5 ವಿಕೆಟ್ ಕಬಳಿಸಿ ಮಿಂಚಿದ ದೀಪ್ತಿ ಶರ್ಮಾ; ಸಚಿನ್ ಸೇರಿದಂತೆ ದಿಗ್ಗಜರ ಎಲೈಟ್ ಪಟ್ಟಿಗೆ ಆಲ್ರೌಂಡರ್
Deepti Sharma: ವಾಂಖೆಡೆ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವನಿತಾ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ದೀಪ್ತಿ ಶರ್ಮಾ 5 ವಿಕೆಟ್ ಪಡೆದು ವಿಶೇಷ ದಾಖಲೆ ಬರೆದಿದ್ದಾರೆ.
ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ (India vs Australia Womens 2nd ODI) ಐದು ವಿಕೆಟ್ಗಳ ಗೊಂಚಲು ಪಡೆದ ಭಾರತ ವನಿತೆಯರ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಆಲ್ರೌಂಡರ್ ದೀಪ್ತಿ ಶರ್ಮಾ (Deepti Sharma) ಪಾತ್ರರಾಗಿದ್ದಾರೆ. ಡಿಸೆಂಬರ್ 30ರಂದು ಶನಿವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ಜರುಗಿದ ಎರಡನೇ ಏಕದಿನ ಪಂದ್ಯದಲ್ಲಿ ದೀಪ್ತಿ, ಈ ವಿಶೇಷ ಸಾಧನೆ ಮಾಡುವ ಮೂಲಕ ದಿಗ್ಗಜರ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಮುಂಬೈನ ಐಕಾನಿಕ್ ವಾಂಖೆಡೆಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನದಲ್ಲಿ ಆಲ್ರೌಂಡರ್ ದೀಪ್ತಿ ಶರ್ಮಾ, ತನ್ನ 10 ಓವರ್ಗಳ ಬೌಲಿಂಗ್ ಕೋಟಾದಲ್ಲಿ 38 ರನ್ ಬಿಟ್ಟು ಕೊಟ್ಟು ಭರ್ಜರಿ 5 ವಿಕೆಟ್ ಉರುಳಿಸಿದರು. ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದ್ದಲ್ಲದೆ, ರನ್ ವೇಗವನ್ನು ನಿಯಂತ್ರಿಸುವಲ್ಲಿ ಯಶಸ್ಸು ಕಂಡರು. ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಹಿಲಾ ಮೆಗ್ರಾತ್, ಅನ್ನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್ರನ್ನು ಔಟ್ ಮಾಡಿದರು.
ದೀಪ್ತಿ ಶರ್ಮಾ ದಾಖಲೆ
ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಏಕದಿನ ಪಂದ್ಯಗಳಲ್ಲಿ ಭಾರತದ ಮಾಜಿ ಆಟಗಾರ್ತಿ ನೂಶಿನ್ ಅಲ್ ಖದೀರ್ ಅವರ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ದೀಪ್ತಿ ಮುರಿದಿದ್ದಾರೆ. 2006ರಲ್ಲಿ ನೂಶಿಲ್ ಅವರು ಅಡಿಲೇಡ್‌ನಲ್ಲಿ ಆಸೀಸ್ ವಿರುದ್ಧ 4 ವಿಕೆಟ್ ಪಡೆದಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಅಂದು 10 ಓವರ್ಗಳಲ್ಲಿ 41 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದೀಗ ಈ ದಾಖಲೆ ಐದು ವಿಕೆಟ್ ಉರುಳಿಸಿದ ದೀಪ್ತಿ ಶರ್ಮಾ ಪಾಲಾಗಿದೆ.
ಅಲ್ಲದೆ, ಈ ದಾಖಲೆಯೊಂದಿಗೆ ಭಾರತೀಯ ಕ್ರಿಕೆಟ್ ದಿಗ್ಗಜರ ಕ್ರಿಕೆಟಿಗರೊಂದಿಗೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳಾ ಕ್ರಿಕೆಟ್ನಲ್ಲಿ ದೀಪ್ತಿ ಮಾತ್ರ ಆಸೀಸ್ ಎದುರು 5 ವಿಕೆಟ್ಗಳ ಸಾಧನೆ ಮಾಡಿದ್ದರೆ, ಪುರುಷರ ಕ್ರಿಕೆಟ್ನಲ್ಲಿ ಮುರಳಿ ಕಾರ್ತಿಕ್, ಯುಜ್ವೇಂದ್ರ ಚಹಲ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಶಮಿ ಕೂಡ ಸೇರಿದಂತೆ 8 ಮಂದಿ ಈ ಸಾಧನೆಗೈದಿದ್ದಾರೆ. ಇದೀಗ ದೀಪ್ತಿ ಆಸೀಸ್ ವಿರುದ್ಧ 5 ವಿಕೆಟ್ ಕಬಳಿಸಿದ 8ನೇ ಭಾರತೀಯರಾಗಿದ್ದಾರೆ.
ದೀಪ್ತಿ ಬೆಂಕಿ ಬೌಲಿಂಗ್ ನಡುವೆಯೂ ಸೋತ ಭಾರತ
ಎರಡನೇ ಏಕದಿನದಲ್ಲಿ ದೀಪ್ತಿ ಅವರ ಬೆಂಕಿ ಬೌಲಿಂಗ್ ನಡುವೆಯೂ ಭಾರತ ವನಿತಾ ತಂಡವು ರೋಚಕ ಸೋಲನುಭವಿಸಿತು. ಕೇವಲ 3 ರನ್ಗಳ ಅಂತರದಿಂದ ಶರಣಾಯಿತು. ಇದರೊಂದಿಗೆ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 0-2 ಅಂತರದಲ್ಲಿ ಸರಣಿ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, 8 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತ್ತು. ಆದರೆ ಭಾರತ ಅಷ್ಟೇ ವಿಕೆಟ್ಗಳೊಂದಿಗೆ 255 ರನ್ಗಳಿಸಿ ಇನ್ನಿಂಗ್ಸ್ ಕೊನೆಗೊಳಿಸಿ 3 ರನ್ಗಳಿಂದ ಸೋಲುವಂತಾಯಿತು.
ಟೆಸ್ಟ್ನಲ್ಲೂ ಮಿಂಚಿದ್ದ ದೀಪ್ತಿ
ದೀಪ್ತಿ ಈ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 78 ನಿರ್ಣಾಯಕ ರನ್ ಗಳಿಸಿದ್ದಲ್ಲದೆ, 2 ವಿಕೆಟ್ ಸಹ ಕಿತ್ತಿದ್ದರು. ಅಲ್ಲದೆ, ಅದಕ್ಕೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಐದು ವಿಕೆಟ್ ಉರುಳಿಸಿದ್ದರು. ಹಾಗೆಯೇ 83 ಸಹ ಸಿಡಿಸಿದ್ದರು. ಆ ಮೂಲಕ ಈ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.