ಪುರುಷರನ್ನು ಮೀರಿಸಿದ ಭಾರತ ವನಿತೆಯರ ತಂಡ; ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಮೊತ್ತ, 435 ರನ್ ಗಳಿಸಿ ದಾಖಲೆ
ಭಾರತದ ಏಕದಿನ ಕ್ರಿಕೆಟ್ (ಪುರುಷರು ಮತ್ತು ಮಹಿಳೆಯರು)ಇತಿಹಾಸದಲ್ಲೇ 435 ರನ್ ಅತ್ಯಧಿಕ ಮೊತ್ತವಾಗಿದೆ. ಈ ಹಿಂದೆ ಭಾರತ ಪುರುಷರ ತಂಡವು 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ 418/5 ರನ್ ಈವರೆಗಿನ ಅತ್ಯಧಿಕ ಇನ್ನಿಂಗ್ಸ್ ಮೊತ್ತವಾಗಿತ್ತು. ಈಗ ಭಾರತ ವನಿತೆಯರು ಆ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.

ಭಾರತ ವನಿತೆಯರ ಕ್ರಿಕೆಟ್ ತಂಡವು ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದೆ. ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆತಿಥೇಯ ತಂಡ, ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಹೊಸ ರೆಕಾರ್ಡ್ ಮಾಡಿದೆ. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ, 5 ವಿಕೆಟ್ ನಷ್ಟಕ್ಕೆ ಭರ್ಜರಿ 435 ರನ್ ಪೇರಿಸಿದೆ. 50 ಓವರ್ ಸ್ವರೂಪದಲ್ಲಿ ಭಾರತ ತಂಡದ ಗರಿಷ್ಠಇನ್ನಿಂಗ್ಸ್ ಮೊತ್ತ ಇದಾಗಿದೆ. ಅಲ್ಲದೆ ವನಿತೆಯರ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅತಿ ದೊಡ್ಡ ಮೊತ್ತವಾಗಿದೆ.
ಭಾರತದ ಏಕದಿನ ಕ್ರಿಕೆಟ್ (ಪುರುಷರು ಮತ್ತು ಮಹಿಳೆಯರು)ಇತಿಹಾಸದಲ್ಲೇ ಇದು ಅತ್ಯಧಿಕ ಮೊತ್ತವಾಗಿದೆ. ಈ ಹಿಂದೆ ಭಾರತ ಪುರುಷರ ತಂಡವು 2011ರಲ್ಲಿ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ 418/5 ರನ್ ಈವರೆಗಿನ ಗರಿಷ್ಠ ಮೊತ್ತವಾಗಿತ್ತು. ಈಗ ವನಿತೆಯರು ಆ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಮೊದಲ ವಿಕೆಟ್‌ಗೆ ಭರ್ಜರಿ 233 ರನ್ ಕಲೆ ಹಾಕಿದರು. ಇಬ್ಬರೂ ಶತಕ ಸಿಡಿಸಿ ಮಿಂಚಿದರು. 2024ರ ಆರಂಭದಿಂದಲೂ ಪ್ರಚಂಡ ಫಾರ್ಮ್‌ನಲ್ಲಿರುವ ಸ್ಮೃತಿ ಮಂಧಾನ, ಹೊಸ ವರ್ಷದಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ವೇಗದ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಕೇವಲ 70 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಆರಂಭಿಕ ಆಟಗಾರ್ತಿ, ಕೊನೆಗೆ 135 ರನ್ ಗಳಿಸಿ ಔಟಾದರು. ಇದರಲ್ಲಿ 7 ಸ್ಫೋಟಕ ಸಿಕ್ಸರ್ ಕೂಡಾ ಸೇರಿತ್ತು. ವನಿತೆಯರ ಕ್ರಿಕೆಟ್‌ನಲ್ಲಿ ಭಾರತದ ಪರ ಇದು ವೇಗದ ಶತಕವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ 10ನೇ ಶತಕ ಸಿಡಿಸಿದ ಮಂಧನಾ, ಈ ಸ್ವರೂಪದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಜಂಟಿಯಾಗಿ ಮೂರನೇ ಸ್ಥಾನ ಪಡೆದಿದ್ದಾರೆ.
ಪ್ರತಿಕಾ ರಾವಲ್ ಚೊಚ್ಚಲ ಶತಕ
ಇದೇ ವೇಳೆ ಪ್ರತಿಕಾ ರಾವಲ್ ಚೊಚ್ಚಲ ಏಕದಿನ ಶತಕ ಸಿಡಿಸಿದರು. ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು, ಅಂತಿಮ ಪಂದ್ಯದಲ್ಲಿ ಕೇವಲ 129 ಎಸೆತಗಳಲ್ಲಿ 154 ರನ್ ಪೇರಿಸಿದರು. ಸ್ಮೃತಿ ಔಟಾದ ಬಳಿಕ ರಿಚಾ ಘೋಷ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಆಡಿದರು. ಇವರಿಬ್ಬರೂ ಎರಡನೇ ವಿಕೆಟ್‌ಗೆ 104 ರನ್ ಕಲೆ ಹಾಕುವ ಮೂಲಕ ತಂದ ಮೊತ್ತವನ್ನು 300ರ ಗಡಿ ದಾಟಿಸಿದರು.
ರಿಚಾ 59 ರನ್ ಗಳಿಸಿದರೆ, ತೇಜಲ್ ಹಸಬ್ನಿಸ್ 28 ರನ್ ಪೇರಿಸಿದರು. ದೊಡ್ಡ ಹೊಡೆತಕ್ಕೆ ಕೈ ಹಾಕಿದ ಹರ್ಲೀನ್ ಡಿಯೋಲ್ 15 ರನ್ ಗಳಿಸಿ ಔಟಾದರು.
ವನಿತೆಯರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ
ನ್ಯೂಜಿಲೆಂಡ್ - 491/4, ಐರ್ಲೆಂಡ್ ವಿರುದ್ಧ (2018)
ನ್ಯೂಜಿಲೆಂಡ್ - 455/5, ಪಾಕಿಸ್ತಾನ ವಿರುದ್ಧ (1997)
ನ್ಯೂಜಿಲೆಂಡ್ - 440/3, ಐರ್ಲೆಂಡ್ ವಿರುದ್ಧ (2018)
ಭಾರತ - 435/5, ಐರ್ಲೆಂಡ್ ವಿರುದ್ಧ (2025)
