಚನೆಯನ್ನು ಹವಾಮಾನ ವರದಿ ತಿಳಿಸಿದೆ. ತಾಪಮಾನವು 27 ಡಿಗ್ರಿ ಸೆಲ್ಸಿಯಸ್‌ನಿಂದ 19 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ.
ಪಿಚ್ ವರದಿ
ನಸ್ಸೌ ಕೌಂಟಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಅತ್ಯಂತ ಸವಾಲಿನ ಪಿಚ್ ಎಂಬುದು ಈಗಾಗಲೇ ಸಾಬೀತಾಗಿದೆ. ಟೂರ್ನಿಯಲ್ಲಿ ಈವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಅನುಭವಿ ಬ್ಯಾಟರ್‌ಗಳು ಕೂಡಾ ರನ್ ಗಳಿಸಲು ಪರದಾಡಿದ್ದಾರೆ. ನಿಧಾನಗತಿಯ ಸ್ವಭಾವದಿಂದಾಗಿ ಇಲ್ಲಿ ಬೌಲರ್‌ಗಳೇ ಮೇಲುಗೈ ಸಾಧಿಸುತ್ತಾರೆ. ಸ್ಪಿನ್ ಬೌಲರ್‌ಗಳಿಗಿಂತ ವೇಗದ ಬೌಲರ್‌ಗಳಿಗೆ ವಿಕೆಟ್ ಹೆಚ್ಚು ಅನುಕೂಲಕರವಾಗಿದೆ. ಈ ಪಿಚ್‌ನಲ್ಲಿ ರನ್ ಗಳಿಸಲು ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಬೇಕಾಗುತ್ತದೆ.
ನೇರಪ್ರಸಾರ ವಿವರ
ಭಾರತ ಮತ್ತು ಅಮೆರಿಕ ನಡುವಿನ ಪಂದ್ಯವನ್ನು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದು. ಇದೇ ವೇಳೆ, ಭಾರತ ತಂಡದ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಇದೇ ವೇಳೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೂಲಕ ಮೊಬೈಲ್ ಮೂಲಕ ಉಚಿತವಾಗಿ ಪಂದ್ಯ ವೀಕ್ಷಿಸಬಹುದಾಗಿದೆ.
ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಯುಎಸ್‌ಎ ಸಂಭಾವ್ಯ ತಂಡ
ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ ಮತ್ತು ವಿಕೆಟ್ ಕೀಪರ್), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನೋಸ್ತುಶ್ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಟಿ20 ವಿಶ್ವಕಪ್; ಭಾರತ vs ಯುಎಸ್ಎ ಮುಖಾಮುಖಿ ದಾಖಲೆ ಮತ್ತು ಲೈವ್ ಸ್ಟ್ರೀಮಿಂಗ್ ವಿವರ