India vs Zimbabwe 2nd T20: ಬೌಲರ್‌ಗಳ ಮಿಂಚಿನ ದಾಳಿ, ಅಭಿಷೇಕ್ ಬೊಂಬಾಟ್ ಶತಕ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಕಂಬ್ಯಾಕ್
ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬಿಗ್ ಕಂಬ್ಯಾಕ್ ಮಾಡಿದೆ. ಅಭಿಶೇಕ್ ಶರ್ಮಾ ಶತಕ ಹಾಗೂ ಮುಕೇಶ್ ಮತ್ತು ಅವೇಶ್ ಖಾನ್ ಅವರ ಮಾರಕ ಬೌಲಿಂಗ್ ದಾಳಿಯಿಂದ ಗಿಲ್ ನೇತೃತ್ವದ ಭಾರತ 100 ರನ್‌ಗಳ ಗೆಲುವು ಸಾಧಿಸಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಜಿಂಬಾಬ್ವೆ ವಿರುದ್ಧ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದು, ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕ ಹಾಗೂ ಮುಕೇಶ್ ಕುಮಾರ್ ಮತ್ತು ಅವೇಶ್ ಖಾನ್ ಅವರ ಬಿಗಿ ಬೌಲಿಂಗ್ ನೆರವಿನಿಂದ 100 ರನ್‌ಗಳ ದೊಡ್ಡ ಗೆಲುವನ್ನು ಪಡೆದಿದೆ. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ 13 ರನ್‌ಗಳಿಂದ ಸೋಲು ಕಂಡಿತ್ತು. ಇದು ಭಾರಿ ಟೀಕೆಗೂ ಕಾರಣವಾಗಿತ್ತು. ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅಭಿಷೇಕ್ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಕೇವಲ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸೇರಿ 100 ರನ್ ಗಳಿಸಿ ಔಟಾಗದೆ ಉಳಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿಸಿದರು. ನಾಯಕ ಶುಭ್ಮನ್ ಗಿಲ್ ಕೇವಲ 2 ರನ್‌ಗೆ ಔಟಾಗಿ ಬೇಗ ಪೆವಿಲಿಯನ್ ಸೇರಿಕೊಂಡರು. ಆ ನಂತರ ಅಭಿಷೇಕ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಅಬ್ಬರಿಸಿದರು ಈ ಜೋಡಿ ಮುರಿಯದೆ 2ನೇ ವಿಕೆಟ್‌ಗೆ 147 ರನ್‌ಗಳ ಆಟವಾಡಿದರು. ಗಾಯಕ್ವಾಡ್ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸೇರಿ 77 ರನ್ ಚಚ್ಚಿದರು. ನಂತರ ರಿಂಗ್ ಸಿಂಗ್ ಜೊತೆಗೂಡಿದ ಅಭಿಷೇಕ್ ತನ್ನ ಆರ್ಭಟವನ್ನು ಮುಂದುವರಿಸಿದರು. ಅಂತಿಮವಾಗಿ ಶರ್ಮಾ 47 ಎಸೆತಗಳಲ್ಲಿ 100 ರನ್ ಗಳಿಸಿ ಔಟಾಗದೆ ಉಳಿದರು. ರಿಂಕು ಸಿಂಗ್ ಕೇವಲ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸೇರಿ 48 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಈ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆ ತಂಡ 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವ ಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತು. ಅವೇಶ್ ಖಾನ್ ಮತ್ತು ಮುಕೇಶ್ ಕುಮಾರ್ ತಲಾ 3 ವಿಕೆಟ್ ಪಡೆದರೆ, ರವಿ ಬಿಷ್ಣೋಯಿ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಿತ್ತರು. ಸರಣಿಯಲ್ಲಿ ಇತ್ತಂಡಗಳು 1-1 ಅಂತರವನ್ನು ಕಾಯ್ದುಕೊಂಡಿವೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)