ಗೆಲ್ಲುವ ಪಂದ್ಯ ಕೊನೆಯ ಕ್ಷಣದಲ್ಲಿ ಕೈಚೆಲ್ಲಿದ ಶ್ರೀಲಂಕಾ; 3ನೇ ಟಿ20ಯಲ್ಲಿ ಭಾರತಕ್ಕೆ ಸೂಪರ್ ಓವರ್‌ನಲ್ಲಿ ಗೆಲುವು, ಸರಣಿ ಕ್ಲೀನ್ ಸ್ವೀಪ್
India vs Sri Lanka 3rd T20I: ಭಾರತ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿಯೂ ಶ್ರೀಲಂಕಾ ಸೋಲು ಕಂಡಿದೆ. ಇದರೊಂದಿಗೆ ತವರಿನಲ್ಲಿ ನಡೆದ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗಕ್ಕೆ ಒಳಗಾಗಿದೆ. ಪಂದ್ಯ ಟೈಯಲ್ಲಿ ಅಂತ್ಯವಾದರೂ, ಸೂಪರ್ ಓವರ್‌ನಲ್ಲಿ ಭಾರತ ಸುಲಭ ಗೆಲುವು ಒಲಿಸಿಕೊಂಡಿದೆ.

ಶ್ರೀಲಂಕಾ ವಿರುದ್ಧದ ಸರಣಿಯ ಕೊನೆಯ ಟಿ20 ಪಂದ್ಯದಲ್ಲಿಯೂ ಭಾರತ ರೋಚಕ ಜಯ ಸಾಧಿಸಿದೆ. ಸತತ ಎರಡು ಪಂದ್ಯಗಳಲ್ಲಿ ಕೊನೆಯ ಕ್ಷಣದಲ್ಲಿ ಭಾರಿ ಬ್ಯಾಟಿಂಗ್ ಕುಸಿತಕ್ಕೊಳಗಾಗಿ ಸೋಲು ಕಂಡಿದ್ದ ಆತಿಥೇಯ ಶ್ರೀಲಂಕಾ, ಸತತ ಮೂರನೇ ಪಂದ್ಯದಲ್ಲಿಯೂ ಕೊನೆಯ ಕ್ಷಣದಲ್ಲಿ ಸೋಲು ಕಂಡಿದೆ. ಇದರೊಂದಿಗೆ ತವರು ನೆಲದಲ್ಲಿಯೇ ಲಂಕನ್ನರು ಭಾರತದ ವಿರುದ್ಧ ವೈಟ್‌ವಾಶ್ ಮುಖಭಂಗಕ್ಕೆ ಒಳಗಾಗಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಭಾರತ, ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿತು. ಆದರೂ, ಬೌಲಿಂಗ್‌ನಲ್ಲಿ ಕೊನೆಯ ಕ್ಷಣದಲ್ಲಿ ಭರ್ಜರಿ ಕಂಬ್ಯಾಕ್ ಮಾಡುವ ಮೂಲಕ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಯ್ತು. ಕೊನೆಗೆ ಸೂಪರ್ ಓವರ್‌ನಲ್ಲಿ ಸೂಪರ್ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಆರಂಭಿಕರ ವೈಫಲ್ಯದಿಂದಾಗಿ 9 ವಿಕೆಟ್ ಕಳೆದುಕೊಂಡು 137 ರನ್ ಮಾತ್ರವೇ ಕಲೆ ಹಾಕಿತು. ಇದಕ್ಕುತ್ತರವಾಗಿ ಗುರಿ ಬೆನ್ನಟ್ಟಿದ ಲಂಕಾ ಮತ್ತೊಮ್ಮೆ ಕೊನೆಯ ಕ್ಷಣದಲ್ಲಿ ಬ್ಯಾಟಿಂಗ್ ಕುರಿತದಿಂದಾಗಿ ಅಲ್ಪ ಗುರಿಯನ್ನು ತಲುಪದಂತಾಯ್ತು. ಕೊನೆಯ ಓವರ್‌ಗಳಲ್ಲಿ ಭಾರತದ ಬಿಗಿ ದಾಳಿಯಿಂದಾಗಿ 137 ರನ್‌ಗಳಿಸಿ ಪಂದ್ಯದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯ್ತು. ಹೀಗಾಗಿ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಲಾಯ್ತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ಕೇವಲ 2 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಹೀಗಾಗಿ ಕೇವಲ 3 ರನ್ ಗುರಿ ಪಡೆದ ಭಾರತವು, ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿ ಗೆದ್ದು ಬೀಗಿತು.
ಪಂದ್ಯ ಮಳೆಯಿಂದ ವಿಳಂಬ
ಕ್ಯಾಂಡಿಯಲ್ಲಿ ಮಳೆಯಿಂದಾಗಿ ವಿಳಂಬವಾದ ಪಂದ್ಯದಲ್ಲಿ ಟಾಸ್ ಗೆದ್ದ ಚರಿತ್ ಅಸಲಂಕಾ ನೇತೃತ್ವದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಈ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಯ್ತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತವು, ಲಂಕಾ ಸ್ಪಿನ್ನರ್ ಮಹೇಶ್ ತೀಕ್ಷಣ ದಾಳಿಗೆ ಬ್ಯಾಟ್ ಬೀಸಲು ಹೆಣಗಾಡಿತು. ಕಳೆದೆರಡು ಪಂದ್ಯಗಳಲ್ಲಿ ಸಿಡಿದಿದ್ದ ಯಶಸ್ವಿ ಜೈಸ್ವಾಲ್, 10 ರನ್‌ಗಳಿಗೆ ಔಟಾದರು. ಮೇಲಿಂದ ಮೇಲೆ ಸಂಜು ಸ್ಯಾಮ್ಸನ್, ರಿಂಕು ಸಿಂಗ್, ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಭಾರತ, ಆರು ಓವರ್‌ಗಳ ಒಳಗೆ 30 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು.
ಸಂಜು ಸ್ಯಾಮ್ಸನ್ ಅವರನ್ನು ಡಕ್ ಔಟ್ ಮಾಡುವ ಮೂಲಕ ಚಮಿಂದು ವಿಕ್ರಮಸಿಂಘೆ ಚೊಚ್ಚಲ ವಿಕೆಟ್ ಪಡೆದರು. ಆರನೇ ವಿಕೆಟ್ ಆಕರ್ಷಕ ಜೊತೆಯಾಟವಾಡಿದ ಗಿಲ್ ಮತ್ತು ಪರಾಗ್ 54 ರನ್ ಒಟ್ಟುಗೂಡಿಸಿದರು. ಇದು ಭಾರತದ ಮೊತ್ತವನ್ನು ನೂರರ ಗಡಿ ದಾಟಿಸಿತು. ಶುಭ್ಮನ್ ಗಿಲ್ 39 ರನ್ ಗಳಿಸಿದರೆ, ರಿಯಾನ್ ಪರಾಗ್ 26 ರನ್ ಪೇರಿಸಿದರು.
ಲಂಕಾ ಪರ ಮಹೇಶ್ ತೀಕ್ಷಣ 3 ಮತ್ತು ವನಿಂದು ಹಸರಂಗ 2 ವಿಕೆಟ್ ಕಬಳಿಸಿ ಮಿಂಚಿದರು.
ಭಾರತ ನೀಡಿದ ಅಲ್ಪ ಗುರಿಯನ್ನು ಬೆನ್ನಟ್ಟಲು ಬಂದ ಲಂಕಾ, ಕೊನೆಯ ಎರಡು ಪಂದ್ಯಗಳಂತೆಯೇ ಉತ್ತಮ ಆರಂಭ ಪಡೆಯಿತು. ಕುಸನ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ 58 ರನ್‌ಗಳ ಜೊತೆಯಾಟವಾಡಿದರು. ನಿಸ್ಸಂಕಾ 26 ರನ್ ಗಳಿಸಿ ಔಟಾದರೆ, ಮೆಂಡಿಸ್ 43 ರನ್ ಗಳಿಸಿ ಬಿಶ್ನೋಯ್‌ಗೆ ವಿಕೆಟ್ ಒಪ್ಪಿಸಿದರು.
ಅನಿರೀಕ್ಷಿತ ಕುಸಿತ ಕಂಡ ಲಂಕಾಗೆ ಮತ್ತೆ ಸೋಲಿನ ಪಾಠ
ಕೊನೆಯ 30 ಎಸೆತಗಳಲ್ಲಿ ಲಂಕಾ ಗೆಲುವಿಗೆ 30 ರನ್‌ಗಳು ಬೇಕಿದ್ದವು. ಅಲ್ಲದೆ ಕೈಯಲ್ಲಿ 9 ವಿಕೆಟ್‌ಗಳಿದ್ದವು. ಆದರೆ, ಕಳೆದೆರಡು ಪಂದ್ಯಗಳಲ್ಲಿ ಆದಂತೆ ಲಂಕಾ ಬ್ಯಾಟಿಂಗ್‌ನಲ್ಲಿ ಅನಿರೀಕ್ಷಿತ ಕುಸಿತ ಕಂಡಿತು. ಕೊನೆಯ 4.1 ಓವರ್‌ಗಳಲ್ಲಿ 22 ರನ್ ಆಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಕೊನೆಯ 2 ಓವರ್‌ಗಳಲ್ಲಿ ರಿಂಕು ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ತಲಾ 2 ವಿಕೆಟ್ ಕಬಳಿಸಿ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು.
