ಜಸ್ಪ್ರೀತ್ ಬುಮ್ರಾ ಗಾಯದ ಬಗ್ಗೆ ಹೆಚ್ಚಿದ ಕಳವಳ; ಅಭ್ಯಾಸಕ್ಕೆ ಗೈರು, ನಾಯಕನ ದೂಷಿಸಿದ ಆಸೀಸ್ ಮಾಜಿ ಆಟಗಾರ
ಕನ್ನಡ ಸುದ್ದಿ  /  ಕ್ರಿಕೆಟ್  /  ಜಸ್ಪ್ರೀತ್ ಬುಮ್ರಾ ಗಾಯದ ಬಗ್ಗೆ ಹೆಚ್ಚಿದ ಕಳವಳ; ಅಭ್ಯಾಸಕ್ಕೆ ಗೈರು, ನಾಯಕನ ದೂಷಿಸಿದ ಆಸೀಸ್ ಮಾಜಿ ಆಟಗಾರ

ಜಸ್ಪ್ರೀತ್ ಬುಮ್ರಾ ಗಾಯದ ಬಗ್ಗೆ ಹೆಚ್ಚಿದ ಕಳವಳ; ಅಭ್ಯಾಸಕ್ಕೆ ಗೈರು, ನಾಯಕನ ದೂಷಿಸಿದ ಆಸೀಸ್ ಮಾಜಿ ಆಟಗಾರ

ಗಬ್ಬಾದಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ, ಭಾರತದ ಅಭ್ಯಾಸ ಅವಧಿಗೆ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಗೈರಾಗಿದ್ದಾರೆ. ಎರಡನೇ ಟೆಸ್ಟ್‌ ವೇಳೆ ತೊಡೆಯ ಗಾಯಕ್ಕೊಳಗಾಗಿದ್ದ ಬುಮ್ರಾ, ಇದೀಗ ಮೂರನೇ ಟೆಸ್ಟ್‌ ಆಡುವುದು ಅನುಮಾನ ಎಂಬಂತಾಗಿದೆ.

ಅಭ್ಯಾಸಕ್ಕೆ ಗೈರು; ಜಸ್ಪ್ರೀತ್ ಬುಮ್ರಾ ಗಾಯದ ಬಗ್ಗೆ ಹೆಚ್ಚಿದ ಕಳವಳ
ಅಭ್ಯಾಸಕ್ಕೆ ಗೈರು; ಜಸ್ಪ್ರೀತ್ ಬುಮ್ರಾ ಗಾಯದ ಬಗ್ಗೆ ಹೆಚ್ಚಿದ ಕಳವಳ (AFP)

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಸೋಲು ನಂತರ, ಭಾರತ ತಂಡ ಮಂಗಳವಾರ (ಡಿಸೆಂಬರ್‌ 10) ಮೊದಲ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿತು. ಮೂರನೇ ಟೆಸ್ಟ್ ಪಂದ್ಯ ಆಡಲು ಬ್ರಿಸ್ಬೇನ್‌ಗೆ ತೆರಳುವ ಮೊದಲು, ತಂಡವು ಅಡಿಲೇಡ್ ಓವಲ್‌ನಲ್ಲೇ ನೆಟ್ಸ್ ಅಭ್ಯಾಸ ನಡೆಸಿತು. ಆದರೆ ತರಬೇತಿ ವೇಳೆ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯು ಅಭಿಮಾನಿಗಳು ಹಾಗೂ ತಂಡದ ಕಳವಳಕ್ಕೆ ಕಾರಣವಾಗಿದೆ. ಹರ್ಷಿತ್ ರಾಣಾ ಸೇರಿದಂತೆ ಭಾರತದ ಇತರ ವೇಗದ ಬೌಲರ್‌ಗಳು ಹಾಜರಿದ್ದರು. ಆದರೆ ಇಬ್ಬರು ಅನುಭವಿಗಳು ಮಾತ್ರ ಕಾಣಲಿಲ್ಲ.

ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿಗೆ ಪೂರ್ಣ ಪ್ರಮಾಣದಲ್ಲಿ ನೆಟ್ಸ್‌ನಲ್ಲಿ ಬ್ಯಾಟ್‌ ಬೀಸಿದರು. ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ಸಿರಾಜ್ ಮತ್ತು ಬುಮ್ರಾ ಇಬ್ಬರೂ ಗಬ್ಬಾ ಟೆಸ್ಟ್‌ಗೂ ಮುನ್ನ ಅಭ್ಯಾಸ ಅವಧಿಗೆ ಹಾಜರಾಗಿಲ್ಲ. ಇಬ್ಬರು ವೇಗದ ಬೌಲರ್‌ಗಳ ಕೆಲಸದ ಹೊರೆಯನ್ನು ನಿರ್ವಹಿಸಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎಂದು ಹೇಳಿದರೂ, ಬುಮ್ರಾ ಭಾರತದ ಶಕ್ತಿ ಮತ್ತು ಕಂಡೀಷನಿಂಗ್ ತರಬೇತುದಾರರೊಂದಿಗೆ ಸಮಯ ಕಳೆಯುವ ದೃಶ್ಯವು ಅಭಿಮಾನಿಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನ 20ನೇ ಓವರ್‌ ವೇಳೆ, ಬುಮ್ರಾ ಅವರ ತೊಡೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಅಗತ್ಯ ವೈದ್ಯಕೀಯ ನೆರವಿನ ಬಳಿಕ ಮತ್ತೆ ಬೌಲಿಂಗ್‌ ಮುಂದುವರೆಸಿದರು. ಹೀಗಾಗಿ ಗಾಯದ ಭೀತಿ ಸೃಷ್ಟಿಯಾಗಿರಲಿಲ್ಲ. ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಕೂಡ, ಬುಮ್ರಾ ಸ್ವಲ್ಪ ಸೆಳೆತ ಅನುಭವಿಸಿದ್ದಾರೆ ಅಷ್ಟೇ ಎಂದಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಬೌಲಿಂಗ್ ವೇಗ ತೀವ್ರವಾಗಿ ಕುಸಿದ ಕಾರಣದಿಂದ, ಮೂರನೇ ಟೆಸ್ಟ್‌ನಲ್ಲಿ ಅವರ ಭಾಗವಹಿಸುವ ಬಗ್ಗೆಕಳವಳ ಹೆಚ್ಚಿದೆ.

ರೋಹಿತ್‌ ಶರ್ಮಾ ವಿರುದ್ಧ ಡೇಮಿಯನ್ ಫ್ಲೆಮಿಂಗ್ ಆಕ್ರೋಶ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇಮಿಯನ್ ಫ್ಲೆಮಿಂಗ್, ಸೆನ್ ರೇಡಿಯೋದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಬುಮ್ರಾ ಮಂಗಳವಾರ ತರಬೇತಿ ಅವಧಿಯನ್ನು ತಪ್ಪಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಮಾತನಾಡಿ, ಇದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದರು. ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಕೇವಲ 19 ರನ್‌ಗಳ ಗುರಿ ಇದ್ದಾಗಲೂ ಬುಮ್ರಾ ಕೈಯಲ್ಲಿ ಬೌಲಿಂಗ್ ಮಾಡಿಸಿದ್ದಕ್ಕೆ ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ದೂಷಿಸಿದರು.

"ಕೆಲವು ಗಂಭೀರ ಅನುಮಾನಗಳು ಇವೆ. ಬುಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ ಆ ಓವರ್ ಎಸೆದಿದ್ದಕ್ಕೆ ನನಗೆ ಆಶ್ಚರ್ಯವಾಗಿದೆ. ಅದು ಎಲ್ಲರಿಗೂ ಕೆಲವು ರಹಸ್ಯಗಳನ್ನು ಬಿಟ್ಟುಕೊಟ್ಟಿದೆ,” ಎಂದು ಅವರು ಹೇಳಿದರು.

ಗಬ್ಬಾ ಟೆಸ್ಟ್‌ನಿಂದ ಬುಮ್ರಾ ಹೊರಗುಳಿದರೆ, ಭಾರತವು ಆಕಾಶ್ ದೀಪ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಬಹುದು.

Whats_app_banner