ಅಂಡರ್‌ 19 ಟಿ20 ವಿಶ್ವಕಪ್ ಫೈನಲ್: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ, ಭಾರತ ವನಿತೆಯರ ತಂಡ ಚಾಂಪಿಯನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂಡರ್‌ 19 ಟಿ20 ವಿಶ್ವಕಪ್ ಫೈನಲ್: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ, ಭಾರತ ವನಿತೆಯರ ತಂಡ ಚಾಂಪಿಯನ್

ಅಂಡರ್‌ 19 ಟಿ20 ವಿಶ್ವಕಪ್ ಫೈನಲ್: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ, ಭಾರತ ವನಿತೆಯರ ತಂಡ ಚಾಂಪಿಯನ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ, ಭಾರತದ ಬೌಲಿಂಗ್‌ ದಾಳಿಗೆ ಬೆದರಿ 82 ರನ್‌ಗಳಿಗೆ ಆಲೌಟ್‌ ಆಯ್ತು. ಇದಕ್ಕೆ ಪ್ರತಿಯಾಗಿ ಸುಲಭ ಚೇಸಿಂಗ್‌ ನಡೆಸಿದ ಭಾರತ ತಂಡ, ಕೇವಲ11.2 ಓವರ್‌ಗಳಲ್ಲೇ 1 ವಿಕೆಟ್‌ ಮಾತ್ರ ಕಳೆದುಕೊಂಡು 84 ರನ್‌ ಗಳಿಸಿ ಗುರಿ ತಲುಪಿತು.

ಅಂಡರ್‌ 19 ಟಿ20 ವಿಶ್ವಕಪ್ ಫೈನಲ್: ಭಾರತ ವನಿತೆಯರ ತಂಡ ಚಾಂಪಿಯನ್
ಅಂಡರ್‌ 19 ಟಿ20 ವಿಶ್ವಕಪ್ ಫೈನಲ್: ಭಾರತ ವನಿತೆಯರ ತಂಡ ಚಾಂಪಿಯನ್ (BCCI)

ಭಾರತ ಅಂಡರ್‌ 19 ವನಿತೆಯರ ತಂಡವು ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ ಗೆದ್ದಿದೆ. ಈ ಹಿಂದೆ ಚೊಚ್ಚಲ ವಿಶ್ವಕಪ್‌ ಗೆದ್ದು ಬೀಗಿದ್ದ ಕಿರಿಯರ ತಂಡ, ಇದೀಗ ಎರಡನೇ ಆವೃತ್ತಿಯಲ್ಲೂ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಂಡಿದೆ. ಮಲೇಷ್ಯಾದ ರಾಜಧಾನಿ ಕೌಲಾಲಾಂಪುರದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾದವು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿ ಅಜೇಯವಾಗಿದ್ದ ನಿಕಿ ಪ್ರಸಾದ್‌ ನೇತೃತ್ವದ ಭಾರತ ತಂಡವು, ಹರಿಣಗಳ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ, ಭಾರತದ ಬೌಲಿಂಗ್‌ ದಾಳಿಗೆ ಬೆದರಿ 82 ರನ್‌ಗಳಿಗೆ ಆಲೌಟ್‌ ಆಯ್ತು. ಇದಕ್ಕೆ ಪ್ರತಿಯಾಗಿ ಸುಲಭ ಚೇಸಿಂಗ್‌ ನಡೆಸಿದ ಭಾರತ ತಂಡ, ಕೇವಲ11.2 ಓವರ್‌ಗಳಲ್ಲೇ 1 ವಿಕೆಟ್‌ ಮಾತ್ರ ಕಳೆದುಕೊಂಡು 84 ರನ್‌ ಗಳಿಸಿ ಗುರಿ ತಲುಪಿತು. ಸರಣಿಯುದ್ದಕ್ಕೂ ಪ್ರಚಂಡ ಫಾರ್ಮ್‌ನಲ್ಲಿರುವ ಗೊಂಗಾಡಿ ತ್ರಿಶಾ ಮತ್ತೆ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ಪರ ಯಾರೂ ಕ್ರೀಸ್‌ಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಮೀಕೆ ವ್ಯಾನ್ ವೂರ್ಸ್ಟ್ 23 ರನ್‌ ಗಳಿಸಿ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಬೌಲಿಂಗ್‌ನಲ್ಲಿ ಮಿಂಚಿದ ಗೊಂಗಾಡಿ ತ್ರಿಶಾ 3 ವಿಕೆಟ್‌ ಪಡೆದು ಮಿಂಚಿದರು. ಉಳಿದಂತೆ ಪರುಣಿಕಾ ಆಯುಷಿ ಶುಕ್ಲಾ ಹಾಗೂ ವೈಷ್ಣವಿ ಶರ್ಮಾ ತಲಾ 2 ವಿಕೆಟ್‌ ಕಬಳಿಸಿದರು.

ಚೇಸಿಂಗ್‌ ವೇಳೆ ಭಾರತದ ಆರಂಭವೇ ಅಮೋಘವಾಗಿತ್ತು. ಎಂದಿನಂತೆ ಟೂರ್ನಿಯ ಗರಿಷ್ಠ ರನ್‌ ಸ್ಕೋರರ್‌ ತ್ರಿಶಾ ಕೇವಲ 33 ಎಸೆತಗಳಲ್ಲಿ 44 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಮಲಿನಿ 8 ರನ್‌ ಗಳಿಸಿದರೆ, ಸಾನಿಕಾ ಚಲ್ಕೆ 26 ರನ್‌ ಬಾರಿಸಿದರು. ಸರಣಿಯುದ್ದಕ್ಕೂ ಅಬ್ಬರಿಸಿದ ತ್ರಿಶಾ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. ಕಳೆದ ಬಾರಿಯ ವಿಶ್ವಕಪ್‌ನಲ್ಲೂ ಆಡಿದ ಅನುಭವವಿದ್ದ ತ್ರಿಶಾ ಟೂರ್ನಿಯಲ್ಲಿ 309 ರನ್‌ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.

ಭಾರತದ ಅಜೇಯ ಟ್ರೋಫಿ ಯಾತ್ರೆ

2023ರಲ್ಲಿ ನಡೆದ ಚೊಚ್ಚಲ ಅಂಡರ್‌ 19 ಟಿ20 ವಿಶ್ವಕಪ್‌ನಲ್ಲಿಯೂ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಶಫಾಲಿ ವರ್ಮಾ ನೇತೃತ್ವದಲ್ಲಿ ಆಡಿದ್ದ ಭಾರತವು ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 7 ವಿಕೆಟ್‌ಗಳ ಜಯಭೇರಿ ಬಾರಿಸಿತ್ತು. ಐಸಿಸಿ ಟೂರ್ನಿಯಲ್ಲಿ ಅದು ಭಾರತದ ಅದ್ವಿತೀಯ ಸಾಧನೆ. ಇದೀಗ ಈ ಬಾರಿಯ ಟೂರ್ನಿಯಲ್ಲಿ ಭಾರತದ ಮತ್ತೆ ಇತಿಹಾಸ ಮರುಕಳಿಸುವಂತೆ ಮಾಡಿದೆ. ಬ್ಯಾಟಿಂಗ್‌‌, ಬೌಲಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸತತ ಎರಡನೇ ಬಾರಿಯೂ ಗೆದ್ದು ಚಾಂಪಿಯನ್‌ ಪಟ್ಟ ಉಳಿಸಿಕೊಂಡಿದೆ. ಈ ಬಾರಿ ಭಾರತ ಒಂದೇ ಒಂದು ಪಂದ್ಯ ಸೋತಿಲ್ಲ ಎಂಬುದು ಗಮನಾರ್ಹ.

ದಕ್ಷಿಣ ಆಫ್ರಿಕಾಗೆ ಮತ್ತೆ ನಿರಾಶೆ

ಫೈನಲ್‌ವರೆಗೂ ಅಜೇಯವಾಗಿದ್ದ ದಕ್ಷಿಣ ಆಫ್ರಿಕಾ ವನಿತೆಯರ ತಂಡ, ಫೈನಲ್‌ನಲ್ಲಿ ಬಲಿಷ್ಠ ಭಾರತದ ಮುಂದೆ ಮಂಡಿಯೂರಿತು. ಕಳೆದ ವರ್ಷ ನಡೆದ ಪುರುಷರ ಟಿ20 ವಿಶ್ವಕಪ್‌ನಲ್ಲೂ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಆಡಿದ್ದವು. ಅಲ್ಲಿ ಹರಿಣಗಳನ್ನು ಮಣಿಸಿ ಭಾರತ ಗೆದ್ದಿತ್ತು. ಇದೀಗ ಅಂಡರ್‌ 19 ವಿಭಾಗದಲ್ಲೂ ಮತ್ತೆ ದಕ್ಷಿಣ ಆಪ್ರಿಕಾಗೆ ನಿರಾಶೆಯಾಗಿದೆ.

Whats_app_banner