ಪ್ರತಿಕಾ ರಾವಲ್‌-ತೇಜಲ್ ಹಸಬ್ನಿಸ್ ಅರ್ಧಶತಕ; ಐರ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರಿಗೆ ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ರತಿಕಾ ರಾವಲ್‌-ತೇಜಲ್ ಹಸಬ್ನಿಸ್ ಅರ್ಧಶತಕ; ಐರ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರಿಗೆ ಜಯ

ಪ್ರತಿಕಾ ರಾವಲ್‌-ತೇಜಲ್ ಹಸಬ್ನಿಸ್ ಅರ್ಧಶತಕ; ಐರ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರಿಗೆ ಜಯ

ಐರ್ಲೆಂಡ್‌ ವಿರುದ್ಧದ ತವರಿನ ಸರಣಿಯಲ್ಲಿ ಭಾರತ ವನಿತೆಯರ ತಂಡ ಶುಭಾರಂಭ ಮಾಡಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಐರ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರಿಗೆ 6 ವಿಕೆಟ್ ಜಯ
ಐರ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರಿಗೆ 6 ವಿಕೆಟ್ ಜಯ (BCCI X)

ಐರ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡವು 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಪ್ರತಿಕಾ ರಾವಲ್‌ ಆಕರ್ಷಕ ಅರ್ಧಶತಕ ನೆರವಿನಿಂದ ಯಶಸ್ವಿ ಚೇಸಿಂಗ್‌ ನಡೆಸಿದ ಆತಿಥೇಯ ತಂಡವು, ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಿಂಚಿದ ಭಾರತದ ಯುವ ಆಟಗಾರ್ತಿಯರು ತಂಡಕ್ಕೆ ಅರ್ಹ ಗೆಲುವು ತಂದುಕೊಟ್ಟರು.

ಪಂದ್ಯದಲ್ಲಿ ಮೊದಲು ಬ್ಯಾಟಂಗ್‌ ನಡೆಸಿದ ಐರ್ಲೆಂಡ್, ನಾಯಕಿ ಗ್ಯಾಬಿ ಲೂಯಿಸ್ ಅವರ 92 ರನ್‌ಗಳ ಅಮೋಘ ಆಟದ ನೆರವಿಂದ 7 ವಿಕೆಟ್‌ ಕಳೆದುಕೊಂಡು 238 ರನ್‌ ಗಳಿಸಿತು. ಪ್ರವಾಸಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಪ್ರತಿಯಾಗಿ ಭಾರತ ವನಿತೆಯರ ತಂಡವು ಕೇವಲ 34.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿ ಗುರಿ ತಲುಪಿತು. ಭಾರತದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಆಕರ್ಷಕ 89 ರನ್‌ ಗಳಿಸಿ ಮಿಂಚಿದರೆ, ಮತ್ತೋರ್ವ ಆಟಗಾರ್ತಿ ತೇಜಲ್ ಹಸಬ್ನಿಸ್ ಅಜೇಯ 53 ರನ್‌ ಗಳಿಸಿದರು. ಇವರಿಬ್ಬರ ತಲಾ ಅರ್ಧಶತಕಗಳ ನೆರವಿನಿಂದ ಆತಿಥೇಯರು 34.3 ಓವರ್‌ಗಳಲ್ಲಿಯೇ ಗುರಿ ತಲುಪಲು ಸಾಧ್ಯವಾಯ್ತು. ನಾಯಕಿ ಸ್ಮೃತಿ ಮಂಧಾನ 41 ರನ್‌ಗಳ ಕೊಡುಗೆ ನೀಡಿದರು. ರಾಜ್‌ಕೋಟ್‌ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳನ್ನು ಬೌಂಡರ್‌ ಸಿಕ್ಸರ್‌ ನೆರವಿಂದ ರಂಜಿಸಿದರು.

ಸ್ಪಿನ್ನರ್ ಪ್ರಿಯಾ ಮಿಶ್ರಾ 56 ರನ್‌ ಬಿಟ್ಟುಕೊಟ್ಟು 2 ವಿಕೆಟ್ ಪಡೆದು ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಇದೇ ವೇಳೆ ದೀಪ್ತಿ ಶರ್ಮಾ 41 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಹಾಗೂ ಟಿಟಾಸ್ ಸಧು 1 ವಿಕೆಟ್ ಪಡೆದರು.

ಐರ್ಲೆಂಡ್‌ ನಾಯಕಿಯ ಆಕರ್ಷಕ ಆಟ

ಇದಕ್ಕೂ ಮುನ್ನ ಐರ್ಲೆಂಡ್‌ ಪರ ನಾಯಕಿ ಲೂಯಿಸ್ 129 ಎಸೆತಗಳಲ್ಲಿ 15 ಬೌಂಡರಿ ಸಹಿತ 92 ರನ್‌ ಸಿಡಿಸಿದರು. ಒಂದು ಹಂತದಲ್ಲಿ ತಂಡವು 14 ಓವರ್‌ ಆಗುವಷ್ಟರಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್‌ ಮಾತ್ರ ಗಳಿಸಿತ್ತು. ಈ ವೇಳೆ ಏಕಾಂಗಿ ಹೋರಾಟ ನಡೆಸಿದ ನಾಯಕಿ, ಲೀಹ್‌ ಪೌಲ್‌ ಜೊತೆಗೂಡಿ ಶತಕದ ಜೊತೆಯಾಟವಾಡಿದರು. ಲೀಹ್‌ ಪೌಲ್‌ ಕೂಡಾ ಅರ್ಧಶತಕ ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್

  • ಐರ್ಲೆಂಡ್: 50 ಓವರ್ ಗಳಲ್ಲಿ 7 ವಿಕೆಟ್ ಗೆ 238
  • ಗ್ಯಾಬಿ ಲೂಯಿಸ್ -92
  • ಲೇಹ್ ಪಾಲ್ -59
  • ಪ್ರಿಯಾ ಮಿಶ್ರಾ 56ಕ್ಕೆ 2

  • ಭಾರತ: 34.3 ಓವರ್ ಗಳಲ್ಲಿ 4 ವಿಕೆಟ್ ಗೆ 241
  • ಪ್ರತಿಕಾ ರಾವಲ್ 89
  • ತೇಜಲ್ ಹಸಬ್ನಿಸ್ ಅಜೇಯ 53
  • ಐಮೀ ಮ್ಯಾಗೈರ್ 57ಕ್ಕೆ 3

ಇದನ್ನೂ ಓದಿ | 2025ರ ಕ್ರೀಡಾ ಕ್ಯಾಲೆಂಡರ್: ಚಾಂಪಿಯನ್ಸ್ ಟ್ರೋಫಿ-ಮಹಿಳೆಯರ ವಿಶ್ವಕಪ್‌ನಿಂದ ಕ್ಲಬ್ ವಲ್ಡ್‌ಕಪ್‌ವರೆಗೆ; ವರ್ಷದ ಎಲ್ಲಾ ಕ್ರೀಡಾಕೂಟಗಳ ವಿವರ

Whats_app_banner