ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​​ನ್ಯೂಸ್​; ಐಪಿಎಲ್, ಡಬ್ಲ್ಯುಪಿಎಲ್ ಆರಂಭಕ್ಕೆ​ ಡೇಟ್​ ಫಿಕ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​​ನ್ಯೂಸ್​; ಐಪಿಎಲ್, ಡಬ್ಲ್ಯುಪಿಎಲ್ ಆರಂಭಕ್ಕೆ​ ಡೇಟ್​ ಫಿಕ್ಸ್

ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​​ನ್ಯೂಸ್​; ಐಪಿಎಲ್, ಡಬ್ಲ್ಯುಪಿಎಲ್ ಆರಂಭಕ್ಕೆ​ ಡೇಟ್​ ಫಿಕ್ಸ್

IPL Mini Auction 2024: 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಾವಾಗಿಂದ ಆರಂಭವಾಗಲಿದೆ ಎಂಬುದರ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಮಾಹಿತಿ ನೀಡಿದ್ದಾರೆ. ಸಂಭವನೀಯ ದಿನಾಂಕ ತಿಳಿಸಿರುವ ಜಯ್​ ಶಾ, ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಐಪಿಎಲ್, ಡಬ್ಲ್ಯುಪಿಎಲ್ ಆರಂಭಕ್ಕೆ​ ಡೇಟ್​ ಫಿಕ್ಸ್.
ಐಪಿಎಲ್, ಡಬ್ಲ್ಯುಪಿಎಲ್ ಆರಂಭಕ್ಕೆ​ ಡೇಟ್​ ಫಿಕ್ಸ್.

ಡಿಸೆಂಬರ್ 19ರಂದು ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL Mini Auction 2024) ಮಿನಿ ಹರಾಜು ನಡೆಯಲಿದೆ. ಫ್ರಾಂಚೈಸಿಗಳು ಯಾವೆಲ್ಲಾ ಆಟಗಾರರನ್ನು ಖರೀದಿಸಬೇಕೆಂಬ ಲೆಕ್ಕಾಚಾರ ಹಾಕುವಲ್ಲಿ ನಿರತವಾಗಿವೆ. ಈ ಮಧ್ಯೆಯೇ ಟೂರ್ನಿ ಯಾವಾಗ ಆರಂಭವಾಗಲಿದೆ ಎಂಬ ಗೊಂದಲಕ್ಕೆ ಉತ್ತರ ಸಿಕ್ಕಿದೆ. ಐಪಿಎಲ್​ ಪ್ರಾರಂಭವಾಗಲಿದೆ ಎಂಬುದಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ (Jay Shah) ಬಹಿರಂಗಪಡಿಸಿದ್ದಾರೆ.

ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಲಿದ್ದು, ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮುಕ್ತಾಯವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಶನಿವಾರ ದೃಢಪಡಿಸಿದ್ದಾರೆ. ಡಿಸೆಂಬರ್ 9ರಂದು ಮುಂಬೈಯಲ್ಲಿ ನಡೆದಿದ್ದ ಮಹಿಳಾ ಪ್ರೀಮಿಯರ್​ ಲೀಗ್​ನ ಮಿನಿ ಹರಾಜಿನ ವೇಳೆ ಜಯ್​ ಶಾ 17ನೇ ಆವೃತ್ತಿಯ ಐಪಿಎಲ್​ ಆರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ.​

ಒಂದೇ ರಾಜ್ಯದಲ್ಲಿ ಡಬ್ಲ್ಯುಪಿಎಲ್​

ಇದೇ ವೇಳೆ ಮಹಿಳಾ ಪ್ರೀಮಿಯರ್ ಲೀಗ್​ ಆರಂಭವಾಗುವ ಮತ್ತು ಯಾವೆಲ್ಲಾ ನಗರಗಳಲ್ಲಿ ನಡೆಯಲಿದೆ ಎಂಬುದರ ಕುರಿತು ವಿವರ ನೀಡಿದ್ದಾರೆ. ಮುಂಬರುವ ಡಬ್ಲ್ಯುಪಿಎಲ್ ಸೀಸನ್ ಫೆಬ್ರವರಿ 2 ಅಥವಾ 3ರಂದು ಸಂಭವನೀಯ ಪ್ರಾರಂಭ ದಿನಾಂಕ ನಿಗದಿಪಡಿಸಲಾಗಿದೆ ಎಂದು ಜಯ್ ಶಾ ಹೇಳಿದ್ದಾರೆ. ವ್ಯವಸ್ಥಾಪನಾ ಯೋಜನೆಗಳ ಸವಾಲು ಕಾರಣ ಈ ಬಾರಿ ಲೀಗ್ ಅನ್ನು ಒಂದು ರಾಜ್ಯಕ್ಕೆ ಸೀಮಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ವಿದೇಶಕ್ಕೆ ಸ್ಥಳಾಂತರಿಸಲಾಗಿತ್ತು

ಐಪಿಎಲ್ ಪ್ರತಿ ಸೀನಸ್ ಕೂಡ​ ಮಾರ್ಚ್​​​ ಅಂತಿಮ ವಾರದಲ್ಲೇ​​ ಆರಂಭಗೊಳ್ಳಲಿದೆ. 2 ತಿಂಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಮೇ ಅಂತ್ಯದವರೆಗೂ ತನಕ ನಡೆಯುತ್ತದೆ. ಆದರೆ, ಮುಂಬರುವ ಐಪಿಎಲ್​ ಜರುಗುವ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹಾಗಾಗಿ ಭಾರತದಲ್ಲಿ ಈ ಟೂರ್ನಿ ಜರುಗುವುದು ಕಷ್ಟ. ಬೇರೆಡೆ ಶಿಫ್ಟ್ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಮಾರ್ಚ್​​ ಕೊನೆ ವಾರದಲ್ಲಿ ಐಪಿಎಲ್​ ಶುರುವಾಗುತ್ತದೆ ಎಂದು ಜಯ್​ ಶಾ ಹೇಳಿದರೂ ವೇಳಾಪಟ್ಟಿ, ಸ್ಥಳ ಎಲ್ಲಿ ಎಂದು ಅಧಿಕೃತ ಮಾಹಿತಿ ತಿಳಿಸಿಲ್ಲ.

ಚುನಾವಣೆ ದಿನಾಂಕದ ಬಳಿಕ ವೇಳಾಪಟ್ಟಿ ನಿರ್ಧಾರ

ಒಂದು ವೇಳೆ ಐಪಿಎಲ್​ ವೇಳಾಪಟ್ಟಿ ವೇಳೆ ಚುನಾವಣೆ ನಡೆದರೆ ವಿದೇಶಕ್ಕೆ ಸ್ಥಳಾಂತರಿಸುವ ನಿರೀಕ್ಷೆಯೂ ಇದೆ. ಈ ಹಿಂದೆಯೂ ಇದೇ ರೀತಿ ಮಾಡಲಾಗಿತ್ತು. 2009ರಲ್ಲಿ ನಡೆದ ಚುನಾವಣೆ ಕಾರಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014ರಲ್ಲಿ ಮೊದಲಾರ್ಧದ ಪಂದ್ಯಗಳು ಯುಎಇಯಲ್ಲಿ ಜರುಗಿದ್ದವು. ಹಾಗಾಗಿ ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ವೇಳಾಪಟ್ಟಿ ಸಿದ್ಧಪಡಿಸಿ ಭಾರತದಲ್ಲೇ ಆಯೋಜಿಸಬೇಕಾ ಅಥವಾ ವಿದೇಶದಲ್ಲಿ ನಡೆಸಬೇಕಾ ಎಂಬುದರ ಕುರಿತು ಚರ್ಚೆ ನಡೆಸಲಿದೆ ಬಿಸಿಸಿಐ.

1166 ಮಂದಿ ನೋಂದಣಿ

ದುಬೈನಲ್ಲಿ ಡಿಸೆಂಬರ್ 19ರಂದು ನಡೆಯಲಿರುವ ಮಿನಿ ಹರಾಜಿಗೆ ಬರೋಬ್ಬರಿ 1166 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 830 ಭಾರತೀಯರು, 336 ವಿದೇಶಿ ಆಟಗಾರರು. 212 ಕ್ಯಾಪ್ಡ್, 909 ಅನ್‌ ಕ್ಯಾಪ್ಡ್ ಮತ್ತು 45 ಅಸೋಸಿಯೇಟ್ ಪ್ಲೇಯರ್ಸ್​ ಈ ಪಟ್ಟಿಯಲ್ಲಿದ್ದಾರೆ. ಘಟಾನುಘಟಿ ಆಟಗಾರರೇ ಐಪಿಎಲ್ ಆಡುವ ಒಲವು ತೋರಿದ್ದು, ಕೋಟಿ ಕೋಟಿ ಹಣದ ಹೊಳೆ ಹರಿಯುವ ಸಾಧ್ಯತೆ ಇದೆ. ಆದರೆ ಎಲ್ಲಾ 10 ತಂಡಗಳು ಭರ್ತಿ ಮಾಡಬೇಕಿರುವುದು ಕೇವಲ 77 ಸ್ಲಾಟ್ ಮಾತ್ರ.

Whats_app_banner