ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯದ ವೇಳೆ ಅರ್ಧಕ್ಕೆ ನಿಂತ ರಾಷ್ಟ್ರಗೀತೆ; ಆಟಗಾರರಿಗೆ ಗೊಂದಲ, ಫ್ಯಾನ್ಸ್ ಆಕ್ರೋಶ
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ಮುಗಿದ ನಂತರ ಇನ್ನಿಂಗ್ಸ್ ಶುರುವಾಗುವುದಕ್ಕೂ ಮುನ್ನ ಉಭಯ ತಂಡಗಳು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಬಂದವು. ಭಾರತದ ರಾಷ್ಟ್ರಗೀತೆ ಮೊಳಗಿದಾಗ ತಾಂತ್ರಿಕ ದೋಷ ಎದುರಾಗಿದೆ. ಇದು ಭಾರತದ ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಭಾರತೀಯರು ದೂರಿದ್ದಾರೆ.
ಟೀಮ್ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಇಲ್ಲಿ ಉಭಯ ತಂಡಗಳ ನಡುವೆ 4 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯ ಶುಕ್ರವಾರ ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಆದರೆ, ಈ ಪಂದ್ಯದ ಆರಂಭದಲ್ಲೇ ಒಂದು ಘಟನೆ ಕಂಡು ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಭಾರತದ ರಾಷ್ಟ್ರಗೀತೆಗೆ ದಕ್ಷಿಣ ಆಫ್ರಿಕಾ ಅವಮಾನ ಮಾಡಿದೆ ಎಂದು ಭಾರತೀಯ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಟಾಸ್ ಮುಗಿದ ನಂತರ ಇನ್ನಿಂಗ್ಸ್ ಶುರುವಾಗುವುದಕ್ಕೂ ಮುನ್ನ ಉಭಯ ತಂಡಗಳು ತಮ್ಮ ತಮ್ಮ ದೇಶದ ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಬಂದವು. ಪ್ರತಿ ಸರಣಿಯ ಸಮಯದಲ್ಲಿ ಎರಡೂ ತಂಡಗಳ ರಾಷ್ಟ್ರಗೀತೆ ಮೊಳಗಿದ ನಂತರವೇ ಪಂದ್ಯ ಶುರುಮಾಡುವುದು ವಾಡಿಕೆ. ಆದರೆ, ಈ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದಾಗ ಅಪರೂಪದ ಘಟನೆಯೊಂದು ಕಂಡುಬಂದಿದೆ.
ವಾಸ್ತವವಾಗಿ, ಭಾರತದ ರಾಷ್ಟ್ರಗೀತೆಯ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ, ರಾಷ್ಟ್ರಗೀತೆಯನ್ನು ಎರಡು ಬಾರಿ ನಿಲ್ಲಿಸಬೇಕಾಯಿತು. ಈ ಘಟನೆ ನೋಡಿ ಅಭಿಮಾನಿಗಳು ಮಾತ್ರವಲ್ಲ. ಆಟಗಾರರು ಕೂಡ ಮುಜುಗರಕ್ಕೆ ಒಳಗಾದರು. ಈ ಘಟನೆಯ ನಂತರ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ.
ಅಭಿಮಾನಿಗಳ ಆಕ್ರೋಶ
ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯ ಕಳಪೆ ನಿರ್ವಹಣೆಯನ್ನು ಬಲವಾಗಿ ಟೀಕಿಸಿದ್ದಾರೆ. ಕೆಲವು ಅಭಿಮಾನಿಗಳು ಇದನ್ನು ತಾಂತ್ರಿಕ ದೋಷ ಎಂದು ಕರೆದರೆ, ಇನ್ನೂ ಕೆಲವು ಅಭಿಮಾನಿಗಳು ಇದು ಭಾರತದ ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಆದರೆ, ಈ ಘಟನೆ ಬಳಿಕ ನಿಗದಿತ ಸಮಯಕ್ಕೆ ಪಂದ್ಯ ಆರಂಭಗೊಂಡು, ಟೀಮ್ ಇಂಡಿಯಾ ಅದ್ಭುತ ಬ್ಯಾಟಿಂಗ್ ನಡೆಸಿತು.
ವಿಡಿಯೋ ಇಲ್ಲಿದೆ
ಸಂಜು ಸ್ಯಾಮ್ಸನ್ ದಾಖಲೆಯ ಶತಕ:
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ದೊಡ್ಡ ಮೊತ್ತ ಕಲೆ ಹಾಕಿತು. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಈ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಸಂಜು ಸ್ಯಾಮ್ಸನ್. 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ ದಾಖಲೆಯ 107 ರನ್ ಗಳಿಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಶತಕ ಸಿಡಿಸಿದ ಏಷ್ಯಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ವಿಶ್ವ ದಾಖಲೆ ಬರೆದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಈ ಶತಕದೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಶತಕ ಬಾರಿಸಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಸೌತ್ ಆಫ್ರಿಕಾ ವಿರುದ್ಧ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸ್ಯಾಮ್ಸನ್ ತಮ್ಮದಾಗಿಸಿಕೊಂಡಿದ್ದಾರೆ. ಭಾರತ ನೀಡಿದ್ದ 202 ರನ್ ಬೃಹತ್ ಮೊತ್ತವನ್ನು ಬೆನ್ನತ್ತಿದ ಆಫ್ರಿಕಾ ತಂಡ 17.5 ಓವರ್‌ಗಳಲ್ಲಿ 141 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ 61 ರನ್ಗಳ ಭರ್ಜರಿ ಜಯ ಸಾಧಿಸಿತು.
ವರದಿ: ವಿನಯ್ ಭಟ್.
ಇದನ್ನೂ ಓದಿ | Sanju Century: ದಕ್ಷಿಣ ಆಫ್ರಿಕಾ ಬೌಲರ್ಗಳನ್ನು ಚೆಂಡಾಡಿದ ಕೇರಳದ ಕಲಿ ಸಂಜು: ಹೀಗಿತ್ತು ಟಿ20 ಪಂದ್ಯಗಳ ದಾಖಲೆಯ ಬ್ಯಾಟಿಂಗ್ ವೈಖರಿ