ತನ್ನದಲ್ಲದ ಪಂದ್ಯದಲ್ಲಿ ಡೆಲ್ಲಿಗೆ ‘ಸೂಪರ್’ ಗೆಲುವು; ಚಿನ್ನದಂಥ ಅವಕಾಶ ಕೈಚೆಲ್ಲಿ ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಆರ್​ಆರ್​
ಕನ್ನಡ ಸುದ್ದಿ  /  ಕ್ರಿಕೆಟ್  /  ತನ್ನದಲ್ಲದ ಪಂದ್ಯದಲ್ಲಿ ಡೆಲ್ಲಿಗೆ ‘ಸೂಪರ್’ ಗೆಲುವು; ಚಿನ್ನದಂಥ ಅವಕಾಶ ಕೈಚೆಲ್ಲಿ ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಆರ್​ಆರ್​

ತನ್ನದಲ್ಲದ ಪಂದ್ಯದಲ್ಲಿ ಡೆಲ್ಲಿಗೆ ‘ಸೂಪರ್’ ಗೆಲುವು; ಚಿನ್ನದಂಥ ಅವಕಾಶ ಕೈಚೆಲ್ಲಿ ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಆರ್​ಆರ್​

ಇಂಡಿಯನ್ ಪ್ರೀಮಿಯರ್ ಲೀಗ್​-2025ರಲ್ಲಿ ನಡೆದ ಮೊದಲ ಸೂಪರ್ ಓವರ್​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ತನ್ನದಲ್ಲದ ಪಂದ್ಯದಲ್ಲಿ ಡೆಲ್ಲಿಗೆ ‘ಸೂಪರ್’ ಗೆಲುವು; ಚಿನ್ನದಂಥ ಅವಕಾಶ ಕೈಚೆಲ್ಲಿ ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಆರ್​ಆರ್​
ತನ್ನದಲ್ಲದ ಪಂದ್ಯದಲ್ಲಿ ಡೆಲ್ಲಿಗೆ ‘ಸೂಪರ್’ ಗೆಲುವು; ಚಿನ್ನದಂಥ ಅವಕಾಶ ಕೈಚೆಲ್ಲಿ ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಆರ್​ಆರ್​ (AFP)

18ನೇ ಆವೃತ್ತಿಯ ಐಪಿಎಲ್​ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ಪಂದ್ಯದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಮನರಂಜನೆಯ ರಸದೌತಣ ಉಣಬಡಿಸಿತು. ಯಾವಾಗ ಬೇಕಾದರೂ ಪಂದ್ಯದ ಚಿತ್ರಣ ಬದಲಾಗಬಹುದು ಎಂಬುದಕ್ಕೆ ಐಪಿಎಲ್​ನ 32ನೇ ಪಂದ್ಯ ಸಾಕ್ಷಿ. ಕೊನೆಯ ಎಸೆತದ ತನಕ ತನ್ನದೇ ಎಂದು ಷರಾ ಬರೆದಿಟ್ಟಿದ್ದ ರಾಯಲ್ಸ್ ತನ್ನ ಎದುರಿದ್ದ ಚಿನ್ನದಂಥ ಅವಕಾಶಗಳನ್ನು ಕೈಚೆಲ್ಲಿ ಸೂಪರ್​ ಓವರ್​​ನಲ್ಲಿ ಮುಗ್ಗರಿಸಿತು. ಇನ್ನಿಂಗ್ಸ್​ದುದ್ದಕ್ಕೂ ಏಕಪಕ್ಷೀಯವಾಗಿ ಸಾಗಿದ ಪರಿಣಾಮ ತನ್ನದಲ್ಲದ ಪಂದ್ಯ ಎಂದು ಭಾವಿಸಿದ್ದ ಡೆಲ್ಲಿ ಸೂಪರ್ ಡೂಪರ್​ ಗೆಲುವಿನೊಂದಿಗೆ ಸಂಭ್ರಮಿಸಿದೆ.

ರಾಯಲ್ಸ್ ವಿರುದ್ಧ ಪಡೆದಿದ್ದು ಒಂದೇ ವಿಕೆಟ್ ಆದರೂ ಇನ್ನಿಂಗ್ಸ್​ನ 20ನೇ ಓವರ್​​ ಮತ್ತು ಸೂಪರ್​ ಓವರ್​​ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಹಿನ್ನೆಲೆ ಡೆಲ್ಲಿ ವೇಗಿ ಮಿಚೆಲ್ ಸ್ಟಾರ್ಕ್​ ಗೆಲುವಿನ ರೂವಾರಿಯಾದರು. 2025ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಜರುಗಿದ ಮೊದಲ ಸೂಪರ್​ ಓವರ್​​ನಲ್ಲಿ 12 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಇನ್ನೂ 2 ಎಸೆತ ಬಾಕಿ ಇರುವಂತೆ ಜಯದ ಕೇಕೆ ಹಾಕಿತು. ಸೂಪರ್ ಓವರ್ ಸೇರಿದಂತೆ ಪಂದ್ಯದುದ್ದಕ್ಕೂ ಮಾಡಿದ ಎಡವಟ್ಟುಗಳೇ ಪಿಂಕ್ ಆರ್ಮಿ ಸೋಲಿಗೆ ಕಾರಣ. ಹ್ಯಾಟ್ರಿಕ್ ಸೋಲಿಗೆ ಶರಣಾದ ಆರ್​ಆರ್​, ಪ್ಲೇಆಫ್​ ಆಸೆ ಜೀವಂತವಾಗಿಟ್ಟುಕೊಳ್ಳಲು ಬಲಿಷ್ಠವಾಗಿ ಕಂಬ್ಯಾಕ್ ಮಾಡುವ ಅಗತ್ಯ ಇದೆ. ಮತ್ತೊಂದೆಡೆ ಸತತ 4 ಗೆಲುವುಗಳ ನಂತರ ಮೊದಲ ಸೋಲು ಕಂಡಿದ್ದ ಡಿಸಿ ಇದೀಗ ಗೆದ್ದು ಲಯಕ್ಕೆ ಮರಳಿದೆ.

ಮಿಚೆಲ್ ಸ್ಟಾರ್ಕ್ ಬೊಂಬಾಟ್ ಬೌಲಿಂಗ್

20ನೇ ಓವರ್​​ನಲ್ಲಿ ರಾಜಸ್ಥಾನ್ ಗೆಲುವಿಗೆ ಕೇವಲ 9 ರನ್ ಬೇಕಿತ್ತು. ಅದರಲ್ಲೂ ಕ್ರೀಸ್​ನಲ್ಲಿ ಸೆಟಲ್ ಆಗಿದ್ದ ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್​ ಇದ್ದರು. ಹೀಗಾಗಿ ಆರ್​ಆರ್​ಗೆ ಗೆಲುವು ಪಕ್ಕಾ ಎಂದು ಹೇಳಲಾಗಿತ್ತು. ಆದರೆ ಸ್ಟಾರ್ಕ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ 8 ರನ್ ಅಷ್ಟೇ ಬಿಟ್ಟುಕೊಟ್ಟು ಸೂಪರ್​ ಓವರ್​ಗೆ ಕಾರಣರಾದರು. ಬಳಿಕ ಸೂಪರ್​ ಓವರ್​​ನಲ್ಲೂ ಅವರೇ ಬೌಲಿಂಗ್ ಮಾಡಿದರು. ಆಗಲೂ ಕೇವಲ 11 ರನ್ ಬಿಟ್ಟುಕೊಟ್ಟು 2 ರನೌಟ್ ಮಾಡಿದರು. ಈ ಸ್ಕೋರ್​ ಅನ್ನು ಡೆಲ್ಲಿ 4 ಎಸೆತಗಳಲ್ಲೇ ಚೇಸ್ ಮಾಡಿತು. ಆಸೀಸ್​ ವೇಗಿ ಭರ್ಜರಿ ಬೌಲಿಂಗ್​ನಿಂದಾಗಿ ಡಿಸಿ ಗೆದ್ದ ಹಿನ್ನೆಲೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಇದು ತವರಿನ ಅಭಿಮಾನಿಗಳಿಗೆ ಕ್ಯಾಪಿಟಲ್ಸ್ ಗೆಲುವಿನ ಉಡುಗೊರೆ ನೀಡಿತು. ಅಕ್ಷರ್ ಪಟೇಲ್ ನೇತೃತ್ವದ ತಂಡ 5 ಗೆಲುವುಗಳೊಂದಿಗೆ 10 ಅಂಕ ಪಡೆದು ಅಗ್ರಸ್ಥಾನಕ್ಕೇರಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡವು ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಪೇರಿಸಿತು. ಅಭಿಷೇಕ್ ಪೊರೆಲ್ 49 ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರ್. ಜೋಫ್ರಾ ಆರ್ಚರ್​ 2 ವಿಕೆಟ್ ಉರುಳಿಸಿ ಮಿಂಚಿದರು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ _ ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಯಶಸ್ವಿ ಜೈಸ್ವಾಲ್ (51), ನಿತೀಶ್ ರಾಣಾ (51) ಜೊತೆಗೆ ಸಂಜು ಸ್ಯಾಮ್ಸನ್ (ರಿಟೈರ್ಡ್ ಹರ್ಟ್) ಮತ್ತು ಧ್ರುವ್ ಜುರೆಲ್ ಕೂಡ ಅಮೋಘ ಕೊಡುಗೆ ನೀಡಿದರು. ಗೆಲುವು ಸಾಧ್ಯವಾಗಿದ್ದರೂ ಆರ್​ಆರ್ ಕೊನೆಯ ಓವರ್​​ನಲ್ಲಿ ಪರದಾಡಿತು. ಕೇವಲ 9 ರನ್ ಗಳಿಸಲು ಸಾಧ್ಯವಾಗಲಿಲ್ಲ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.