ಬಾಂಗ್ಲಾದೇಶ ಸೋಲಿಸಿ ಏಷ್ಯಾಕಪ್‌ ಫೈನಲ್‌ ಪ್ರವೇಶಿಸಿದ ಭಾರತ ವನಿತೆಯರ ತಂಡ; ಎಲ್ಲಾ 9 ಆವೃತ್ತಿಗಳಲ್ಲೂ ಫೈನಲ್‌ ದಾಖಲೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ಸೋಲಿಸಿ ಏಷ್ಯಾಕಪ್‌ ಫೈನಲ್‌ ಪ್ರವೇಶಿಸಿದ ಭಾರತ ವನಿತೆಯರ ತಂಡ; ಎಲ್ಲಾ 9 ಆವೃತ್ತಿಗಳಲ್ಲೂ ಫೈನಲ್‌ ದಾಖಲೆ

ಬಾಂಗ್ಲಾದೇಶ ಸೋಲಿಸಿ ಏಷ್ಯಾಕಪ್‌ ಫೈನಲ್‌ ಪ್ರವೇಶಿಸಿದ ಭಾರತ ವನಿತೆಯರ ತಂಡ; ಎಲ್ಲಾ 9 ಆವೃತ್ತಿಗಳಲ್ಲೂ ಫೈನಲ್‌ ದಾಖಲೆ

Asia cup 2024: ಬಾಂಗ್ಲಾದೇಶ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ವನಿತೆಯರ ತಂಡ ಏಷ್ಯಾಕಪ್‌ ಫೈನಲ್‌ ಪ್ರವೇಶಿಸಿದೆ. ಇದರೊಂದಿಗೆ ಎಲ್ಲಾ 9 ಆವೃತ್ತಿಗಳಲ್ಲಿ ಫೈನಲಿಸ್ಟ್‌ ಆದ ಸಾಧನೆ ಮಾಡಿದೆ.

ಬಾಂಗ್ಲಾದೇಶ ಸೋಲಿಸಿ ಏಷ್ಯಾಕಪ್‌ ಫೈನಲ್‌ ಪ್ರವೇಶಿಸಿದ ಭಾರತ ವನಿತೆಯರ ತಂಡ
ಬಾಂಗ್ಲಾದೇಶ ಸೋಲಿಸಿ ಏಷ್ಯಾಕಪ್‌ ಫೈನಲ್‌ ಪ್ರವೇಶಿಸಿದ ಭಾರತ ವನಿತೆಯರ ತಂಡ (X)

ಭಾರತ ವನಿತೆಯರ ಕ್ರಿಕೆಟ್‌ ತಂಡವು ಏಷ್ಯಾಕಪ್‌ನಲ್ಲಿ ದಾಖಲೆ ನಿರ್ಮಿಸಿದೆ. ಇದುವರೆಗೆ ನಡೆದ ಎಲ್ಲಾ 9 ಆವೃತ್ತಿಗಳಲ್ಲೂ ಫೈನಲ್‌ ಪ್ರವೇಶಿಸುವ ಮೂಲಕ ಅಮೋಘ ಸಾಧನೆ ಮಾಡಿದೆ. ಏಷ್ಯಾದ ಅತ್ಯಂತ ಬಲಿಷ್ಠ ತಂಡವಾಗಿರುವ ಭಾರತ, ಈ ಹಿಂದೆ ನಡೆದ 8 ಆವೃತ್ತಿಗಳಲ್ಲಿ ಒಂದು ಬಾರಿ ಮಾತ್ರ ಫೈನಲ್‌ನಲ್ಲಿ ಸೋತಿದೆ. ಉಳಿದಂತೆ ಈವರೆಗೆ ದಾಖಲೆಯ 7 ಬಾರಿ ಏಷ್ಯಾ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದೀಗ 2024ರ ಏಷ್ಯಾಕಪ್‌ ಟೂರ್ನಿಯಲ್ಲಿಯೂ ತಂಡ ಮತ್ತೊಮ್ಮೆ ಫೈನಲ್‌ ಪ್ರವೇಶಿಸಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ಗೆ ಮುನ್ನಡೆದಿದೆ.

ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ಆವೃತ್ತಿಯ ಏಷ್ಯಾಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯವು ಡಂಬುಲ್ಲಾದಲ್ಲಿ ನಡೆಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ವನಿತೆಯರ ತಂಡ, ಭಾರತೀಯ ಬೌಲರ್‌ಗಳ ಪ್ರಬಲ ಬೌಲಿಂಗ್‌ ದಾಳಿಗೆ ತತ್ತರಿಸಿತು. ಪರಿಣಾಮವಾಗಿ ಕೇವಲ 8 ವಿಕೆಟ್‌ ಕಳೆದುಕೊಂಡು ಕೇವಲ 80 ರನ್‌ ಮಾತ್ರವೇ ಗಳಿಸಲು ಶಕ್ತವಾಯ್ತು. ಇದಕ್ಕುತ್ತರವಾಗಿ ಭಾರತವು, ಕೇವಲ 11 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೆ 83 ರನ್‌ ಗಳಿಸಿ ಗೆದ್ದು ಬೀಗಿತು.

ಭಾರತದ ಪರ ಪ್ರಮುಖ 3 ವಿಕೆಟ್ ಕಬಳಿಸಿದ ವೇಗದ ಬೌಲರ್ ರೇಣುಕಾ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇಂದು ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಎದುರಾಗಲಿವೆ. ಅಲ್ಲಿ ಗೆದ್ದ ತಂಡವನ್ನು ಭಾರತ ಫೈನಲ್‌ನಲ್ಲಿ ಎದುರಿಸಲಿದೆ.

ಬಾಂಗ್ಲಾದೇಶ ನೀಡಿದ ಸರಳ ಗುರಿಯನ್ನು ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಸುಲಭವಾಗಿ ಬೆನ್ನಟ್ಟಿದರು. ಆರಂಭದಿಂದಲೇ ನಿರ್ಭೀತಿಯಿಂದ ಬ್ಯಾಟ್‌ ಬೀಸಿದ ಅವರು, ಅಜೇಯ ಜೊತೆಯಾಟ ಪೂರ್ಣಗೊಳಿಸಿದರು. ಶಫಾಲಿ 28 ಎಸೆತ ಎದುರಿಸಿ ಅಜೇಯ 26 ರನ್‌ ಗಳಿಸಿದರೆ, ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಮಂಧನಾ, ಅಜೇಯ 55 ರನ್‌ ಸಿಡಿಸಿದರು. 39 ಎಸೆತ ಎದುರಿಸಿದ ಅವರು 9 ಬೌಂಡರಿ ಹಾಗೂ 1 ಆಕರ್ಷಕ ಸಿಕ್ಸರ್‌ ಸಿಡಿಸಿದರು.

ಪವರ್ ಪ್ಲೇನಲ್ಲಿ ಇವರಿಬ್ಬರೂ ಸೇರಿ 46 ರನ್ ಒಟ್ಟುಗೂಡಿಸಿದರು. ಮೈದಾನದ ಸುತ್ತಲೂ ಟ್ರೇಡ್ ಮಾರ್ಕ್ ಶಾಟ್‌ಗಳನ್ನಾಡಿದರು. ಡಂಬುಲ್ಲಾ ಮೈದಾನ ತುಂಬೆಲ್ಲಾ ಭಾರತದ ಅಭಿಮಾನಿಗಳೇ ಕಾಣಿಸಿಕೊಂಡರು. ಅವರಲ್ಲಿ ಸ್ಮೃತಿ ಮಂಧಾನಾ ಫ್ಯಾನ್ಸ್‌ ಸಂಖ್ಯೆ ಹೆಚ್ಚಿತ್ತು.

ಬಾಂಗ್ಲಾದೇಶ ಕಳಪೆ ಬ್ಯಾಟಿಂಗ್

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶಕ್ಕೆ ಆರಂಭದಿಂದಲೂ ಉತ್ತಮ ಜೊತೆಯಾಟ ಬರಲಿಲ್ಲ. ವೇಗಿ ರೇಣುಕಾ ಸಿಂಗ್‌ ಹಾಗೂ ಎಡಗೈ ಸ್ಪಿನ್ನರ್ ರಾಧಾ ಯಾದವ್ (3/14) ಅತ್ಯುತ್ತಮ ಬೌಲಿಂಗ್‌ನೊಂದಿಗೆ ಬಾಂಗ್ಲಾದೇಶದ ಬ್ಯಾಟಿಂಗ್‌ ಲೈನಪ್‌ ಅನ್ನು ಬಿಡದೆ ಕಾಡಿದರು. ಪವರ್‌ಪ್ಲೇ ಸಮಯದಲ್ಲಿ ರೇಣುಕಾ ಉಂಟುಮಾಡಿದ ಗಾಯದಿಂದ ಬಾಂಗ್ಲಾದೇಶ ಕೊನೆಯವರೆಗೂ ಚೇತರಿಸಿಕೊಳ್ಳಲಿಲ್ಲ. ಮೊದಲ ಓವರ್‌ನಲ್ಲೇ ದಿಲಾರಾ ಅಕ್ಟರ್ ಅವರನ್ನು ಔಟ್ ಮಾಡಿದ ಅವರು, ನಂತರ ಇಷ್ಮಾ ತಂಜಿಮ್ ವಿಕೆಟ್‌ ಕಬಳಿಸಿದರು.‌

ನಿಗರ್ ಸುಲ್ತಾನಾ ಏಕಾಂಗಿ ಹೋರಾಟ

ಪವರ್‌ಪ್ಲೇ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದ್ದ ಬಾಂಗ್ಲಾದೇಶ, ಕೊನೆಗೆ 80 ರನ್‌ಗೆ ಇನ್ನಿಂಗ್ಸ್‌ ಮುಗಿಸಿತು. ನಾಯಕ ನಿಗರ್ ಸುಲ್ತಾನಾ ತಂಡದ ಪರ ಗರಿಷ್ಠ ರನ್‌ ಗಳಿಸಿದರು. ಇವರಿಗೆ ಸೂಕ್ತ ಜೊತೆಯಾಟ ಸಿಗಲಿಲ್ಲ. 51 ಎಸೆತಗಳಿಂದ 32 ರನ್‌ ಕಲೆ ಹಾಕಿ ತಂಡಕ್ಕೆ ಚೇತರಿಕೆ ತಂದುಕೊಟ್ಟ ಸುಲ್ತಾನಾ, ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಔಟ್ ಆದರು. ಉಳಿದಂತೆ ಶೋರ್ನಾ ಅಕ್ಟರ್ ಅಜೇಯ 19 ರನ್‌ ಗಳಿಸಿದರು.

Whats_app_banner