Ireland vs India: ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಡಿಎಲ್‌ಎಸ್ ನಿಯಮದ ಪ್ರಕಾರ ಭಾರತಕ್ಕೆ 2 ರನ್‌ಗಳ ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  Ireland Vs India: ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಡಿಎಲ್‌ಎಸ್ ನಿಯಮದ ಪ್ರಕಾರ ಭಾರತಕ್ಕೆ 2 ರನ್‌ಗಳ ಜಯ

Ireland vs India: ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಡಿಎಲ್‌ಎಸ್ ನಿಯಮದ ಪ್ರಕಾರ ಭಾರತಕ್ಕೆ 2 ರನ್‌ಗಳ ಜಯ

Ireland vs India 1st T20I: ಡಿಎಲ್‌ಎಸ್‌ ನಿಯಮದ ಪ್ರಕಾರ ಭಾರತವು 2 ರನ್‌ಗಳ ಮುನ್ನಡೆಯಲ್ಲಿದ್ದ ಕಾರಣ ಭಾರತ ತಂಡವನ್ನು ವಿಜೇತ ಎಂದು ಘೋಷಿಸಲಾಯ್ತು.

ಟೀಮ್‌ ಇಂಡಿಯಾ ಆಟಗಾರರ ಸಂಭ್ರಮ
ಟೀಮ್‌ ಇಂಡಿಯಾ ಆಟಗಾರರ ಸಂಭ್ರಮ

ಐರ್ಲೆಂಡ್‌ ವಿರುದ್ಧದ ಟಿ20 ಸರಣಿಯ (Ireland vs India) ಮೊದಲ ಪಂದ್ಯವನ್ನು ಭಾರತ 2 ರನ್‌ಗಳಿಂದ ಗೆದ್ದುಕೊಂಡಿದೆ. ಭಾರತದ ಚೇಸಿಂಗ್‌ ವೇಳೆ ಮಳೆ ಅಡ್ಡಿಯಾದ ಕಾರಣದಿಂದ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಡಿಎಲ್‌ಎಸ್‌ ನಿಯಮದ ಪ್ರಕಾರ ಭಾರತವು 2 ರನ್‌ಗಳ ಮುನ್ನಡೆಯಲ್ಲಿದ್ದ ಕಾರಣ ಭಾರತ ತಂಡವನ್ನು ವಿಜೇತ ಎಂದು ಘೋಷಿಸಲಾಯ್ತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್‌, 7 ವಿಕೆಟ್ ಕಳೆದುಕೊಂಡು 139 ರನ್‌ ಕಲೆ ಹಾಕಿತು. ಸಾಧಾರಣ ಗುರಿ ಬೆನ್ನಟ್ಟಿದ ಭಾರತವು ಉತ್ತಮ ಆರಂಭ ಪಡೆಯಿತು. 6.5 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 47 ರನ್‌ ಗಳಿಸಿ ಆಡುತ್ತಿದ್ದಾಗ ಮಳೆ ಆರಂಭವಾಯ್ತು. ಹೀಗಾಗಿ ಪಂದ್ಯವನ್ನು ಕೆಲಕಾಲ ಮುಂದೂಡಲಾಯ್ತು. ಮಳೆ ನಿಲ್ಲದ ಕಾರಣದಿಂದ ಡಿಎಲ್‌ಎಸ್‌ ನಿಯಮದ ಪ್ರಕಾರ ಭಾರತ ತಂಡಕ್ಕೆ ಗೆಲುವು ಲಭಿಸಿತು. 2 ರನ್‌ಗಳಿಂದ ಮುನ್ನಡೆಯಲ್ಲಿದ್ದ ಭಾರತ ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಭಾರತದ ಪರ ಯಶಸ್ವಿ ಜೈಸ್ವಾಲ್‌ 24 ರನ್‌ ಗಳಿಸಿ ಔಟಾದರೆ, ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಿಲಕ್‌ ವರ್ಮಾ ಗೋಲ್ಡನ್‌ ಡಕ್‌ಗೆ ಬಲಿಯಾದರು. ರುತುರಾಜ್‌ ಗಾಯಕ್ವಾಡ್‌ ಅಜೇಯ 19 ರನ್‌ ಗಳಿಸಿದರು.

ಕುಸಿದ ಐರ್ಲೆಂಡ್‌ಗೆ ಬ್ಯಾರಿ ಮೆಕಾರ್ಥಿ ಬಲ

ಮೊದಲು ಬ್ಯಾಟಿಂಗ್‌ ನಡೆಸಿದ ಐರ್ಲೆಂಡ್‌, ಬ್ಯಾಟಿಂಗ್‌ನಲ್ಲಿ ಕುಸಿತ ಕಂಡಿತು. ಗಾಯಗೊಂಡು ಸುದೀರ್ಘ ಅಂತರದ ಬಳಿಕ ಮೈದಾನಕ್ಕಿಳಿದ ನಾಯಕ ಹಾಗೂ ವೇಗಿ ಜಸ್ಪ್ರೀತ್‌ ಬೂಮ್ರಾ, ಮೊದಲ ಓವರ್‌ನಲ್ಲೇ ಐರ್ಲೆಂಡ್‌ ತಂಡದ ಮೊದಲ ಎರಡು ವಿಕೆಟ್‌ ಕಬಳಿಸಿದರು. ಆ ಮೂಲಕ ಟೀಮ್‌ ಇಂಡಿಯಾ ಆರಂಭಿಕ ಮುನ್ನಡೆ ಸಾಧಿಸಿತು. ಬಾಲ್ಬಿರ್ನಿ ಒಂದು ಬೌಂಡರಿ ಸಿಡಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬಂದ ಟಕ್ಕರ್‌ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಸ್ಟಿರ್ಲಿಂಗ್‌ ಆಟ 11 ರನ್‌ಗಳಿಗೆ ಅಂತ್ಯವಾಯ್ತು.

ಒಂದು ಹಂತದಲ್ಲಿ ತಂಡಕ್ಕೆ ತುಸು ಬಲ ತುಂಬಿದ ಕರ್ಟಿಸ್ ಕ್ಯಾಂಫರ್ ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿ 39 ರನ್‌ ಕಲೆ ಹಾಕಿದರು. ಮತ್ತೊಂದೆಡೆ ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ಬ್ಯಾರಿ ಮೆಕಾರ್ಥಿ 51 ರನ್‌ ಗಳಿಸುವುದರೊಂದಿಗೆ ಕೊನೆಯ ಎಸೆತದಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಭರ್ಜರಿ ನಾಲ್ಕು ಸಿಕ್ಸರ್‌ ಸಿಡಿಸಿದ ಅವರು, ತಂಡದ ಮೊತ್ತವನ್ನು ಸ್ಪರ್ಧಾತ್ಮಕ ಮೊತ್ತವಾಗಿಸಿದರು.

ಟೀಮ್‌ ಇಂಡಿಯಾ ಪರ ನಾಯಕ ಬೂಮ್ರಾ 2 ವಿಕೆಟ್‌ ಕಬಳಿಸಿದರೆ, ಪ್ರಸಿದ್ಧ ಕೃಷ್ಣ ಹಾಗೂ ರವಿ ಬಿಷ್ಣೋಯ್‌ ಕೂಡಾ ತಲಾ 2 ವಿಕೆಟ್‌ ಪಡೆದರು. ಅರ್ಷದೀಪ್‌ ಒಂದು ವಿಕೆಟ್‌ ಪಡೆದರು. ನಾಯಕನಾಟವಾಡಿದ ಬೂಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಮೈದಾನಕ್ಕಿಳಿಯುವುದರೊಂದಿಗೆ ಬೂಮ್ರಾ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಚುಟುಕು ಸ್ವರೂಪದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಮೊದಲ ಬೌಲರ್ ಎಂಬ ಇತಿಹಾಸವನ್ನು ಬೂಮ್ರಾ ನಿರ್ಮಿಸಿದ್ದಾರೆ.

ಭಾರತ ತಂಡ

ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅ‌ರ್ಷದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ (ನಾಯಕ), ರವಿ ಬಿಷ್ಣೋಯ್.

ಐರ್ಲೆಂಡ್ ತಂಡ

ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿಕೆಟ್‌ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್.

Whats_app_banner