ಸ್ಮೃತಿ ಮಂಧಾನ-ಹರ್ಮನ್ಪ್ರೀತ್ ಸ್ಪೋಟಕ ಶತಕ; ಭಾರತಕ್ಕೆ 4 ರನ್ಗಳ ರೋಚಕ ಗೆಲುವು, ಲಾರಾ-ಮರಿಜಾನ್ನೆ ಕಪ್ ಸೆಂಚುರಿ ವ್ಯರ್ಥ
India Women beat South Africa Women : ಸೌತ್ ಆಫ್ರಿಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 4 ರನ್ಗಳ ರೋಚಕ ಗೆಲುವು ಸಾಧಿಸಿತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡವು 4 ರನ್ಗಳಿಂದ ರೋಚಕ ಗೆಲುವು ಸಾಧಿಸಿತು. ಕೊನೆಯ ಓವರ್ ತನಕ ಕುತೂಹಲ ಹೆಚ್ಚಿಸಿದ್ದ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲ್ಲುವ ಭರವಸೆ ಹುಟ್ಟು ಹಾಕಿತ್ತು. ಆರಂಭಿಕರಾಗಿ ಕಣಕ್ಕಿಳಿದು ಶತಕ ಸಿಡಿಸಿ ಅಂತಿಮ ಎಸೆತದವರೆಗೂ ಕ್ರೀಸ್ನಲ್ಲಿದ್ದ ಲಾರಾ ವೊಲ್ವಾರ್ಡ್ಟ್ ಗೆಲುವಿನ ಆಸೆ ಹೆಚ್ಚಿಸಿದ್ದರು. ಆದರೆ, ಗೆಲುವು ತಂದುಕೊಡಲು ವಿಫಲರಾದರು.
ಕೊನೆಯ ಓವರ್ನಲ್ಲಿ ಪೂಜಾ ವಸ್ತ್ರಾಕರ್ ಶಿಸ್ತಿನ ಬೌಲಿಂಗ್ ದಾಳಿ ನಡೆಸಿ 11 ರನ್ಗಳನ್ನು ರಕ್ಷಿಸಿಕೊಂಡು ರೋಚಕ ಗೆಲುವಿನ ಕ್ಷಣಕ್ಕೆ ಸಾಕ್ಷಿಯಾದರು. ಹರ್ಮನ್ ಪಡೆ ನೀಡಿದ್ದ 326 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಸೌತ್ ಆಫ್ರಿಕಾ 321 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಭಾರತ ತಂಡದ ಪರ ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್ ಶತಕ ಸಿಡಿಸಿದರೆ, ದಕ್ಷಿಣ ಆಫ್ರಿಕಾ ಪರ ಮರಿಜಾನ್ನೆ ಕಪ್, ಲಾರಾ ವೊಲ್ವಾರ್ಡ್ಟ್ ಸೆಂಚುರಿ ಬಾರಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಉತ್ತಮ ಪ್ರದರ್ಶನ ತೋರಿತು. ಮೊದಲ ವಿಕೆಟ್ಗೆ 38 ರನ್ ಹರಿದು ಬಂತು. ಶಫಾಲಿ ವರ್ಮಾ 20 ರನ್ ಗಳಿಸಿ ಔಟಾದರು. ಸ್ಮೃತಿ ಮಂಧಾನ ಮತ್ತೊಂದು ಅದ್ಭುತ ಪ್ರದರ್ಶನ ತೋರಿದರು. ದಯಾಲನ್ ಹೇಮಲತಾ (24) ಅವರೊಂದಿಗೆ ಸೇರಿ 62 ರನ್ಗಳ ಪಾಲುದಾರಿಕೆ ಒದಗಿಸಿದರು. ತಂಡವು 100 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಅವಧಿಯಲ್ಲಿ ಹರ್ಮನ್ಪ್ರೀತ್ ಕೌರ್ ಅವರು ಸ್ಮೃತಿ ಜೊತೆ ಸೇರಿ 3ನೇ ವಿಕೆಟ್ಗೆ 171 ರನ್ಗಳ ಪಾಲುದಾರಿಕೆ ನೀಡಿದರು.
ನಾಯಕಿ-ಉಪನಾಯಕಿ ಶತಕ
ಸೌತ್ ಆಫ್ರಿಕಾ ಬೌಲರ್ಗಳ ಮೇಲೆ ಸವಾರಿ ಮಾಡಿದ ಉಪನಾಯಕಿ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ, ನಾಯಕಿ ಹರ್ಮನ್ಪ್ರೀತ್ ಕೌರ್ ರನ್ ಹೊಳೆ ಹರಿಸಿದರು. ಮೊದಲ ಏಕದಿನ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ಸ್ಮೃತಿ ಮಂಧಾನ, ಎರಡನೇ ಏಕದಿನ ಪಂದ್ಯದಲ್ಲೂ ನೂರರ ಗಡಿ ದಾಟಿದರು. ಇದರೊಂದಿಗೆ ದಾಖಲೆ ಕೂಡ ಬರೆದರು. ಇದು ಏಕದಿನದಲ್ಲಿ 7ನೇ ಶತಕವಾಗಿದೆ. 120 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಸಹಿತ 135 ರನ್ ಬಾರಿಸಿ 46ನೇ ಓವರ್ನಲ್ಲಿ ಔಟಾದರು.
ಸ್ಮೃತಿ ಔಟಾದ ಬಳಿಕ ಬ್ಯಾಟಿಂಗ್ ಗೇರ್ ಚೇಂಜ್ ಮಾಡಿದ ಹರ್ಮನ್ಪ್ರೀತ್ ಕೌರ್, ಮೂರಂಕಿ ದಾಟಿದರು. ಕೊನೆಯವರೆಗೂ ಕ್ರೀಸ್ನಲ್ಲಿ ಉಳಿದು ಕೊನೆಯ ಓವರ್ನಲ್ಲಿ ತಮ್ಮ ಆರನೇ ಏಕದಿನ ಶತಕವನ್ನು ಪೂರೈಸಿದರು. 88 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಿತ 103 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನು ರಿಚಾ ಘೋಷ್ 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 25 ರನ್ ಗಳಿಸಿದರು. ಅಂತಿಮವಾಗಿ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್ ಪೇರಿಸಿತು.
326 ರನ್ಗಳಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, ಉತ್ತಮ ಆರಂಭ ಪಡೆಯಲಿಲ್ಲ. ತಂಜಿಮ್ ಬ್ರಿಟ್ಸ್ (5), ಅನ್ನೆಕೆ ಬಾಷ್ (18), ಸುನೆ ಲೂಸ್ (12) ಅವರು ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಲಾರಾ ವೊಲ್ವಾರ್ಡ್ಟ್ ಮತ್ತು ಮರಿಜಾನ್ನೆ ಕಪ್ ಅವರು 4ನೇ ವಿಕೆಟ್ಗೆ 184 ರನ್ಗಳ ಜೊತೆಯಾಟವಾಡಿದರು. ಅಲ್ಲದೆ, ಇಬ್ಬರೂ ಕೂಡ ಸೆಂಚುರಿ ಬಾರಿಸಿ ಐತಿಹಾಸಿಕ ಗುರಿ ಬೆನ್ನಟ್ಟಲು ದಿಟ್ಟ ಹೊರಾಟ ನಡೆಸಿದರು.
ಕಪ್ ಅವರು 94 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಹಿತ 114 ರನ್ ಗಳಿಸಿದರು. ಆ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಹಕಾರ ನೀಡಿದರು. ಕೊನೆಯಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಆದರೆ, ನಾಯಕಿ ಲಾರಾ ಕೊನೆಯ ಓವರ್ನ ಕೊನೆಯ ಎಸೆತದವರೆಗೂ ಹೋರಾಡಿದರು. 135 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಸಹಿತ 135 ರನ್ ಗಳಿಸಿ ಅಜೇಯರಾಗಿ ಉಳಿದರು. ನಾಡಿನ್ ಡಿ ಕ್ಲರ್ಕ್ 28 ರನ್ ಗಳಿಸಿ ಸಾಥ್ ಕೊಟ್ಟರು. ಅಂತಿಮವಾಗಿ 6 ವಿಕೆಟ್ಗೆ 321 ರನ್ ಗಳಿಸಿ 4 ರನ್ಗಳಿಂದ ಸೋಲನುಭವಿಸಿದರು.
