ಜಸ್ಪ್ರೀತ್ ಬುಮ್ರಾ ಆಡದಿದ್ದರೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಅವಕಾಶ ಶೇ 30ರಷ್ಟು ಕುಸಿತ; ಗಂಭೀರ್, ರೋಹಿತ್ಗೆ ಎಚ್ಚರಿಕೆ
Jasprit Bumrah: ಜಸ್ಪ್ರೀತ್ ಬುಮ್ರಾ ಆಡಲು ಫಿಟ್ ಆಗದಿದ್ದರೆ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಅವಕಾಶ ಗಮನಾರ್ಹವಾಗಿ ಕುಸಿಯುತ್ತದೆ ಎಂದು ಮಾಜಿ ಹೆಡ್ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ವೇಗಿ ಜಸ್ಪ್ರೀತ್ ಬುಮ್ರಾ (jasprit bumrah) ಇಲ್ಲದಿದ್ದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy) ಭಾರತ ತಂಡ ಗೆಲ್ಲುವ ಅವಕಾಶ ಶೇ 30 ರಿಂದ 35ರಷ್ಟು ಕುಸಿಯಲಿದೆ ಎಂದು ಮಾಜಿ ಹೆಡ್ಕೋಚ್ ರವಿ ಶಾಸ್ತ್ರಿ (Ravi Shastri) ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಂತ ಅವರನ್ನು ಕರೆತರಲು ಆತುರಪಡಬಾರದು. ಇದು ಅವರ ವೇಗದ ಬೌಲರ್ ವೃತ್ತಿಜೀವನದ ಅಂತ್ಯಕ್ಕೆ ಕಾರಣ ಎಂದರೂ ತಪ್ಪಿಲ್ಲ ಎಂದಿದ್ದಾರೆ. ಕಳೆದ ತಿಂಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಬೌಲಿಂಗ್ ವೇಳೆ ಬೆನ್ನುನೋವಿನ ಸಮಸ್ಯೆಗೆ ಒಳಗಾದ ಬುಮ್ರಾ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೆಬ್ರವರಿ 6ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಭಾರತ ತಂಡದ ಭಾಗವಾಗಿದ್ದ ಯಾರ್ಕರ್ ಸ್ಪೆಷಲಿಸ್ಟ್ನನ್ನು ಸದ್ದಿಲ್ಲದೆ, ಕೈಬಿಡಲಾಗಿದೆ. ಇದು ಅವರ ಚೇತರಿಕೆ ಮತ್ತು ಒಟ್ಟಾರೆ ಫಿಟ್ನೆಸ್ ಬಗ್ಗೆ ಕೆಲವು ಗಂಭೀರ ಅನುಮಾನಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಹೀಗಾಗಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಲ್ಲಿ ಅವಕಾಶ ಪಡೆದಿರುವ ಬುಮ್ರಾ, ಅಲಭ್ಯರಾಗುವುದು ಬಹುತೇಕ ಅನುಮಾನ ಎಂದು ಹೇಳಲಾಗಿದೆ. ಪ್ರಸ್ತುತ ಅವರು ಬೆಂಗಳೂರಿನ ರಾಷ್ಟ್ರೀಯ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ.
ಮತ್ತೆ ತಪ್ಪು ಮಾಡಬೇಡಿ ಎಂದ ಮಾಜಿ ಕೋಚ್
ಬುಮ್ರಾ ಅವರ ಪ್ರಗತಿಯನ್ನು ಲೆಕ್ಕಿಸದೆ, ಟೀಮ್ ಇಂಡಿಯಾದೊಳಗಿನ ನಿರ್ಧಾರ ತೆಗೆದುಕೊಳ್ಳುವವರು ದೀರ್ಘಕಾಲೀನವಾಗಿ ಯೋಚಿಸಬೇಕೆಂದು ಶಾಸ್ತ್ರಿ ಬಯಸಿದ್ದಾರೆ. 2022ರಲ್ಲಿ ಟಿ20 ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ 2 ಟಿ20 ಪಂದ್ಯಗಳಲ್ಲಿ ಬುಮ್ರಾ ಅವರನ್ನು ಕಣಕ್ಕಿಳಿಸಿ ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಾಗಿತ್ತು. ಹಾಗಾಗಿ 10 ತಿಂಗಳ ಕಾಲ ಬುಮ್ರಾ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿದಿದ್ದರು. ಹಾಗಾಗಿ ಈ ಬಾರಿ ಅಂತಹ ತಪ್ಪು ಎಸೆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.
ಗೆಲ್ಲುವ ಅವಕಾಶ ಶೇ 30ರಷ್ಟು ಕುಸಿತ ಎಂದ ರವಿ ಶಾಸ್ತ್ರಿ
ದುರದೃಷ್ಟವಶಾತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದರೆ, ಅದು ತಂಡದ ಅವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರಿ ಲೆಕ್ಕ ಹಾಕಿದ್ದಾರೆ. 2023ರ ವಿಶ್ವಕಪ್ ಮತ್ತು 2024ರ ಟಿ20 ವಿಶ್ವಕಪ್ನಲ್ಲಿ ಭಾರತದ ಅದ್ಭುತ ಪ್ರದರ್ಶನದ ಹಿಂದಿರುವ ರೂವಾರಿಗಳಲ್ಲಿ ಬುಮ್ರಾ ಕೂಡ ಒಬ್ಬರು. ಅದರಲ್ಲೂ ಟಿ20 ವಿಶ್ವಕಪ್ ಫೈನಲ್ನಲ್ಲಿ ಬುಮ್ರಾ ಎಸೆದ ಕೊನೆಯ ಎರಡು ಓವರ್ಗಳನ್ನು ಮರೆಯಲು ಸಾಧ್ಯವೇ? ವಿರಾಟ್ ಕೊಹ್ಲಿ ಅವರು ಬುಮ್ರಾ ಅವರನ್ನು ರಾಷ್ಟ್ರೀಯ ನಿಧಿ ಎಂದು ಕರೆದಿದ್ದಾರೆ. ಅಂತಹ ಆಟಗಾರನೇ ಈಗ ಅಲಭ್ಯರಾದರೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಸಾಧ್ಯತೆಗಳು ತೀರಾ ಕುಸಿಯಲಿವೆ ಎಂದು ಹೇಳಿದ್ದಾರೆ ಶಾಸ್ತ್ರಿ.
ಬುಮ್ರಾ ಫಿಟ್ ಆಗಿಲ್ಲದಿದ್ದರೆ ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಅವಕಾಶಗಳನ್ನು ಶೇಕಡಾ 30-35 ರಷ್ಟು ಕಡಿಮೆ ಮಾಡುತ್ತದೆ ಎಂದು ಶಾಸ್ತ್ರಿ ಹೇಳಿದ್ದಾರೆ. ಕಳೆದ ತಿಂಗಳ ಆರಂಭದಲ್ಲಿ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ 32 ವಿಕೆಟ್ ಪಡೆದಿದ್ದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
