ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲಲು ಟೀಮ್ ಇಂಡಿಯಾ ವಿಶೇಷ ತಂತ್ರ; ಪರ್ತ್ ಸ್ಟೇಡಿಯಂ ಆಯ್ತು ಲಾಕ್​ಡೌನ್, ಫೋನ್​ಗೂ ನಿರ್ಬಂಧ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲಲು ಟೀಮ್ ಇಂಡಿಯಾ ವಿಶೇಷ ತಂತ್ರ; ಪರ್ತ್ ಸ್ಟೇಡಿಯಂ ಆಯ್ತು ಲಾಕ್​ಡೌನ್, ಫೋನ್​ಗೂ ನಿರ್ಬಂಧ

ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲಲು ಟೀಮ್ ಇಂಡಿಯಾ ವಿಶೇಷ ತಂತ್ರ; ಪರ್ತ್ ಸ್ಟೇಡಿಯಂ ಆಯ್ತು ಲಾಕ್​ಡೌನ್, ಫೋನ್​ಗೂ ನಿರ್ಬಂಧ

india vs Australia: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಭಾರತ ತಂಡ ವಾಕಾ ಮೈದಾನದಲ್ಲಿ ತನ್ನ ತರಬೇತಿ ಪ್ರಾರಂಭಿಸಿದೆ. ಆದರೆ ಇಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡದಿರುವುದಲ್ಲದೆ, ಫೋನ್ ಬಳಕೆಗೂ ನಿರ್ಬಂಧ ಹಾಕಲಾಗಿದೆ.

ಟೀಮ್ ಇಂಡಿಯಾ ಆಟಗಾರರು ಪ್ರಾಕ್ಟೀಸ್ ಮಾಡಲೆಂದು ಪರ್ತ್ ಸ್ಟೇಡಿಯಂ ಆಯ್ತು ಲಾಕ್​ಡೌನ್
ಟೀಮ್ ಇಂಡಿಯಾ ಆಟಗಾರರು ಪ್ರಾಕ್ಟೀಸ್ ಮಾಡಲೆಂದು ಪರ್ತ್ ಸ್ಟೇಡಿಯಂ ಆಯ್ತು ಲಾಕ್​ಡೌನ್ (Hindustan Times)

ಆಸ್ಟ್ರೇಲಿಯಾದ ಪರ್ತ್​​ನ ಹಳೆಯ ಟೆಸ್ಟ್ ಮೈದಾನವಾದ ವೆಸ್ಟ್ರನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ (WACA) ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಭಾರತ ತಂಡ ಸಿದ್ಧತೆ ಪ್ರಾರಂಭಿಸಿದೆ. ಆದರೆ, ಸಾರ್ವಜನಿಕ ವೀಕ್ಷಣೆ ನಿರ್ಬಂಧಿಸಲಾಗಿದೆ. ಅಭಿಮಾನಿಗಳು ಪ್ರವೇಶಕ್ಕೆ ನಿರ್ಬಂಧಿಸಿದ್ದು, ಕ್ರೀಡಾಂಗಣ ಮುಚ್ಚಲಾಗಿದೆ. ಆಸೀಸ್ ವಿರುದ್ಧ ನವೆಂಬರ್ 22ರಂದು ಮೊದಲ ಟೆಸ್ಟ್ ಪ್ರಾರಂಭವಾಗಲಿದೆ. ಆದರೆ, ಪಂದ್ಯ ಪ್ರಾರಂಭವಾಗುವ 2 ವಾರಗಳ ಮೊದಲು ಭಾರತೀಯ ಆಟಗಾರರು ಪರ್ತ್ ತಲುಪಿದ್ದಾರೆ. ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಆರಂಭಿಕ ಪಂದ್ಯಕ್ಕೆ ಭಾರತದ ನಾಯಕ ರೋಹಿತ್ ಶರ್ಮಾ ಲಭ್ಯತೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.

ದಿ ವೆಸ್ಟ್ ಆಸ್ಟ್ರೇಲಿಯಾದ ವರದಿಯ ಪ್ರಕಾರ, ವಾಕಾ ಮೈದಾನವು ಪ್ರಸ್ತುತ ಲಾಕ್​ಡೌನ್​​ ಆಗಿದೆ. ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡದಿರುವುದಲ್ಲದೆ, ಫೋನ್ ಬಳಕೆಗೂ ನಿರ್ಬಂಧ ಹಾಕಲಾಗಿದೆ. ಹಾಗೆಯೇ ಇಲ್ಲಿನ ಸಿಬ್ಬಂದಿಗೂ ನಿರ್ಬಂಧ ವಿಧಿಸಲಾಗಿದೆ. ಆಸ್ಟ್ರೇಲಿಯಾ ಎ ವಿರುದ್ಧದ ಎರಡು ಪಂದ್ಯಗಳ ಅನಧಿಕೃತ ರೆಡ್ ಬಾಲ್ ಸರಣಿಗಾಗಿ ಈಗಾಗಲೇ ಆಸ್ಟ್ರೇಲಿಯಾದಲ್ಲಿರುವ ಋತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಎ ತಂಡದ ವಿರುದ್ಧ ಭಾರತ ಅಭ್ಯಾಸ ಪಂದ್ಯವನ್ನು ಆಡಬೇಕಿತ್ತು. ಆದಾಗ್ಯೂ, ಕೊನೆಯ ಕ್ಷಣದ ಗಾಯಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯ ವೈಟ್​ವಾಶ್ ನಂತರ ಬಿಸಿಸಿಐ ಪಂದ್ಯವನ್ನು ರದ್ದುಗೊಳಿಸಿತು.

ಲಾಕ್​ಡೌನ್ ಮಾದರಿಯ ವಾತಾವರಣದಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಲಿದ್ದಾರೆ. ಆ ಮೂಲಕ ಆಸೀಸ್ ನೆಲದಲ್ಲಿ ಹ್ಯಾಟ್ರಿಕ್ ಸರಣಿ ಗೆಲ್ಲಲು ಸಜ್ಜಾಗಿದೆ. ಆದರೆ, ಟೀಮ್ ಇಂಡಿಯಾ ಕಳೆದ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಆಸೀಸ್ ಬಂದಾಗ ಇದೇ ರೀತಿ ಪ್ರಾಕ್ಟೀಸ್ ನಡೆಸಿತ್ತು. ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಅಭ್ಯಾಸ ಮಾಡುವಾಗ ಅಭಿಮಾನಿಗಳು ಕೂಗುತ್ತಾರೆ, ಆಟೋಗ್ರಾಫ್ ಮತ್ತು ಫೋಟೋಗೆ ಕಾಯುತ್ತಾರೆ. ಇದು ಅಭ್ಯಾಸ ಮಾಡಲು ಕಿರಿ ಕಿರಿ ಉಂಟು ಮಾಡುತ್ತದೆ. ಹೀಗಾಗಿ ಈ ಮಹತ್ವದ ಸರಣಿ ಗೆಲ್ಲುವ ಕಾರಣದಿಂದ ಟೀಮ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ಹಾಗಾದರೆ ಕಳೆದ ಬಾರಿ ಕಾಂಗರೂ ನಾಡಿನಲ್ಲಿ ಭಾರತ ಸರಣಿ ಗೆಲ್ಲಲು ಇದು ಒಂದು ಕಾರಣ ಎಂದರೂ ತಪ್ಪಾಗಲ್ಲ.

ಮೊದಲ ಪಂದ್ಯಕ್ಕೆ ಬುಮ್ರಾ ನಾಯಕ?

ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರು ಬಾರ್ಡರ್ ಗವಾಸ್ಕರ್ ಟ್ರೋಫಿ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ. ಹೀಗಾಗಿ ಜಸ್​ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ. ರೋಹಿತ್ ಅಲಭ್ಯತೆಯ ಬಗ್ಗೆ ಗೌತಮ್ ಗಂಭೀರ್ ಸ್ಪಷ್ಟಪಡಿಸದಿದ್ದರೂ, ಅವರು ಇಲ್ಲದಿದ್ದರೆ ಬುಮ್ರಾ ನಾಯಕನಾಗಲಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಆಸೀಸ್ ತಲುಪಿರುವ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಆದರೆ ರೋಹಿತ್​ ಇನ್ನೂ ಕಾಂಗರೂ ನಾಡಿಗೆ ಪ್ರಯಾಣ ಬೆಳೆಸಿಲ್ಲ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

Whats_app_banner