ಜಿಂಬಾಬ್ವೆ ವಿರುದ್ಧ ಸೋಲಿನ ಸೇಡಿಗೆ ಭಾರತ ಸಜ್ಜು; ಹವಾಮಾನ ಹಾಗೂ ಪಿಚ್ ರಿಪೋರ್ಟ್, ಪ್ಲೇಯಿಂಗ್ 11, ಮುಖಾಮುಖಿ ದಾಖಲೆ
India vs Zimbabwe 2nd T20I: ಭಾರತ ಮತ್ತು ಜಿಂಜಾಬ್ವೆ ನಡುವಿನ ಎರಡನೇ ಟಿ20 ಪಂದ್ಯವು ಇಂದು (ಜುಲೈ 7) ನಡೆಯಲಿದೆ. ಈ ಪಂದ್ಯಕ್ಕೆ ಆತಿಥ್ಯ ವಹಿಸುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ ಮತ್ತು ಹವಾಮಾನ ವರದಿ ಇಲ್ಲಿದೆ.
ಟಿ20 ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾ, ಜಿಂಬಾಬ್ವೆ ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲಿಗೆ ಶರಣಾಗಿದೆ. ಜುಲೈ 7ರಂದು ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾರತ-ಜಿಂಬಾಬ್ವೆ ತಂಡಗಳ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದ್ದು, ಸೇಡಿಗೆ ಶುಭ್ಮನ್ ಗಿಲ್ ಪಡೆ ಸಜ್ಜಾಗಿದೆ. ಅವಮಾನಕರ ಸೋಲಿನಿಂದ ಪಾರಾಗಲು ಟೀಮ್ ಇಂಡಿಯಾ ಕಸರತ್ತು ನಡೆಸುತ್ತಿದೆ. ಐಪಿಎಲ್ನಲ್ಲಿ ಅಬ್ಬರಿಸಿದ ಯುವ ಆಟಗಾರರು, ಭಾರತದ ಪರ ನಿರಾಸೆ ಮೂಡಿಸಿದರು.
ಯುವಕರೇ ತುಂಬಿದ ಹಾಗೂ ಶುಭ್ಮನ್ ಗಿಲ್ ನಾಯಕತ್ವ ವಹಿಸಿರುವ ಭಾರತವು ಹೇಗೆ ಪ್ರದರ್ಶನ ನೀಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿತ್ತು. ಆದರೆ ಮೊದಲನೇ ಟಿ20 ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಟೀಕೆಗೆ ಗುರಿಯಾಗಿದೆ. ಜಿಂಬಾಬ್ವೆ ಎದುರು ಮೂರನೇ ಬಾರಿ ಸೋತಿರುವ ಭಾರತ, ಈ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಉಳಿದ ಪಂದ್ಯಗಳನ್ನು ಗೆದ್ದುಕೊಳ್ಳಲು ಸಿದ್ಧವಾಗಿದೆ. ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಅವರು ಟಿ20ಐ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದು, ಅವರ ಸ್ಥಾನ ತುಂಬಲು ಯುವಕರು ವಿಫಲರಾದರು.
ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ, ಧ್ರುವ್ ಜುರೆಲ್ ನಿರಾಸೆ ಮೂಡಿಸಿದರು. ಆದರೂ ಮುಂದಿನ ಪಂದ್ಯದಲ್ಲೂ ಅವಕಾಶ ಪಡೆಯಲಿದ್ದಾರೆ. ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಜಿಂಬಾಬ್ವೆ ಸತತ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. 2016ರ ನಂತರ ಇದೇ ಮೊದಲ ಬಾರಿಗೆ ಟಿ20ಐ ಸರಣಿಗಾಗಿ ಜಿಂಬಾಬ್ವೆಗೆ ಭಾರತ ಪ್ರವಾಸ ಕೈಗೊಂಡಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಟಿ20ಐ ಅಂಕಿ-ಅಂಶಗಳು, ದಾಖಲೆ, ಪಿಚ್ ವರದಿ, ಪ್ಲೇಯಿಂಗ್ 11 ಮತ್ತು ಹರಾರೆ ಹವಾಮಾನ ಮುನ್ಸೂಚನೆಯ ವಿವರ ಇಲ್ಲಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ ವರದಿ
ಹರಾರೆ ಸ್ಪೋರ್ಟ್ಸ್ ಕ್ಲಬ್ 2ನೇ ಟಿ20ಗೂ ಆತಿಥ್ಯ ವಹಿಸುತ್ತಿದೆ. ಪಿಚ್ ಸಮನಾಗಿರಲಿದ್ದು, ಹೆಚ್ಚಿನ ಬೌನ್ಸ್ ಇರುವುದಿಲ್ಲ. ಪಂದ್ಯ ಮುಂದುವರೆದಂತೆ ಸ್ಪಿನ್ನರ್ಸ್ ಪ್ರಾಬಲ್ಯ ಸಾಧಿಸಲಿದ್ದಾರೆ. ಆಟದ ಆರಂಭದಲ್ಲಿ ವೇಗಿಗಳು ಪಂದ್ಯದ ಮೇಲೆ ಹಿಡಿತ ಸಾಧಿಸಲಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಳಾದ ರವಿ ಬಿಷ್ಣೋಯ್ ಮತ್ತು ಸಿಕಂದರ್ ರಾಜಾ ಅವರು ಮಿಂಚಿದ್ದಾರೆ. ಟಾಸ್ ಗೆದ್ದವರೇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ನಿರೀಕ್ಷೆ ಇದೆ.
ಜುಲೈ 6ರಂದು ಹರಾರೆ ಹವಾಮಾನ ಮುನ್ಸೂಚನೆ
ಹರಾರೆಯಲ್ಲಿ ಭಾನುವಾರವೂ (ಜುಲೈ 7) ಬಿಸಿಲಿನಿಂದ ಕೂಡಿರಲಿದೆ. ಮಳೆಯ ಆತಂಕ ಇರುವುದಿಲ್ಲ. ಪಂದ್ಯದ ಆರಂಭದಲ್ಲಿ ಗರಿಷ್ಠ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ ಮತ್ತು ಮುಕ್ತಾಯದ ಹಂತದಲ್ಲಿ 23 ಡಿಗ್ರಿ ಸೆಲ್ಸಿಯನ್ ಆಗುವ ನಿರೀಕ್ಷೆಯಿದೆ.
ಭಾರತ vs ಜಿಂಬಾಬ್ವೆ 2ನೇ ಟಿ20ಐ ದಿನಾಂಕ, ಸಮಯ, ಟೆಲಿಕಾಸ್ಟ್ ಮಾಹಿತಿ
ಪಂದ್ಯದ ದಿನಾಂಕ: ಭಾನುವಾರ, ಜುಲೈ 7
ಪಂದ್ಯದ ಆರಂಭದ ಸಮಯ: 4:30 ಸಂಜೆ (ಭಾರತೀಯ ಕಾಲಮಾಮನ)
ಟಿವಿ ಚಾನೆಲ್‌ಗಳು: ಸೋನಿ ಸ್ಪೋರ್ಟ್ಸ್ ಟೆನ್ 5 ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 3 ಚಾನೆಲ್
ಲೈವ್ ಸ್ಟ್ರೀಮಿಂಗ್: SonyLIV (ಸೋನಿ ಲಿವ್)
ಭಾರತ vs ಜಿಂಬಾಬ್ವೆ ಟಿ20ಐ ಹೆಡ್ ಟು ಹೆಡ್ ದಾಖಲೆ
ಟಿ20ಐ ಕ್ರಿಕೆಟ್ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಹೆಚ್ಚು ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಮುಖಾಮುಖಿಯಾದ 9 ಪಂದ್ಯಗಳ ಪೈಕಿ ಭಾರತ 6 ಬಾರಿ ಗೆದ್ದಿದೆ. ಜಿಂಬಾಬ್ವೆ 3ರಲ್ಲಿ ಗೆಲುವಿನ ನಗೆ ಬೀರಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋತಿದ್ದು, ಎಚ್ಚರಿಕೆ ವಹಿಸುವ ಅಗತ್ಯ ಇದೆ.
ಹರಾರೆ ಮೈದಾನದಲ್ಲಿ ಭಾರತ vs ಜಿಂಬಾಬ್ವೆ ಟಿ20ಐ ದಾಖಲೆ
ಪಂದ್ಯಗಳು: 9
ಭಾರತ ಗೆದ್ದಿದೆ: 5
ಜಿಂಬಾಬ್ವೆ ಗೆಲುವು: 3
ಜಿಂಬಾಬ್ವೆ ವಿರುದ್ಧ ಭಾರತ ಗರಿಷ್ಠ ಮೊತ್ತ: 178
ಜಿಂಬಾಬ್ವೆ ವಿರುದ್ಧ ಭಾರತ ಕನಿಷ್ಠ ಮೊತ್ತ: 102
ಭಾರತದ ವಿರುದ್ಧ ಜಿಂಬಾಬ್ವೆ ಗರಿಷ್ಠ ಮೊತ್ತ: 170
ಭಾರತದ ವಿರುದ್ಧ ಜಿಂಬಾಬ್ವೆ ಕನಿಷ್ಠ ಮೊತ್ತ: 99