ರಿಷಭ್ ಪಂತ್ ಪವರ್ಫುಲ್ ಆಟ; ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ
India vs Bangladesh Warm UP Match : ಟಿ20 ವಿಶ್ವಕಪ್ ಟೂರ್ನಿಯ ಕೊನೆಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 60 ರನ್ಗಳಿಂದ ಮಣಿಸಿದ ಟೀಮ್ ಇಂಡಿಯ ತನ್ನ ಮೊದಲ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.

ಟಿ20 ವಿಶ್ವಕಪ್ 2024ರಲ್ಲಿ ತನ್ನ ಅಭಿಯಾನ ಆರಂಭಿಸುವುದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. 18 ತಿಂಗಳ ನಂತರ ಭಾರತ ಜೆರ್ಸಿಯನ್ನು ತೊಟ್ಟ ರಿಷಭ್ ಪಂತ್, ಅರ್ಧಶತಕ ಸಿಡಿಸಿ ಮಿಂಚಿದರು. ಕಟ್ಟುನಿಟ್ಟಾದ ಬೌಲಿಂಗ್ ನಡೆಸಿದ ಬೌಲರ್ಗಳು, ಬಾಂಗ್ಲಾದೇಶ ತಂಡವನ್ನು 60 ರನ್ಗಳಿಂದ ಮಣಿಸಲು ನೆರವಾದರು. ಈ ಗೆಲುವು ರೋಹಿತ್ ಪಡೆಯ ಆತ್ಮವಿಶ್ವಾಸ ವೃದ್ಧಿಸಿದೆ.
ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿತು. ಇದೇ ಮೊದಲ ಬಾರಿಗೆ ಈ ಪಿಚ್ನಲ್ಲಿ ಕಣಕ್ಕಿಳಿದ ಭಾರತ ಉತ್ತಮ ಪ್ರದರ್ಶನ ನೀಡಿತು. ತನ್ನ ಪಾಲಿನ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಪೇರಿಸಿತು. ರಿಷಭ್ ಪಂತ್ 53 ರನ್ ಬಾರಿಸಿ ರಿಟೈರ್ಡ್ ಹರ್ಟ್ ಆದರು. ಈ ಗುರಿ ಹಿಂಬಾಲಿಸಿದ ಬಾಂಗ್ಲಾದೇಶ ಕಳಪೆ ಪ್ರದರ್ಶನ ನೀಡಿತು. 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ಗಳಿಸಲಷ್ಟೇ ಶಕ್ತವಾಯಿತು.
ಭಾರತೀಯರಿಂದ ಕಟ್ಟು ನಿಟ್ಟಾದ ಬೌಲಿಂಗ್
183 ರನ್ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ, ಭಾರಿ ನಿರಾಸೆ ಮೂಡಿಸಿತು. ಆರಂಭದಲ್ಲೇ ಅರ್ಷದೀಪ್ ಎರಡು ವಿಕೆಟ್ ಬೇಟೆಯಾಡುವ ಮೂಲಕ, ಬಾಂಗ್ಲಾ ಬ್ಯಾಟಿಂಗ್ಗೆ ಬ್ರೇಕ್ ಹಾಕಿದರು. ಸೌಮ್ಯ ಸರ್ಕಾರ್ (0), ಲಿಟನ್ ದಾಸ್ (6) ಬೇಗನೇ ಪೆವಿಲಿಯನ್ ಸೇರಿದರು. ನಜ್ಮುಲ್ ಹೊಸೈನ್ ಶಾಂಟೋ (0), ತಂಜಿದ್ ಹಸನ್ (17), ತೌಹಿದ್ ಹೃದೋಯ್ (13) ಅವರನ್ನು ಸಿರಾಜ್, ಹಾರ್ದಿಕ್, ಅಕ್ಷರ್ ಪಟೇಲ್ ಪೆವಿಲಿಯನ್ ಸೇರಿಸಿದರು.
ಆದರೆ ಕೊನೆಯಲ್ಲಿ ಶಕೀಬ್ ಅಲ್ ಹಸನ್ ಮತ್ತು ಮಹಮ್ಮದ್ದುಲ್ಲಾ ಹೋರಾಟ ನಡೆಸಿದರು. ಟೀಮ್ ಇಂಡಿಯಾ ಬೌಲರ್ಗಳಿಗೆ ಸವಾಲೆಸೆದರು. ಭಾರತದ ಬೌಲರ್ಗಳು ಹೆಚ್ಚು ಕಠಿಣ ಬೌಲಿಂಗ್ ನಡೆಸಿ ಹೆಚ್ಚು ರನ್ ಬಿಟ್ಟುಕೊಟ್ಟಿಲ್ಲ. ಕೊನೆಯಲ್ಲಿ ಶಕೀಬ್ ಅಲ್ ಹಸನ್ 28 ರನ್ ಸಿಡಿಸಿ ಔಟಾದರು. ಮಹಮ್ಮದ್ದುಲ್ಲಾ 40 ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ನಲ್ಲಿ ನಿರಾಸೆ ಮೂಡಿಸಿದರೂ ಕೊನೆಯಲ್ಲಿ ಶಿವಂ ದುಬೆ ಎರಡು ವಿಕೆಟ್ ಕಿತ್ತು ಗಮನ ಸೆಳೆದರು.
ರಿಷಭ್-ಹಾರ್ದಿಕ್ ಮಿಂಚು, ಸಂಜು-ದುಬೆ ವೈಫಲ್ಯ
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಸಂಜು ಸ್ಯಾಮ್ಸನ್, ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಸಂಜು ನಿರಾಸೆ ಮೂಡಿಸಿದರು. 6 ಎಸೆತಗಳಲ್ಲಿ 1 ರನ್ ಗಳಿಸಿ ಹೊರ ನಡೆದರು. ರೋಹಿತ್ (23) ಸಹ ಗಮನಾರ್ಹ ಪ್ರದರ್ಶನ ನೀಡಲಿಲ್ಲ. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಿಷಭ್ ಪಂತ್, ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಧಾರವಾಗುವ ಸುಳಿವು ಕೊಟ್ಟಿದ್ದಾರೆ. 32 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿ ಸಹಿತ ಅಜೇಯ 53 ರನ್ ಬಾರಿಸಿ ಮತ್ತೊಬ್ಬರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಕೊಟ್ಟು ಮೈದಾನ ತೊರೆದರು.
ಆ ಬಳಿಕ ಸೂರ್ಯಕುಮಾರ್ ಯಾದವ್ 31 ರನ್ಗಳ ಕಾಣಿಕೆ ಒದಗಿಸಿದರೆ, ಶಿವಂ ದುಬೆ ರನ್ ಗಳಿಸಲು ಪರದಾಡಿದರು. 16 ಎಸೆತಗಳಲ್ಲಿ 14 ರನ್ ಗಳಿಸಿ ಡಗೌಟ್ ಸೇರಿದರು. ಆದರೆ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮಿಂಚಿನ ಬ್ಯಾಟಿಂಗ್ ನಡೆಸಿದರು. ಐಪಿಎಲ್ನಲ್ಲಿ ಕಳಪೆ ಬ್ಯಾಟಿಂಗ್ನಿಂದ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್, ಭರವಸೆಯ ಇನ್ನಿಂಗ್ಸ್ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ. 23 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 40 ರನ್ ಸಿಡಿಸಿದರು. ಬಾಂಗ್ಲಾ ಪರ ಮೆಹದಿ ಹಸನ್, ಶೋರಿಫುಲ್ ಇಸ್ಲಾಂ, ಮಹಮ್ಮದ್ದುಲ್ಲಾ, ತನ್ವೀರ್ ಇಸ್ಲಾಂ ತಲಾ 1 ವಿಕೆಟ್ ಉರುಳಿಸಿದರು.
