ದೀಪ್ತಿ ಶರ್ಮಾ 6 ವಿಕೆಟ್, ರೇಣುಕಾ 4 ವಿಕೆಟ್; ವೆಸ್ಟ್ ಇಂಡೀಸ್ ವಿರುದ್ಧ 3ನೇ ಪಂದ್ಯದಲ್ಲೂ ಭಾರತಕ್ಕೆ ಜಯ, ಸರಣಿ ಕ್ಲೀನ್ಸ್ವೀಪ್
India beat West Indies: ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧದ ಮೂರನೇ ಅಥವಾ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ವನಿತೆಯರು ಐದು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.
India beat West Indies: ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಅಥವಾ ಅಂತಿಮ ಏಕದಿನ ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲಿಸಿದ ಭಾರತ ಮಹಿಳಾ ತಂಡ, ಸರಣಿಯನ್ನು 3-0 ಅಂತರದಿಂದ ಕ್ಲೀನ್ಸ್ವೀಪ್ ಮಾಡಿದೆ. ಇದರೊಂದಿಗೆ ಟಿ20ಐ ಸರಣಿ ಜತೆಗೆ ಏಕದಿನ ಸರಣಿಗೂ ಮುತ್ತಿಕ್ಕಿತು. ಮೊದಲ 2 ಪಂದ್ಯಗಳಲ್ಲಿ ಕ್ರಮವಾಗಿ 211, 115 ರನ್ಗಳಿಂದ ಪ್ರವಾಸಿಗರನ್ನು ಮಣಿಸಿದ್ದ ಹರ್ಮನ್ ಪಡೆ, ಅಂತಿಮ ಏಕದಿನ ಪಂದ್ಯದಲ್ಲಿ 5 ವಿಕೆಟ್ಗಳ ದಿಗ್ವಿಜಯ ಸಾಧಿಸಿದೆ. ಅಂತಿಮ ಪಂದ್ಯದ ಜಯದ ರೂವಾರಿ ಆಲ್ರೌಂಡರ್ ದೀಪ್ತಿ ಶರ್ಮಾ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್, ಬೃಹತ್ ಮೊತ್ತ ಕಲೆ ಹಾಕುವ ಭರವಸೆಯಲ್ಲಿತ್ತು. ಆದರೆ, ದೀಪ್ತಿ ಶರ್ಮಾ ಮತ್ತು ರೇಣುಕಾ ಸಿಂಗ್ ಅವರು ಖಡಕ್ ಬೌಲಿಂಗ್ ನಡೆಸಿ ವಿಂಡೀಸ್ ಕನಸಿಗೆ ತಣ್ಣೀರು ಎರಚಿದರು. ಆರಂಭಿಕರಾದ ಕಿಯಾನಾ ಜೋಸೆಫ್ ಮತ್ತು ಹೀಲಿ ಮ್ಯಾಥ್ಯೂಸ್ ಖಾತೆ ತೆರೆಯದೆ ಔಟಾದರೆ, ಡಿಯಾಂಡ್ರಾ ಡಾಟಿನ್, ಮ್ಯಾಂಡಿ ಮಂಗ್ರು ಕ್ರಮವಾಗಿ 5, 9 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ನಾಲ್ವರನ್ನು ಔಟ್ ಮಾಡಿದ್ದು ರೇಣುಕಾ ಸಿಂಗ್. ಆರಂಭದಲ್ಲಿ ರೇಣುಕಾ ಅಬ್ಬರಿಸಿದರೆ, ಕೊನೆಯಲ್ಲಿ ದೀಪ್ತಿ ಶರ್ಮಾ ಮಿಂಚಿದರು.
6 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾ
ಸತತ ವಿಕೆಟ್ಗಳ ನಡುವೆಯೂ ಶೆಮೈನ್ ಕ್ಯಾಂಪ್ಬೆಲ್ಲೆ 46 ರನ್ ಮತ್ತು ಚಿನೆಲ್ಲೆ ಹೆನ್ರಿ 61 ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಲ್ಲದೆ, ಉತ್ತಮ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿದರು. 4ನೇ ವಿಕೆಟ್ಗೆ 91 ರನ್ಗಳ ಪಾಲುದಾರಿಕೆ ಒದಗಿಸಿದರು. ಈ ಹಂತದಲ್ಲಿ ದಾಳಿಗಿಳಿದ ದೀಪ್ತಿ ಶರ್ಮಾ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ವಿಕೆಟ್ ಬೇಟೆಯಾಡಿದ ದೀಪ್ತಿ ಉಳಿದ ಎಲ್ಲರನ್ನೂ ಔಟ್ ಮಾಡುವಲ್ಲಿ ಯಶಸ್ವಿಯಾದರು. ಜೈದಾ ಜೇಮ್ಸ್ 1, ಆಲಿಯಾ ಅಲ್ಲೆನೆ 21, ಅಫಿ ಫ್ಲೆಚರ್ 1, ಅಶ್ಮಿನಿ ಮುನಿಸರ 4 ರನ್ ಗಳಿಸಿ ವಿಂಡೀಸ್ ಕುಸಿತಕ್ಕೆ ಕಾರಣರಾದರು.
ರೇಣುಕಾ ಸಿಂಗ್ ಅವರು 9.5 ಓವರ್ಗಳಲ್ಲಿ 29 ರನ್ ಬಿಟ್ಟು ಕೊಟ್ಟು 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 10 ಓವರ್ಗಳಲ್ಲಿ 3 ಮೇಡಿನ್ ಸಹಿತ 31 ರನ್ ನೀಡಿ 6 ವಿಕೆಟ್ ಪಡೆದು ದಾಖಲೆ ಬರೆದರು. ಆದರೆ, ಟಿಟಾಸ್ ಸಧು, ತನುಜಾ ಕನ್ವರ್, ಪ್ರಿಯಾ ಮಿಶ್ರಾ ವಿಕೆಟ್ ಪಡೆಯಲು ವಿಫಲರಾದರು. ಅಂತಿಮವಾಗಿ ವಿಂಡೀಸ್ 38.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತಕ್ಕೆ ಸುಲಭ ಗೆಲುವು
ಸಾಧಾರಣ ಗುರಿ ಬೆನ್ನಟ್ಟಿದ ಭಾರತದ ವನಿತೆಯರು ಸಹ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಸ್ಮೃತಿ ಮಂಧಾನ (4), ಪ್ರತಿಕಾ ರಾವಲ್ (18), ಹರ್ಲೀನ್ ಡಿಯೋಲ್ (1) ನಿರಾಸೆ ಮೂಡಿಸಿದರು. ಬಳಿಕ ಹರ್ಮನ್ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರು. ಆದರೆ, ಹರ್ಮನ್ 32 ರನ್, ಜೆಮಿಮಾ 29 ರನ್ ಸಿಡಿಸಿ ಔಟಾದರು. ಕೊನೆಯಲ್ಲಿ ದೀಪ್ತಿ ಶರ್ಮಾ 39, ರಿಚಾ ಘೋಷ್ 23 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 28.2 ಓವರ್ಗಳಲ್ಲಿ ಭಾರತ ಜಯದ ನಗೆ ಬೀರಿತು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ದೀಪ್ತಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.