ಕನ್ನಡ ಸುದ್ದಿ  /  ಕ್ರಿಕೆಟ್  /  ಸೂರ್ಯ-ದುಬೆ ಬೊಂಬಾಟ್ ಆಟ, ಅರ್ಷದೀಪ್ ಬೆಂಕಿ ಬೌಲಿಂಗ್; ಅಮೆರಿಕ ವಿರುದ್ಧ ಗೆದ್ದು ಸೂಪರ್​​-8ಕ್ಕೆ ಪ್ರವೇಶಿಸಿದ ಭಾರತ

ಸೂರ್ಯ-ದುಬೆ ಬೊಂಬಾಟ್ ಆಟ, ಅರ್ಷದೀಪ್ ಬೆಂಕಿ ಬೌಲಿಂಗ್; ಅಮೆರಿಕ ವಿರುದ್ಧ ಗೆದ್ದು ಸೂಪರ್​​-8ಕ್ಕೆ ಪ್ರವೇಶಿಸಿದ ಭಾರತ

USA vs India highlights: ಟಿ20 ವಿಶ್ವಕಪ್ 2024 ಅಮೆರಿಕ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಸೂಪರ್​​-8ಕ್ಕೆ ಪ್ರವೇಶಿಸಿದೆ.

ಅಮೆರಿಕ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು; ಸೂಪರ್​​-8ಕ್ಕೆ ಪ್ರವೇಶಿಸಿದ ರೋಹಿತ್ ಪಡೆ, ಪಾಕ್ ಆಸೆ ಜೀವಂತ!
ಅಮೆರಿಕ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು; ಸೂಪರ್​​-8ಕ್ಕೆ ಪ್ರವೇಶಿಸಿದ ರೋಹಿತ್ ಪಡೆ, ಪಾಕ್ ಆಸೆ ಜೀವಂತ! (PTI)

ಅಮೆರಿಕ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಟಿ20 ವಿಶ್ವಕಪ್ 2024ರಲ್ಲಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ. ಸತತ 3 ಗೆಲುವು ಸಾಧಿಸಿದ ಭಾರತ ತಂಡ ಎ ಗುಂಪಿನಲ್ಲಿ ಮೊದಲ ತಂಡವಾಗಿ ಮತ್ತೊಂದು ಸುತ್ತಿಗೆ ಪ್ರವೇಶಿಸಿದೆ. ಅಮೆರಿಕ ಮಾರಕ ಬೌಲಿಂಗ್ ದಾಳಿಯ ನಡುವೆಯೂ ಸೂರ್ಯಕುಮಾರ್ ಮತ್ತು ಶಿವಂ ದುಬೆ ಅವರು ಅದ್ಬುತ ಜೊತೆಯಾಟವಾಡಿ 7 ವಿಕೆಟ್​ಗಳ ಗೆಲುವಿಗೆ ಪ್ರಮುಖ ಕಾರಣರಾದರು.

ಮತ್ತೊಂದೆಡೆ ಸೋತ ಅಮೆರಿಕ ಸೂಪರ್-8 ಪ್ರವೇಶಿಸಲು ತನ್ನ ಮುಂದಿನ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಆದರೆ ಅಮೆರಿಕ ಸೋಲು ಪಾಕಿಸ್ತಾನಕ್ಕೆ ಲಾಭ ತಂದುಕೊಟ್ಟಿದೆ. ಇದೀಗ ಸೂಪರ್​-8 ಪ್ರವೇಶಿಸಲು ಪಾಕ್ ತನ್ನ ಮುಂದಿನ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ ಉತ್ತಮ ರನ್​ರೇಟ್ ಕಾಯ್ದುಕೊಳ್ಳಬೇಕು. ಆದರೆ, ಅಮೆರಿಕ ಕೊನೆಯ ಪಂದ್ಯದಲ್ಲಿ ಸೋತರೆ ಮಾತ್ರ ಪಾಕ್​ಗೆ ಅವಕಾಶ ಸಿಗಲಿದೆ.

ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಯುಎಸ್​ಎ, ಅರ್ಷದೀಪ್ ಸಿಂಗ್ ಬೌಲಿಂಗ್ ದಾಳಿಗೆ ನಲುಗಿತು. 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಸಹ ರನ್ ಗಳಿಸಲು ಪರದಾಡಿತು. ಆದರೆ ಸೂರ್ಯ ಮತ್ತು ಶಿವಂ ದುಬೆ ಅದ್ಭುತ ಪ್ರದರ್ಶನ ತೋರುವ ಮೂಲಕ ತಂಡವನ್ನು ಗೆಲುವಿನ ಗೆರೆ ದಾಟಿಸಿದರು. 18.2 ಓವರ್​​ಗಳಲ್ಲಿ 3 ವಿಕೆಟ್ ನಷ್ಟದೊಂದಿಗೆ ಭಾರತ ಗೆದ್ದು ಬೀಗಿತು.

ಟ್ರೆಂಡಿಂಗ್​ ಸುದ್ದಿ

ಸೂರ್ಯ-ಶಿವಂ ದುಬೆ ಬೊಂಬಾಟ್ ಜೊತೆಯಾಟ

ಸುಲಭ ಗುರಿ ಹಿಂಬಾಲಿಸಿದ ಟೀಮ್ ಇಂಡಿಯಾ, ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಡಕೌಟ್ ಆದರು. ರೋಹಿತ್​​ ಶರ್ಮಾ 3 ರನ್​ಗೆ ಸುಸ್ತಾದರು. ಈ ಇಬ್ಬರನ್ನೂ ನೇತ್ರಾವಲ್ಕರ್ ಔಟ್ ಮಾಡಿದರು. ಆ ಬಳಿಕ ರಿಷಭ್ ಚೇತರಿಕೆ ನೀಡಲು ಯತ್ನಿಸಿದರು. ಆದರೆ 18 ರನ್ ಗಳಿಸಿ ಔಟಾದರು. ಆ ನಂತರ ಮಾರಕ ದಾಳಿಯ ನಡುವೆಯೂ ಸೂರ್ಯಕುಮಾರ್ ಮತ್ತು ಶಿವಂ ದುಬೆ ಮಿಂಚಿದರು. ಔಟಾಗದೆಯೇ ಕೊನೆಯವರೆಗೂ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಅಮೆರಿಕ ಬೌಲರ್​​ಗಳ ಅದ್ಭುತ ದಾಳಿಯ ನಡುವೆಯೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 72 ರನ್​ಗಳ ಅಜೇಯ ಪಾಲುದಾರಿಕೆ ಒದಗಿಸಿತು. ಈ ನಡುವೆ ಸೂರ್ಯ ಅರ್ಧಶತಕ ಸಿಡಿಸಿ ಮಿಂಚಿದರು. ಈ ಅರ್ಧಶತಕ ಬಾರಿಸಲು ಸೂರ್ಯ ತೆಗೆದುಕೊಂಡಿದ್ದು 49 ಎಸೆತಗಳನ್ನು. ಶಿವಂ ದುಬೆ 31 ರನ್ ಗಳಿಸಿ ಅಜೇಯರಾಗಿ ಉಳಿದರು. ನೇತ್ರಾವಲ್ಕರ್ 2 ವಿಕೆಟ್ ಪಡೆದು ಮಿಂಚಿದರೂ, ಉಳಿದ ಬೌಲರ್​ಗಳಿಂದ ಸಾಥ್ ಸಿಗಲಿಲ್ಲ.

ಅರ್ಷದೀಪ್ ದಾಳಿಗೆ ಬೆದರಿದ ಅಮೆರಿಕ

ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ, ಅರ್ಷದೀಪ್ ಸಿಂಗ್ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಓವರ್​​ನಲ್ಲೇ 2 ವಿಕೆಟ್​​​ಗಳನ್ನು ಕಳೆದುಕೊಂಡಿತು. ಶಯಾನ್ ಜಹಾಂಗೀರ್ (0), ಆಂಡ್ರೀಸ್ ಗೌಸ್ (2), ಅರ್ಷದೀಪ್ ಸಿಂಗ್ ಎಸೆದ ಮೊದಲ ಓವರ್​ನಲ್ಲೇ ಔಟಾದರು. ನಂತರ ಆರನ್ ಜೋನ್ಸ್ 11 ರನ್ ಗಳಿಸಿ ಹಾರ್ದಿಕ್ ಬೌಲಿಂಗ್​​ನಲ್ಲಿ ಹೊರ ನಡೆದರು. ಕಠಿಣ ಪಿಚ್​ನಲ್ಲಿ ಸತತ ವಿಕೆಟ್​ಗಳ ನಡುವೆಯೂ ಸ್ಟೀವನ್ ಟೇಲರ್ 24, ನಿತೀಶ್ ಕುಮಾರ್ 27 ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು.

ಅಕ್ಷರ್​ ಪಟೇಲ್ ಬೌಲಿಂಗ್​​ನಲ್ಲಿ ಸ್ಟೀವನ್ ಟೇಲರ್​​ ಔಟಾದರೆ, ಜಸ್ಪೀತ್ ಬುಮ್ರಾ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಆದರೆ ಮತ್ತೆ ದಾಳಿಗಿಳಿದ ಅರ್ಷದೀಪ್ ಮತ್ತು ಹಾರ್ದಿಕ್ ಪಾಂಡ್ಯ ಅಮೆರಿಕ ಬ್ಯಾಟಿಂಗ್​ ವಿಭಾಗಕ್ಕೆ ಮತ್ತೆ ಆಘಾತ ನೀಡಿದರು. ಕೋರಿ ಆ್ಯಂಡರ್ಸನ್ 15, ಹರ್ಮೀತ್ ಸಿಂಗ್ 10, ಶಾಡ್ಲಿ ವ್ಯಾನ್ ಶಾಲ್ಕ್ವಿಕ್ 11 ರನ್ ಗಳಿಸಿದರು. ಅರ್ಷದೀಪ್ ಒಟ್ಟು 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಿತ್ತರು. ಅಕ್ಷರ್ 1 ವಿಕೆಟ್ ಪಡೆದರು.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ