IPL 2025: ಈ ದಿನಾಂಕದಂದು ಐಪಿಎಲ್ ಆರಂಭ; ಮುಂದಿನ 3 ಸೀಸನ್‌ಗಳ ದಿನಾಂಕ ಪ್ರಕಟಿಸಿದ ಬಿಸಿಸಿಐ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2025: ಈ ದಿನಾಂಕದಂದು ಐಪಿಎಲ್ ಆರಂಭ; ಮುಂದಿನ 3 ಸೀಸನ್‌ಗಳ ದಿನಾಂಕ ಪ್ರಕಟಿಸಿದ ಬಿಸಿಸಿಐ

IPL 2025: ಈ ದಿನಾಂಕದಂದು ಐಪಿಎಲ್ ಆರಂಭ; ಮುಂದಿನ 3 ಸೀಸನ್‌ಗಳ ದಿನಾಂಕ ಪ್ರಕಟಿಸಿದ ಬಿಸಿಸಿಐ

2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯ ಇದೇ ದಿನ ನಡೆಯಲಿದೆ. ಬಿಸಿಸಿಐ ಒಂದೇ ಬಾರಿಗೆ ಮುಂದಿನ ಮೂರು ಆವೃತ್ತಿಗಳ ಟೂರ್ನಿಯ ದಿನಾಂಕ ಪ್ರಕಟಿಸಿದೆ.

IPL 2025: ಈ ದಿನಾಂಕದಂದು ಐಪಿಎಲ್ ಆರಂಭ; ಮುಂದಿನ 3 ಸೀಸನ್‌ಗಳ ದಿನಾಂಕ ಪ್ರಕಟಿಸಿದ ಬಿಸಿಸಿಐ
IPL 2025: ಈ ದಿನಾಂಕದಂದು ಐಪಿಎಲ್ ಆರಂಭ; ಮುಂದಿನ 3 ಸೀಸನ್‌ಗಳ ದಿನಾಂಕ ಪ್ರಕಟಿಸಿದ ಬಿಸಿಸಿಐ (IPL)

ಐಪಿಎಲ್‌ 2025ರ ಮೆಗಾ ಹರಾಜು ದಿನಾಂಕ ಸಮೀಪಿಸುತ್ತಿದ್ದಂತೆಯೇ, ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಯ ಪಂದ್ಯಾವಳಿ ಆರಂಭ ದಿನಾಂಕವನ್ನು ಬಿಸಿಸಿಐ ಘೋಷಿಸಿದೆ. 2025ರ ಮಾರ್ಚ್ 14ರಂದು ಮಿಲಿಯನ್‌ ಡಾಲರ್‌ ಟೂರ್ನಿ ಆರಂಭವಾಗಲಿದ್ದು, ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ. ಇದೇ ವೇಳೆ ಮುಂದಿನ ಮೂರು ಋತುಗಳ ದಿನಾಂಕಗಳನ್ನು ಖಚಿತಪಡಿಸಿರುವ ಐಪಿಎಲ್ ಆಡಳಿತ ಮಂಡಳಿಯು, ಟೂರ್ನಿಯಲ್ಲಿ ಭಾಗಿಯಾಗುವ ಎಲ್ಲಾ ಹತ್ತು ಫ್ರಾಂಚೈಸಿಗಳಿಗೆ ಅಧಿಕೃತ ಸಂವಹನವನ್ನು ಕಳುಹಿಸಿದೆ.

2026ರ ಆವೃತ್ತಿಯು ಮಾರ್ಚ್ 15ರಿಂದ ಮೇ 31ರವರೆಗೆ ನಡೆಯಲಿದ್ದು, 2027ರ ಆವೃತ್ತಿಯು ಮಾರ್ಚ್ 14ರಿಂದ ಮೇ 30ರವರೆಗೆ ನಡೆಯಲಿದೆ ಎಂದು ಐಪಿಎಲ್‌ ತಿಳಿಸಿದೆ. ಐಪಿಎಲ್ ಆಡಳಿತ ಮಂಡಳಿಯ ಪ್ರಕಾರ ಈ ದಿನಾಂಕಗಳೇ ಪಂದ್ಯಾವಳಿಯ ಅಂತಿಮ ದಿನಾಂಕಗಳಾಗುವ ಸಾಧ್ಯತೆಯಿದೆ.

2025ರ ಐಪಿಎಲ್‌ ಆವೃತ್ತಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಕಳೆದ ಆವೃತ್ತಿಯಲ್ಲೂ ಇಷ್ಟೇ ಪಂದ್ಯಗಳಿದ್ದವು. ಆದರೆ, 2022ರಲ್ಲಿ ನಡೆಎದ ಐಪಿಎಲ್ ಪಟ್ಟಿ ಮಾಡಿದ 84 ಪಂದ್ಯಗಳಿಗಿಂತ ಹತ್ತು ಪಂದ್ಯಗಳು ಕಡಿಮೆ.

ವಿವಿಧ ದೇಶಗಳಿಂದ ಆಟಗಾರರಿಗೆ ಅನುಮತಿ

ಇಎಸ್‌ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಹೆಚ್ಚಿನ ಪೂರ್ಣ ಸದಸ್ಯ ರಾಷ್ಟ್ರಗಳ ವಿದೇಶಿ ಆಟಗಾರರು ಮುಂದಿನ ಮೂರು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಲು ತಮ್ಮ ತಮ್ಮ ದೇಶದ ಕ್ರಿಕೆಟ್ ಮಂಡಳಿಗಳಿಂದ ಅನುಮೋದನೆ ಪಡೆದಿದ್ದಾರೆ. ಈಗಾಗಲೇ ಐಪಿಎಲ್ 2025ರಲ್ಲಿ ಭಾಗವಹಿಸಲು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಎಲ್ಲಾ ಆಟಗಾರರಿಗೆ ಅನುಮತಿ ನೀಡಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆಯ ಆಟಗಾರರು ಮುಂದಿನ ಮೂರು ಋತುಗಳಿಗೆ ಸಂಪೂರ್ಣವಾಗಿ ಲಭ್ಯವಿರುತ್ತಾರೆ ಎಂದು ಬಿಸಿಸಿಐ ಹೇಳಿದೆ.

ಗಮನ ಸೆಳೆದ ಐಪಿಎಲ್‌ ಮೆಗಾ ಹರಾಜು

ಐಪಿಎಲ್ 2025ರ ಆವೃತ್ತಿಗಗೂ ಮುನ್ನ, ಇದೀಗ ಅಭಿಮಾನಿಗಳ ಚಿತ್ತ ಮೆಗಾ ಹರಾಜಿನ ಮೇಲಿದೆ. ಮೆಗಾ ಹರಾಜು ಪ್ರಕ್ರಿಯೆಯು ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ. ಒಟ್ಟು 574 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 574 ಆಟಗಾರರ ಪೈಕಿ 366 ಭಾರತೀಯರು ಮತ್ತು 208 ವಿದೇಶಿ ಆಟಗಾರರು. ಇವರಲ್ಲಿ 3 ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಸೇರಿದ್ದಾರೆ. ಹರಾಜಿನಲ್ಲಿ 318 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಮತ್ತು 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಕೂಡಾ ಸೇರಿದ್ದಾರೆ.

ವಿವಿಧ ಫ್ರಾಂಚೈಸಿಗಳ ಬಳಿ 204 ಸ್ಲಾಟ್‌ಗಳು ಲಭ್ಯವಿದ್ದು, ವಿದೇಶಿ ಆಟಗಾರರಿಗೆ 70 ಸ್ಲಾಟ್‌ಗಳು ಲಭ್ಯವಿವೆ. 2 ಕೋಟಿ ರೂಪಾಯಿ ಅತ್ಯಧಿಕ ಮೀಸಲು ಬೆಲೆಯಾಗಿದ್ದು, 81 ಆಟಗಾರರು ಅತ್ಯುನ್ನತ ಬೆಲೆಯೊಂದಿಗೆ ಹರಾಜಿಗೆ ನಿಂತಿದ್ದಾರೆ. ಎರಡು ದಿನಗಳ ಮೆಗಾ ಹರಾಜು ನವೆಂಬರ್ 24ರಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ. ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮಿಚೆಲ್ ಸ್ಟಾರ್ಕ್ ಅವರಂಥಾ ಪ್ರಬಲ ಆಟಗಾರರು ಗಮನ ಸೆಳೆದಿದ್ದಾರೆ.

Whats_app_banner