370 ರನ್​ಗಳ ಗುರಿ ಬೆನ್ನಟ್ಟಲಾಗದೆ 116 ರನ್​ಗಳಿಂದ ಶರಣಾದ ಐರ್ಲೆಂಡ್; 2ನೇ ಏಕದಿನ ಜೊತೆಗೆ ಸರಣಿ ಗೆದ್ದ ಭಾರತ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  370 ರನ್​ಗಳ ಗುರಿ ಬೆನ್ನಟ್ಟಲಾಗದೆ 116 ರನ್​ಗಳಿಂದ ಶರಣಾದ ಐರ್ಲೆಂಡ್; 2ನೇ ಏಕದಿನ ಜೊತೆಗೆ ಸರಣಿ ಗೆದ್ದ ಭಾರತ ತಂಡ

370 ರನ್​ಗಳ ಗುರಿ ಬೆನ್ನಟ್ಟಲಾಗದೆ 116 ರನ್​ಗಳಿಂದ ಶರಣಾದ ಐರ್ಲೆಂಡ್; 2ನೇ ಏಕದಿನ ಜೊತೆಗೆ ಸರಣಿ ಗೆದ್ದ ಭಾರತ ತಂಡ

INDW vs IREW 2nd ODI: ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 116 ರನ್​ಗಳಿಂದ ಗೆದ್ದ ಭಾರತ ತಂಡ ಸರಣಿಯನ್ನೂ ವಶಪಡಿಸಿಕೊಂಡಿತು.

370 ರನ್​ಗಳ ಗುರಿ ಬೆನ್ನಟ್ಟಲಾಗದೆ 116 ರನ್​ಗಳಿಂದ ಶರಣಾದ ಐರ್ಲೆಂಡ್; 2ನೇ ಏಕದಿನ ಜೊತೆಗೆ ಸರಣಿ ಗೆದ್ದ ಭಾರತ ತಂಡ
370 ರನ್​ಗಳ ಗುರಿ ಬೆನ್ನಟ್ಟಲಾಗದೆ 116 ರನ್​ಗಳಿಂದ ಶರಣಾದ ಐರ್ಲೆಂಡ್; 2ನೇ ಏಕದಿನ ಜೊತೆಗೆ ಸರಣಿ ಗೆದ್ದ ಭಾರತ ತಂಡ (PTI)

ಐರ್ಲೆಂಡ್ ಮಹಿಳಾ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸಿದ್ದ ಭಾರತ ಮಹಿಳಾ ತಂಡ, 2ನೇ ಏಕದಿನ ಪಂದ್ಯದಲ್ಲೂ ದಿಗ್ವಿಜಯ ಸಾಧಿಸಿದೆ. 370 ರನ್​ಗಳ ದಾಖಲೆಯ ಮೊತ್ತ ಕಲೆ ಹಾಕಿದ್ದ ಸ್ಮೃತಿ ಮಂಧಾನ ಪಡೆ, 116 ರನ್​ಗಳಿಂದ ಗೆಲ್ಲುವುದರ ಜತೆಗೆ 1 ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ. ಜೆಮಿಮಾ ರೋಡ್ರಿಗಸ್ ತಮ್ಮ ಚೊಚ್ಚಲ ಏಕದಿನ ಶತಕ ಹಾಗೂ ಸ್ಮೃತಿ, ಪ್ರತಿಕಾ ರಾವಲ್, ಹರ್ಲೀನ್ ಡಿಯೋಲ್ ಅವರ ಆಕರ್ಷಕ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಸ್ಮೃತಿ ಮಂಧಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ಅವರ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟಿಂಗ್ ನಡೆಸಿದ ಭಾರತ ವನಿತೆಯರು ದಾಖಲೆಯ ಮೊತ್ತ ಪೇರಿಸಿದರು. ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕಿ ಮಂಧಾನ ಮತ್ತು ಪ್ರತೀಕಾ ರಾವಲ್ ಮೊದಲ ವಿಕೆಟ್​​ಗೆ 156 ರನ್ ಪೇರಿಸಿದರು. ಇಬ್ಬರು ಸಹ ಭರ್ಜರಿ ಅರ್ಧಶತಕ ಸಿಡಿಸಿ ಶತಕದತ್ತ ದಾಪುದಾಲು ಇಡುತ್ತಿದ್ದ ವೇಳೆ ವಿಕೆಟ್ ಒಪ್ಪಿಸಿದರು.

ಜೆಮಿಮಾ ರೋಡ್ರಿಗಸ್ ಚೊಚ್ಚಲ ಶತಕ

ಮಂಧಾನ 54 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ 73 ರನ್ ಸಿಡಿಸಿ ಔಟಾದರು. ಮಂಧಾನ ವಿಕೆಟ್ ಒಪ್ಪಿಸಿದ ಮರು ಎಸೆತದಲ್ಲೇ 61 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 67 ರನ್ ಗಳಿಸಿದ್ದ ಪ್ರತೀಕಾ, ವಿಕೆಟ್ ಒಪ್ಪಿಸಿದರು. ಇದು ಅವರ ಸತತ ಎರಡನೇ ಅರ್ಧಶತಕ. ಬಳಿಕ ಜೊತೆಯಾದ ಹರ್ಲೀನ್ ಡಿಯೋಲ್ ಮತ್ತು ಜೆಮಿಮಾ ರೋಡ್ರಿಗಸ್ ಮತ್ತೆ ಐರ್ಲೆಂಡ್ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸಿದರು. 3ನೇ ವಿಕೆಟ್​ಗೆ 183 ರನ್​ಗಳು ಹರಿದು ಬಂದವು. ಆದರೆ ಹರ್ಲೀನ್ ಶತಕದ ಅಂಚಿನಲ್ಲಿ ಅಂದರೆ 84 ಎಸೆತಗಳಲ್ಲಿ 12 ಬೌಂಡರಿ ಸಹಿತ 89 ರನ್ ಸಿಡಿಸಿ ನಿರ್ಗಮಿಸಿದರು.

ಹರ್ಲೀನ್ ನಿರ್ಗಮಿಸಿದ ಬಳಿಕ ಜೆಮಿಮಾ ಅವರು ಏಕದಿನ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. 91 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 102 ರನ್ ಸಿಡಿಸಿ ಕೊನೆಯ ಓವರ್​​ನಲ್ಲಿ ಔಟಾದರು. ರಿಚಾ ಘೋಷ್ 10 ರನ್, ತೇಜಲ್ ಹಸಬ್ನಿಸ್ 2, ಸಯಾಲಿ ಸತ್ಘರೆ 2 ರನ್​ಗಳ ಕೊಡುಗೆ ನೀಡಿದರು. ಐರ್ಲೆಂಡ್ ಪರ ಓರ್ಲಾ ಪ್ರೆಂಡರ್‌ಗಾಸ್ಟ್, ಅರ್ಲೀನ್ ಕೆಲ್ಲಿ ತಲಾ 2 ವಿಕೆಟ್ ಪಡೆದರೆ, ಜಾರ್ಜಿನಾ ಡೆಂಪ್ಸೆ 1 ವಿಕೆಟ್ ಕಿತ್ತರು. ಅಂತಿಮವಾಗಿ ಭಾರತ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 370 ರನ್ ಪೇರಿಸಿತು. ಇದು ಭಾರತ ಮಹಿಳಾ ತಂಡದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಗರಿಷ್ಠ ಮೊತ್ತ.

116 ರನ್​ಗಳ ಅಂತರದಿಂದ ಐರ್ಲೆಂಡ್ ಶರಣು

ಬೃಹತ್ ಗುರಿ ಬೆನ್ನಟ್ಟಿದ ಐರ್ಲೆಂಡ್, ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ತಂಡದ ಸ್ಕೋರ್ 101 ಆಗುತ್ತಿದ್ದಂತೆ ಪ್ರಮುಖ ಮೂರು ವಿಕೆಟ್​ ಉದುರಿದವು. ಸಾರಾ ಫೋರ್ಬ್ಸ್ 38, ಗೇಬಿ ಲೆವಿಸ್ 12, ಓರ್ಲಾ ಪ್ರೆಂಡರ್‌ಗಾಸ್ಟ್ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೌಲ್ಟರ್ ರೀಲಿ ಮತ್ತು ಲಾರಾ ಡೆಲಾನಿ (37) ಅವರು 5ನೇ ವಿಕೆಟ್​ಗೆ 83 ರನ್​ಗಳ ಪಾಲುದಾರಿಕೆ ಒದಗಿಸಿದರೂ ತಂಡಕ್ಕೆ ನೆರವಾಗಲಿಲ್ಲ. ಕೌಲ್ಟರ್ 80 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು. ಲೇಹ್ ಪಾಲ್ 27, ಅರ್ಲೀನ್ ಕೆಲ್ಲಿ 19, ಅವಾ ಕ್ಯಾನಿಂಗ್ 11 ರನ್​ಗೆ ಔಟಾದರು. ಜಾರ್ಜಿನಾ ಡೆಂಪ್ಸೆ ಅಜೇಯ 6 ರನ್ ಗಳಿಸಿದರು. ಇನ್ನೂ 3 ವಿಕೆಟ್ ಕೈಯಲ್ಲಿದ್ದರೂ ನಿಗದಿತ 50 ಓವರ್​​ಗಳಲ್ಲಿ 254 ರನ್​ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ದೀಪ್ತಿ ಶರ್ಮಾ 3, ಪ್ರಿಯಾ ಮಿಶ್ರಾ 2, ಟಿಟಾಸ್ ಸಾಧು ಮತ್ತು ಸಯಾಲಿ ಸತ್ಘರೆ 1 ವಿಕೆಟ್ ಪಡೆದರು.

Whats_app_banner