ಭಾರತ vs ಜಿಂಬಾಬ್ವೆ ಮೊದಲ ಟಿ20ಐ; ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ ರಿಪೋರ್ಟ್, ಹವಾಮಾನ ವರದಿ ಇಲ್ಲಿದೆ
India vs Zimbabwe 1st T20I: ಭಾರತ ಮತ್ತು ಜಿಂಬಾಬ್ವೆ ತಂಡಗಳ ಮೊದಲ ಟಿ20ಐ ಪಂದ್ಯ ಇಂದು (ಜುಲೈ 6) ನಡೆಯಲಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಟಿ20ಐ ಅಂಕಿ-ಅಂಶಗಳು, ದಾಖಲೆ, ಪಿಚ್ ವರದಿ ಮತ್ತು ಹರಾರೆ ಹವಾಮಾನ ಮುನ್ಸೂಚನೆಯ ನೋಟ ಇಲ್ಲಿದೆ.
ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್ ಮುಕ್ತಾಯಗೊಂಡಿದೆ. ಭಾರತ ತಂಡ 17 ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ ಆಗಿದೆ. ಇದೀಗ ದ್ವಿಪಕ್ಷೀಯ ಸರಣಿಯತ್ತ ಟೀಮ್ ಇಂಡಿಯಾ ಹೆಜ್ಜೆ ಹಾಕುತ್ತಿದೆ. ಜುಲೈ 6ರಂದು ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾರತ-ಜಿಂಬಾಬ್ವೆ ತಂಡಗಳ ನಡುವೆ ಮೊದಲ ಟಿ20ಐ ಪಂದ್ಯ ನಡೆಯಲಿದೆ. ಅನುಭವಿ ಹಾಗೂ ಹಿರಿಯರ ಅನುಪಸ್ಥಿತಿಯಲ್ಲಿ ಐಪಿಎಲ್ನಲ್ಲಿ ಮಿಂಚಿರುವ ಯುವ ಆಟಗಾರರು ಅವಕಾಶ ಪಡೆದಿದ್ದಾರೆ.
ಯುವಕರೇ ತುಂಬಿದ ಹಾಗೂ ಶುಭ್ಮನ್ ಗಿಲ್ ನಾಯಕತ್ವ ವಹಿಸಿರುವ ಭಾರತವು ಹೇಗೆ ಪ್ರದರ್ಶನ ನೀಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಜಿಂಬಾಬ್ವೆ ಎದುರು ಅಜೇಯವಾಗಿರುವ ಮೆನ್ ಇನ್ ಬ್ಲ್ಯೂ ಗೆಲುವಿನ ಓಟ ಮುಂದುವರೆಸಲು ಯೋಜನೆ ಹಾಕಿಕೊಂಡಿದೆ. ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಅವರು ಟಿ20ಐ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಹೀಗಾಗಿ, 2026ರ ಟಿ20 ವಿಶ್ವಕಪ್ಗೆ ಈಗಿನಿಂದಲೇ ತಂಡವನ್ನು ಬಿಸಿಸಿಐ ಸಿದ್ಧಗೊಳಿಸುತ್ತಿದೆ.
ಇಂದಿನಿಂದ (ಜುಲೈ 6) ಆರಂಭವಾಗುವ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಯುವ ಆಟಗಾರರು ಅವಕಾಶ ಸರಿಯಾಗಿ ಬಳಸಿಕೊಂಡರೆ, ಪ್ರಮುಖ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಹೀಗಾಗಿ ಎಲ್ಲಾ ಆಟಗಾರರು ಶ್ರೇಷ್ಠ ಪ್ರದರ್ಶನ ತೋರುವುದು ಅನಿವಾರ್ಯ. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಸೂರ್ಯಕುಮಾರ್ ಸೇರಿದಂತೆ ಪ್ರಮುಖರು ಈ ಸರಣಿಗೆ ವಿಶ್ರಾಂತಿ ಪಡೆದಿದ್ದಾರೆ. ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ಯಾವೊಬ್ಬ ಆಟಗಾರ ಕೂಡ ಈ ಸರಣಿಯ ಭಾಗವಾಗಿಲ್ಲ.
ಜಿಂಬಾಬ್ವೆ ತಂಡವು ಯುವ ಭಾರತೀಯ ತಂಡದ ಕಠಿಣ ಸವಾಲನ್ನು ಎದುರಿಸಲು ಸಜ್ಜಾಗಿದೆ. 2016ರ ನಂತರ ಟಿ20ಐ ಸರಣಿಗಾಗಿ ಜಿಂಬಾಬ್ವೆಗೆ ಭಾರತ ಇದೇ ಮೊದಲ ಬಾರಿಗೆ ಪ್ರವಾಸ ಕೈಗೊಂಡಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಟಿ20ಐ ಅಂಕಿ-ಅಂಶಗಳು, ದಾಖಲೆ, ಪಿಚ್ ವರದಿ ಮತ್ತು ಹರಾರೆ ಹವಾಮಾನ ಮುನ್ಸೂಚನೆಯ ನೋಟ ಇಲ್ಲಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ ವರದಿ
ಹರಾರೆ ಸ್ಪೋರ್ಟ್ಸ್ ಕ್ಲಬ್ ಐದು ಪಂದ್ಯಗಳಿಗೂ ಆತಿಥ್ಯ ವಹಿಸಲಿದೆ. ಪಿಚ್ ಸಮನಾಗಿರಲಿದ್ದು, ಹೆಚ್ಚಿನ ಬೌನ್ಸ್ ಇಲ್ಲ. ಬ್ಯಾಟರ್ಸ್ ಮತ್ತು ಬೌಲರ್‌ಗಳಿಗೆ ಇಬ್ಬರಿಗೂ ಈ ಪಿಚ್ ನೆರವಾಗುತ್ತದೆ. ಪಂದ್ಯ ಮುಂದುವರೆದಂತೆ ಸ್ಪಿನ್ನರ್ಗಳು ಪ್ರಾಬಲ್ಯ ಸಾಧಿಸಲಿದ್ದಾರೆ. ಆಟದ ಆರಂಭದಲ್ಲಿ ವೇಗಿಗಳು ಪಂದ್ಯದ ಮೇಲೆ ಹಿಡಿತ ಸಾಧಿಸಲಿದ್ದಾರೆ. ಈ ಪಿಚ್ನಲ್ಲಿ 50 ಟಿ20ಐ ಪಂದ್ಯಗಳು ಜರುಗಿದ್ದು, ಮೊದಲು ಬ್ಯಾಟಿಂಗ್ ನಡೆಸಿದ ತಂಡ 29 ಸಲ ಗೆದ್ದಿದೆ. ಹಾಗಾಗಿ ಟಾಸ್ ಗೆದ್ದವರೇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ನಿರೀಕ್ಷೆ ಇದೆ.
ಜುಲೈ 6ರಂದು ಹರಾರೆ ಹವಾಮಾನ ಮುನ್ಸೂಚನೆ
ಹರಾರೆಯಲ್ಲಿ ಶನಿವಾರ (ಜುಲೈ 6) ಬಿಸಿಲಿನಿಂದ ಕೂಡಿರಲಿದೆ. ಯಾವುದೇ ಮಳೆಯ ಭೀತಿ ಇರುವುದಿಲ್ಲ. ಪಂದ್ಯದ ಆರಂಭದಲ್ಲಿ ಗರಿಷ್ಠ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ ಮತ್ತು ಮುಕ್ತಾಯದ ಹಂತದಲ್ಲಿ 23 ಡಿಗ್ರಿ ಸೆಲ್ಸಿಯನ್ ಆಗುವ ನಿರೀಕ್ಷೆಯಿದೆ. ಪಂದ್ಯದ ದಿನದಂದು ಮಳೆಯ ಭೀತಿ ಇಲ್ಲ. ಆದ್ದರಿಂದ, ಅಭಿಮಾನಿಗಳು ಸಂಪೂರ್ಣ ಪಂದ್ಯವನ್ನು ವೀಕ್ಷಿಸಬಹುದು.
ಭಾರತ vs ಜಿಂಬಾಬ್ವೆ 1ನೇ ಟಿ20ಐ ದಿನಾಂಕ, ಸಮಯ, ಟೆಲಿಕಾಸ್ಟ್ ಮಾಹಿತಿ
ಪಂದ್ಯದ ದಿನಾಂಕ: ಶನಿವಾರ, ಜುಲೈ 6
ಪಂದ್ಯದ ಆರಂಭದ ಸಮಯ: 4:30 ಸಂಜೆ (ಭಾರತೀಯ ಕಾಲಮಾಮನ)
ಟಿವಿ ಚಾನೆಲ್‌ಗಳು: ಸೋನಿ ಸ್ಪೋರ್ಟ್ಸ್ ಟೆನ್ 5 ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 3 ಚಾನೆಲ್
ಲೈವ್ ಸ್ಟ್ರೀಮಿಂಗ್: SonyLIV (ಸೋನಿ ಲಿವ್)
ಭಾರತ vs ಜಿಂಬಾಬ್ವೆ ಟಿ20ಐ ಹೆಡ್ ಟು ಹೆಡ್ ದಾಖಲೆ
ಟಿ20ಐ ಕ್ರಿಕೆಟ್ನಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಹೆಚ್ಚು ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಮುಖಾಮುಖಿಯಾದ 8 ಪಂದ್ಯಗಳ ಪೈಕಿ ಭಾರತ 6 ಬಾರಿ ಗೆದ್ದಿದೆ. ಜಿಂಬಾಬ್ವೆ 2ರಲ್ಲಿ ಗೆಲುವಿನ ನಗೆ ಬೀರಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡವನ್ನು 115 ರನ್‌ಗಳಿಗೆ ಆಲೌಟ್ ಮಾಡಿತ್ತು. ಅಂದು ಭಾರತ 186 ರನ್ ಗಳಿಸಿತ್ತು.
ಹರಾರೆ ಮೈದಾನದಲ್ಲಿ ಭಾರತ vs ಜಿಂಬಾಬ್ವೆ ಟಿ20ಐ ದಾಖಲೆ
ಪಂದ್ಯಗಳು: 7
ಭಾರತ ಗೆದ್ದಿದೆ: 5
ಜಿಂಬಾಬ್ವೆ ಗೆಲುವು: 2
ಭಾರತ ವಿರುದ್ಧ ಜಿಂಬಾಬ್ವೆಗೆ ಗರಿಷ್ಠ ಮೊತ್ತ: 178
ಭಾರತ ವಿರುದ್ಧ ಜಿಂಬಾಬ್ವೆಗೆ ಕಡಿಮೆ ಮೊತ್ತ: 135
ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗರಿಷ್ಠ ಮೊತ್ತ: 170
ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಕಡಿಮೆ ಮೊತ್ತ: 99