ಇಂಗ್ಲೆಂಡ್ ವಿರುದ್ಧ 79 ರನ್​ಗಳ ಗೆಲುವು; ದೈಹಿಕ ವಿಕಲಚೇತನರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧ 79 ರನ್​ಗಳ ಗೆಲುವು; ದೈಹಿಕ ವಿಕಲಚೇತನರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ

ಇಂಗ್ಲೆಂಡ್ ವಿರುದ್ಧ 79 ರನ್​ಗಳ ಗೆಲುವು; ದೈಹಿಕ ವಿಕಲಚೇತನರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ

Physical Disability Champions Trophy: ಪಿಡಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ 79 ರನ್​ಗಳ ಅಂತರದಿಂದ ಗೆಲ್ಲುವ ಮೂಲಕ ಭಾರತ ದೈಹಿಕವಿಕಲಚೇತನರ ಕ್ರಿಕೆಟ್ ತಂಡವು ಐತಿಹಾಸಿಕ ಸಾಧನೆ ಮಾಡಿದೆ.

ಇಂಗ್ಲೆಂಡ್ ವಿರುದ್ಧ 79 ರನ್​ಗಳ ಗೆಲುವು; ದೈಹಿಕ ವಿಕಲಚೇತನರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ
ಇಂಗ್ಲೆಂಡ್ ವಿರುದ್ಧ 79 ರನ್​ಗಳ ಗೆಲುವು; ದೈಹಿಕ ವಿಕಲಚೇತನರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ

ಪಿಡಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತೀಯ ದೈಹಿಕ ವಿಕಲಚೇತನರ ಕ್ರಿಕೆಟ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊಲಂಬೊದ ಕಟುನಾಯಕೆ ಎಫ್ಟಿಝಡ್ ಕ್ರಿಕೆಟ್ ಮೈದಾನದಲ್ಲಿ ಜರುಗಿದ ರೋಚಕ ಫೈನಲ್​ ಪಂದ್ಯದಲ್ಲಿ ಬ್ರಿಟಿಷರ ತಂಡವನ್ನು 79 ರನ್​ಗಳ ಅಂತರದಿಂದ ಸೋಲಿಸಿದ ಭಾರತ ತಂಡವು ಟ್ರೋಫಿಗೆ ಮುತ್ತಿಕ್ಕಿದೆ. ಆ ಮೂಲಕ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಯೋಗೇಂದ್ರ ಬಧೋರಿಯಾ ಅವರ (40 ಎಸೆತಗಳಲ್ಲಿ 4 ಬೌಂಡರಿ ಮತ್ತು ಐದು ಸಿಕ್ಸರ್ ಸಹಿತ 73 ರನ್) ಅರ್ಧಶತಕದ ನೆರವಿನಿಂದ ಭಾರತ 20 ಓವರ್​​ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್​ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 118 ರನ್​ಗಳಿಗೆ ಸರ್ವಪತನ ಕಂಡಿತು. ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡದ ಇಂಗ್ಲೆಂಡ್ ಪರ ಅಲೆಕ್ಸ್ ಹಮ್ಮೊಂಡ್ 35 ಎಸೆತಗಳಲ್ಲಿ 35 ರನ್ ಸಿಡಿಸಿ ಗಮನ ಸೆಳೆದರು.

ಬೌಲಿಂಗ್ ವಿಭಾಗದಲ್ಲಿ ಭಾರತದ ಪರ ರಾಧಿಕಾ ಪ್ರಸಾದ್ 3.2 ಓವರ್​​ಗಳಲ್ಲಿ 19 ರನ್​​ಗೆ 4 ವಿಕೆಟ್ ಪಡೆದು ಮಿಂಚಿದರು. ನಾಯಕ ವಿಕ್ರಾಂತ್ ಕೇನಿ ಮೂರು ಓವರ್​​ಗಳಲ್ಲಿ 15 ರನ್​ಗೆ 2 ವಿಕೆಟ್​ ಪಡೆಯುವ ಮೂಲಕ ತಮ್ಮ ಆಲ್​ರೌಂಡ್​ ಸಾಮರ್ಥ್ಯ ಪ್ರದರ್ಶಿಸಿದರು. ರವೀಂದ್ರ ಸಂತೆ ಅವರು ತಮ್ಮ 4 ಓವರ್​​​ಗಳ ಸ್ಪೆಲ್​ನಲ್ಲಿ 24 ರನ್​ಗೆ 2 ವಿಕೆಟ್ ಕಿತ್ತಿದರು.

ಪ್ರತಿಯೊಬ್ಬ ವಿಕಲಚೇತನ ವ್ಯಕ್ತಿಗೆ ಸೇರಿದ್ದು ಎಂದ ನಾಯಕ

ಗೆಲುವಿನ ನಂತರ ಭಾರತ ತಂಡದ ನಾಯಕ ವಿಕ್ರಾಂತ್ ಮಾತನಾಡಿ, ‘ಪಿಡಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸುವುದು ನನ್ನ ವೃತ್ತಿಜೀವನದ ಹೆಮ್ಮೆಯ ಕ್ಷಣವಾಗಿದೆ. ಇದು ತಂಡದಲ್ಲಿನ ಪ್ರತಿಭೆ ಮತ್ತು ಹೋರಾಟದ ಮನೋಭಾವ ತೋರಿಸುತ್ತದೆ. ಪ್ರತಿಯೊಬ್ಬ ಆಟಗಾರನು ಈ ಐತಿಹಾಸಿಕ ಸಾಧನೆಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಈ ಟ್ರೋಫಿ ನಮಗೆ ಮಾತ್ರವಲ್ಲ, ಭಾರತ ದೇಶಕ್ಕಾಗಿ ಕ್ರಿಕೆಟ್ ಆಡುವ ಕನಸು ಕಂಡ ಪ್ರತಿಯೊಬ್ಬ ವಿಕಲಚೇತನ ವ್ಯಕ್ತಿಗೆ ಸೇರಿದೆ ಎಂದು ಹೇಳಿದ್ದಾರೆ.

ಮುಖ್ಯ ಕೋಚ್ ರೋಹಿತ್ ಜಲಾನಿ ಅವರು ತಮ್ಮ ತಂಡದ ಅಸಾಧಾರಣ ಪ್ರದರ್ಶನ ಮತ್ತು ಸಿದ್ಧತೆಯನ್ನು ಶ್ಲಾಘಿಸಿದ್ದಾರೆ. ‘ಹುಡುಗರು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿಸಿದರು. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಂಡರು. ಪ್ರತಿ ಸವಾಲನ್ನು ಎದುರಿಸಿದರು’ ಎಂದು ಹೇಳಿದ್ದಾರೆ.

‘ಇತರರಿಗೆ ಇದು ಸ್ಫೂರ್ತಿ’

ಬಿಸಿಸಿಐ ವಿಕಲಚೇತನರ ಕ್ರಿಕೆಟ್ ಸಮಿತಿಯ ಸದಸ್ಯ ರವಿ ಚೌಹಾಣ್ ಅವರು ತಂಡದ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಈ ಗೆಲುವು ನಮ್ಮ ಆಟಗಾರರ ಅವಿರತ ಉತ್ಸಾಹ ಮತ್ತು ಭಾರತದಲ್ಲಿ ವಿಕಲಚೇತನರ ಕ್ರಿಕೆಟ್​​ನಲ್ಲಿ ಬೆಳೆಯುತ್ತಿರುವ ಶಕ್ತಿಗೆ ಸಾಕ್ಷಿಯಾಗಿದೆ. ಡಿಸಿಸಿಐ ಯಾವಾಗಲೂ ನಮ್ಮ ಕ್ರಿಕೆಟಿಗರ ಸಾಮರ್ಥ್ಯವನ್ನು ನಂಬಿದ್ದು, ಇಂದು ಅವರು ವಿಶ್ವ ವಿಜೇತರು ಎಂದು ಸಾಬೀತುಪಡಿಸಿದ್ದಾರೆ. ಈ ಗೆಲುವು ಅಸಂಖ್ಯಾತ ಇತರರಿಗೆ ಕ್ರೀಡೆಯನ್ನು ತೆಗೆದುಕೊಳ್ಳಲು, ಅವರ ಕನಸುಗಳನ್ನು ಬೆನ್ನಟ್ಟಲು ಸ್ಫೂರ್ತಿ ನೀಡುತ್ತದೆ’ ಎಂದು ಹೇಳಿದ್ದಾರೆ.

Whats_app_banner