ಅಭಿಷೇಕ್ ಆಟಕ್ಕೆ ಬೆದರಿದ ಆಂಗ್ಲರು, 5ನೇ ಟಿ20ಯಲ್ಲೂ 150 ರನ್‌ಗಳಿಂದ ಸೋತ ಇಂಗ್ಲೆಂಡ್; 4-1 ಅಂತರದಿಂದ ಸರಣಿ ಗೆದ್ದ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಭಿಷೇಕ್ ಆಟಕ್ಕೆ ಬೆದರಿದ ಆಂಗ್ಲರು, 5ನೇ ಟಿ20ಯಲ್ಲೂ 150 ರನ್‌ಗಳಿಂದ ಸೋತ ಇಂಗ್ಲೆಂಡ್; 4-1 ಅಂತರದಿಂದ ಸರಣಿ ಗೆದ್ದ ಭಾರತ

ಅಭಿಷೇಕ್ ಆಟಕ್ಕೆ ಬೆದರಿದ ಆಂಗ್ಲರು, 5ನೇ ಟಿ20ಯಲ್ಲೂ 150 ರನ್‌ಗಳಿಂದ ಸೋತ ಇಂಗ್ಲೆಂಡ್; 4-1 ಅಂತರದಿಂದ ಸರಣಿ ಗೆದ್ದ ಭಾರತ

ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯನ್ನು ಭಾರತ ಗೆದ್ದು ಬೀಗಿದೆ. ಐದನೇ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡ 150 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್‌ ಶರ್ಮಾ ಸ್ಫೋಟಕ ಶತಕದ ನೆರವಿನಿಂದ ಪಂದ್ಯ ಗೆಲ್ಲುವ ಜತೆಗೆ ಸರಣಿಯನ್ನು 5-1 ಅಂತರದಿಂದ ವಶಪಡಿಸಿಕೊಂಡಿದೆ.

5ನೇ ಟಿ20ಯಲ್ಲೂ 150 ರನ್‌ಗಳಿಂದ ಸೋತ ಇಂಗ್ಲೆಂಡ್; 4-1 ಅಂತರದಿಂದ ಸರಣಿ ಗೆದ್ದ ಭಾರತ
5ನೇ ಟಿ20ಯಲ್ಲೂ 150 ರನ್‌ಗಳಿಂದ ಸೋತ ಇಂಗ್ಲೆಂಡ್; 4-1 ಅಂತರದಿಂದ ಸರಣಿ ಗೆದ್ದ ಭಾರತ (AP)

ಇಂಗ್ಲೆಂಡ್‌ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡ 150 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕದ ನೆರವಿನಿಂದ ಪಂದ್ಯ ಗೆಲ್ಲುವ ಜತೆಗೆ ಸರಣಿಯನ್ನು 5-1 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲಿಗೆ ಇಂಗ್ಲೆಂಡ್‌ ಬೌಲರ್‌ಗಳನ್ನು ದಂಡಿಸಿದ ಭಾರತ, ಆ ನಂತರ ಬ್ಯಾಟರ್‌ಗಳನ್ನು ಕಟ್ಟಿಹಾಕಿತು. ಫಿಲ್‌ ಸಾಲ್ಟ್‌ ಹೊರತಾಗಿ ಆಂಗ್ಲ ಬ್ಯಾಟರ್‌ಗಳು ಯಾರಿಂದಲೂ ಅಬ್ಬರಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಟಿ20 ಇತಿಹಾಸದಲ್ಲಿ ಇಂಗ್ಲೆಂಡ್‌ ತಂಡವು ರನ್‌ಗಳ ಅಂತರದಿಂದ ಬೃಹತ್‌ ಸೋಲನ್ನು ಅನುಭವಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 9 ವಿಕೆಟ್‌ ಕಳೆದುಕೊಂಡು 247 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡವು 10.3 ಓವರ್‌ಗಳಲ್ಲಿ 97 ರನ್‌ ಗಳಿಸಿ ಆಲೌಟ್‌ ಆಯ್ತು. ಭಾರತೀಯ ಬಲರ್‌ಗಳ ಸಾಂಘಿಕ ಹೋರಾಟಕ್ಕೆ ಇಂಗ್ಲೆಂಡ್‌ ಮಂಡಿಯೂರಿತು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್‌ ಮಾಡಿತು. ಅಬ್ಬರದ ಆರಂಭ ಪಡೆದ ಸಂಜು ಸ್ಯಾಮ್ಸನ್‌ ಮತ್ತೆ ಅಲ್ಪ ಮೊತ್ತಕ್ಕೆ ಔಟಾದರು. ಆದರೂ ನಿರ್ಭೀತ ಆಟ ಮುಂದುವರೆಸಿದ ಅಭಿಷೇಕ್ ಶರ್ಮಾ, ಪವರ್‌ಪ್ಲೇ ಲಾಭ ಪಡೆದು ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ ದಾಖಲಿಸಿರು, 37 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಅವರು, ಅಂತಿಮವಾಗಿ 54 ಎಸೆತಗಳಲ್ಲಿ 135 ರನ್‌ ಸಿಡಿಸಿ ಔಟಾದರು.

ತಿಲಕ್‌ ವರ್ಮಾ 24 ರನ್‌ ಗಳಿಸಿದರೆ, ನಾಯಕ ಸೂರ್ಯಕುಮಾರ್‌ ಯಾದವ್‌ ಮತ್ತೆ ವೈಫಲ್ಯ ಅನುಭಿಸಿ ಕೇವಲ 2 ರನ್‌ ಗಳಿಸಿದರು. ಶಿವಂ ದುಬೆ 30 ರನ್‌ ಗಳಿಸಿದರೆ, ಹಾರ್ದಿಕ್‌ ಪಾಂಡ್ಯ 9, ರಿಂಕು ಸಿಂಗ್‌ 9 ಹಾಗೂ ಅಕ್ಷರ್‌ ಪಟೇಲ್‌ 15 ರನ್‌ ಗಳಿಸಿದರು. ಇಂಗ್ಲೆಂಡ್‌ ಪರ ಬ್ರೈಡನ್‌ ಕಾರ್ಸ್‌ 3 ವಿಕೆಟ್‌ ಪಡೆದರು.

ಇಬ್ಬರ ಹೊರತಾಗಿ ಉಳಿದವರ ಒಂದಂಕಿ ಮೊತ್ತ

ಬೃಹತ್‌ ಮೊತ್ತ ಚೇಸಿಂಗ್‌ಗೆ ಇಳಿದ ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ 55 ರನ್‌ ಗಳಿಸಿದರು. ಇವರ ಹೊರತಾಗಿ ಎರಡಂಕಿ ಮೊತ್ತ ಗಳಿಸಿದ್ದು ಜಾಕೊಬ್‌ ಬೆಥೆಲ್‌ (10) ಮಾತ್ರ. ಉಳಿದಂತೆ ಎಲ್ಲರೂ ಒಂದಂಕಿ ಮೊತ್ತ ಗಳಿಸಿದ್ದಾಗಲೇ ವಿಕೆಟ್‌ ಒಪ್ಪಿಸಿದರು.

ಭಾರತದ ಪರ ಬಹುತೇಕ ಎಲ್ಲಾ ಬೌಲರ್‌ಗಳು ಯಶಸ್ವಿಯಾದರು. ಶಿವಂ ದುಬೆ ಹಾಗೂ ಅಭಿಷೇಕ್‌ ಶರ್ಮಾ ಕೂಡಾ ತಲಾ 2 ವಿಕೆಟ್‌ ಕಬಳಿಸಿದರು. ಸರಣಿಯಲ್ಲಿ ಮೊದಲ ಬಾರಿಗೆ ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ 3 ವಿಕೆಟ್‌ ಕಬಳಿಸಿದರು.

ಅಂತಿಮ ಪಂದ್ಯದಲ್ಲಿ ವರುಣ್‌ ಚಕ್ರವರ್ತಿ 2 ವಿಕೆಟ್‌ ಪಡೆದರು. ಇದರೊಂದಿಗೆ ಸರಣಿಯಲ್ಲಿ ಒಟ್ಟು 12 ವಿಕೆಟ್‌ ಪಡೆದ ಅವರು, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಏಕದಿನ ಸರಣಿ

ಈ ಗೆಲುವಿನೊಂದಿಗೆ ಭಾರತ ಚುಟುಕು ಸರಣಿಯನ್ನು ಮುಗಿಸಿದೆ. ಮುಂದೆ ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಆಡಲಿದೆ. ಫೆ.6ರಂದು ಮೊದಲು ಏಕದಿನ ಪಂದ್ಯವು ನಾಗ್ಪುರದಲ್ಲಿ ನಡೆಯಲಿದೆ. ಮಹತ್ವದ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಈ ಸರಣಿಯು ಉಭಯ ತಂಡಗಳಿಗೂ ಮುಖ್ಯವಾಗಿದೆ.

Whats_app_banner