ಅಂಡರ್ 19 ವನಿತೆಯರ ಟಿ20 ವಿಶ್ವಕಪ್: ಇಂಗ್ಲೆಂಡ್ ಮಣಿಸಿ ಫೈನಲ್ ಲಗ್ಗೆ ಇಟ್ಟ ಭಾರತ, ದಕ್ಷಿಣ ಆಫ್ರಿಕಾ ಎದುರಾಳಿ
ಭಾರತ ವನಿತೆಯರ ತಂಡವು ಅಂಡರ್ 19 ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಎದುರಿಸಿದ ತಂಡವನ್ನೇ ಸೆಮೀಸ್‌ನಲ್ಲಿ ಮಣಿಸಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಫೈನಲ್‌ನಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಎದುರಾಳಿ.

ಭಾರತ ಅಂಡರ್ 19 ವನಿತೆಯರ ತಂಡವು ಸತತ ಎರಡನೇ ಟಿ20 ವಿಶ್ವಕಪ್ ಗೆಲುವಿಗೆ ಕೇವಲ ಒಂದು ಹೆಜ್ಜೆ ಹಿಂದಿದೆ. ಹಾಲಿ ಚಾಂಪಿಯನ್ ತಂಡವು, ಇಂಗ್ಲೆಂಡ್ ವಿರುದ್ಧದ (India Women U19 vs England Women U19) ಸೆಮಿಫೈನಲ್ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯಸಾಧಿಸಿ ಫೈನಲ್ ಪ್ರವೇಶಿಸಿದೆ. ಆರಂಭಿಕ ಆಟಗಾರ್ತಿ ಕಮಲಿನಿ ಅವರ ಅರ್ಧಶತಕ ಹಾಗೂ ಸ್ಪಿನ್ನರ್‌ಗಳ ನಿಖರತೆ ದಾಳಿಯ ನೆರವಿಂದ ಭಾರತ ತಂಡವು ಅಂಡರ್ 19 ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆ ಹಾಕಿದೆ. ತಂಡವು ಪ್ರಶಸ್ತಿ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಭಾನುವಾರ (ಫೆಬ್ರುವರಿ 2) ಫೈನಲ್ ಪಂದ್ಯ ನಡೆಯಲಿದ್ದು, ಭಾರತ ತಂಡವು ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಎದುರಿಸಿದ ತಂಡವನ್ನೇ ಸೆಮೀಸ್‌ನಲ್ಲಿ ಮಣಿಸಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಅತ್ತ ಮತ್ತೊಂದು ಸೆಮಿಕದನದಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿರುವ ದಕ್ಷಿಣ ಆಫ್ರಿಕಾ ವನಿತೆಯರ ತಂಡವು, ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಕಳೆದ ವರ್ಷ ನಡೆದ ಪುರುಷರ ಟಿ20 ವಿಶ್ವಕಪ್‌ನಲ್ಲೂ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಇದೀಗ ವನಿತೆಯರ ಅಂಡರ್ 19 ವಿಶ್ವಕಪ್‌ನಲ್ಲೂ ಈ ತಂಡಗಳೇ ಎದುರಾಗುತ್ತಿವೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, 8 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯ್ತು. ಭಾರತದ ಪರ ಎಡಗೈ ಸ್ಪಿನ್ನರ್‌ಗಳಾದ ಪರುನಿಕಾ ಸಿಸೋಡಿಯಾ (21ಕ್ಕೆ 3) ಮತ್ತು ವೈಷ್ಣವಿ ಶರ್ಮಾ (23ಕ್ಕೆ 3) ಅಮೋಘ ಪ್ರದರ್ಶನ ನೀಡಿದರು. ಪ್ರಮುಖ 3 ವಿಕೆಟ್ ಕಬಳಿಸಿದ ಪರುನಿಕಾ ಪಂದ್ಯಶ್ರೇಷ್ಠರಾದರು.
ಸತತ ಎರಡನೇ ಫೈನಲ್
ಇದಕ್ಕೆ ಪ್ರತಿಯಾಗಿ ಭಾರತವು ನಿರಾತಂಕವಾಗಿ ಚೇಸಿಂಗ್ ಪೂರ್ಣಗೊಳಿಸಿತು. ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿರುವ ಆರಂಭಿಕ ಆಟಗಾರ್ತಿಯ ಜಿ ತ್ರಿಶಾ 29 ಎಸೆತಗಳಲ್ಲಿ 5 ಬೌಂಡರಿ ಸಹಿತ 35 ರನ್ ಪೇರಿಸಿದರು. ಇದೇ ವೇಳೆ ಕಮಲಿನಿ ಅಜೇಯ 56 ರನ್ ಸಿಡಿಸಿದರು. ಸಾನಿಕ ಅಜೇಯ 11 ರನ್ ಗಳಿಸಿದರು. ಹೀಗಾಗಿ ಭಾರತ ತಂಡವು 15 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 117 ರನ್ ಗಳಿಸಿತು. ಇನ್ನೂ 5 ಓವರ್‌ಗಳನ್ನು ಉಳಿಸಿ ಚೇಸಿಂಗ್ ಪೂರ್ಣಗೊಳಿಸಿತು. ಸತತ ಎರಡನೇ ಅಂಡರ್ 19 ಆವೃತ್ತಿಯಲ್ಲೂ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಆದರೆ, ಭಾರತೀಯ ಸ್ಪಿನ್ನರ್‌ಗಳ ದಾಳಿ ಆರಂಭವಾಗುತ್ತಿದ್ದಂತೆಯೇ ತಂಡದ ಕುಸಿತ ಆರಂಭವಾಯ್ತು. ಆರಂಭದ ಆರು ಬ್ಯಾಟರ್‌ಗಳು ಕ್ಲೀನ್ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು.
ಭಾರತ ತಂಡ
ನಿಕಿ ಪ್ರಸಾದ್, ಸಾನಿಕಾ ಚಾಲ್ಕೆ, ಜಿ ತ್ರಿಶಾ, ಕಮಲಿನಿ ಜಿ, ಭಾವಿಕಾ ಅಹಿರ್, ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುನಿಕಾ ಸಿಸೋಡಿಯಾ, ಕೇಸರಿ ದೃಷ್ಟಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂಡಿ ಶಬ್ನಮ್, ವೈಷ್ಣವಿ ಎಸ್.
