ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡಕ್ಕೆ ಆಘಾತ; ರಿಷಭ್ ಪಂತ್ಗೆ ಗಾಯ, ಸಂಜು ಸ್ಯಾಮ್ಸನ್ಗೆ ಬುಲಾವ್?
Rishabh Pant: ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಗೂ ನಡೆದ ಭಾರತದ ಮೊದಲ ನೆಟ್ ಸೆಷನ್ನಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ ಶಾಟ್ನಲ್ಲಿ ಚೆಂಡು ರಿಷಭ್ ಪಂತ್ ಮೊಣಕಾಲಿಗೆ ತಗುಲಿ ಗಾಯಗೊಂಡಿದ್ದಾರೆ.
ದುಬೈ, ಫೆ 17: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) ಟೀಮ್ ಇಂಡಿಯಾ (Team India) ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ. ವಿರಾಟ್ ಕೊಹ್ಲಿ (Virat Kohli), ನಾಯಕ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಕೆಎಲ್ ರಾಹುಲ್ ಸೇರಿದಂತೆ ತಂಡದ ಹದಿನೈದೂ ಆಟಗಾರರು ನೆಟ್ಸ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಭರ್ಜರಿ ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈಯುತ್ತಿದ್ದಾರೆ. ಹಾಗೆಯೇ ಅಲ್ಲಿನ ವಾತಾವರಣಕ್ಕೂ ಹೊಂದಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಭಾರತ ತಂಡಕ್ಕೆ ಬರ ಸಿಡಿಲಿನಂತೆ ಆಘಾತವೊಂದು ಎದುರಾಗಿದೆ. ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಟೂರ್ನಿಯಿಂದಲೇ ಹೊರಬೀಳುವ ಆತಂಕ ಎದುರಾಗಿದೆ.
ನೆಟ್ಸ್ನಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಬಾರಿಸಿದ ಚೆಂಡು ಪಂತ್ ಅವರ ಮೊಣಕಾಲಿಗೆ (Knee) ತಗುಲಿತ್ತು. ಅದು ಕೂಡ 2022ರಲ್ಲಿ ರಿಷಭ್ ಪಂತ್ ಅಪಘಾತದಲ್ಲಿ ಗಾಯಗೊಂಡಿದ್ದ ಕಾಲಿಗೆ ಮತ್ತೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ. ಇದರಿಂದ ಪಂತ್ ಇದ್ದಲ್ಲೇ ಕುಸಿದು ಬಿದ್ದರು. ಆತಂಕಗೊಂಡ ಹಾರ್ದಿಕ್ ತಕ್ಷಣವೇ ಫಿಸಿಯೋ ಕಮಲೇಶ್ ಜೈನ್ ಅವರನ್ನು ಕರೆದು ಚಿಕಿತ್ಸೆ ಕೊಡಿಸಿದರು. ಬಳಿಕ ನೆಟ್ಸ್ನಿಂದ ಹೊರಹೋದ ಪಂತ್, ಮತ್ತೆ ಅಭ್ಯಾಸಕ್ಕೆ ಬರಲೇ ಇಲ್ಲ. ಈ ಘಟನೆಯು ಚಾಂಪಿಯನ್ಸ್ ಟ್ರೋಫಿಯಲ್ಲಿ ಪಂತ್ ಭಾಗವಹಿಸುವ ಬಗ್ಗೆ ಕಳವಳ ಹುಟ್ಟು ಹಾಕಿತ್ತು.
ಸಂಜು ಸ್ಯಾಮ್ಸನ್ಗೆ ಬುಲಾವ್?
ಆದರೀಗ ಬಂದಿರುವ ವರದಿಗಳು, ಅದು ಗಂಭೀರ ಗಾಯವಲ್ಲ ಎನ್ನುತ್ತಿವೆ. ಗಾಯಗೊಂಡ ಕೆಲವು ಗಂಟೆಗಳ ನಂತರ ವಿಕೆಟ್ ಕೀಪರ್ ಬ್ಯಾಟರ್ ಮತ್ತೆ ಹೆಲ್ಮೆಟ್ ಧರಿಸಿ ಅಖಾಡಕ್ಕೆ ಧುಮುಕಿದರು ಎಂದು ವರದಿಯಾಗಿದೆ. ಬಿಸಿಸಿಐ ಅಪ್ಲೋಡ್ ಮಾಡಿದ 'ಹೈಲೈಟ್ಸ್' ವಿಡಿಯೋದಲ್ಲಿ ಹೆಲ್ಮೆಟ್ ಧರಿಸಿರುವುದು ಕಂಡುಬಂತು. ಇದು ಅವರ ಫಿಟ್ನೆಸ್ ಅನ್ನು ಮತ್ತಷ್ಟು ದೃಢಪಡಿಸಿದೆ. ಅವರು ಗಾಯಗೊಂಡ ವರದಿಗಳ ಬೆನ್ನಲ್ಲೇ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ಗೆ ಬುಲಾವ್ ನೀಡಲಾಗಿದೆ ಎಂದು ತಿಳಿಸಿದ್ದವು. ಆದರೀಗ ಅದೆಲ್ಲವೂ ಸುಳ್ಳು ಎಂದು ವರದಿಯಾಗಿದೆ. ರಿಷಭ್ ಪಂತ್ ತಂಡದಲ್ಲಿ ಮುಂದುವರೆಯಲಿದ್ದಾರೆ.
ಮೊದಲ ಪಂದ್ಯ ಆಡೋದು ಯಾರು?
ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಪಂತ್ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಕಳೆದ ತಿಂಗಳು ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದರು. ಆದರೆ ನಾಯಕ ರೋಹಿತ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಕೆಎಲ್ ರಾಹುಲ್ ಅವರನ್ನು ಬೆಂಬಲಿಸಿದ್ದರು. 2023ರ ವಿಶ್ವಕಪ್ ಫೈನಲ್ಗೂ ಭಾರತದ ಪರ ಅಬ್ಬರಿಸಿದ್ದ ರಾಹುಲ್, ಇತ್ತೀಚೆಗೆ ಮುಕ್ತಾಯವಾದ ತವರಿನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು.
ಆದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಕಣಕ್ಕಿಳಿಯುತ್ತಾರಾ ಎನ್ನುವುದು ಇನ್ನೂ ಗೊಂದಲದಲ್ಲಿದೆ. ಕಳೆದ ಸರಣಿಯಲ್ಲಿ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆ ಪ್ಲೇಯಿಂಗ್ 11ನಿಂದ ಹೊರಗಿಡುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಅಂಕಿ-ಅಂಶಗಳ ಪ್ರಕಾರ ಐದನೇ ಕ್ರಮಾಂಕದಲ್ಲಿ ರಾಹುಲ್ರನ್ನೇ ಆಡಿಸಬೇಕು ಎನ್ನುವ ಚರ್ಚೆಯೂ ನಡೆದಿದೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಗೊಂದಲದಲ್ಲಿದೆ. ಆದರೆ ಇಂಗ್ಲೆಂಡ್ ಸರಣಿಯ ನಂತರ ಕೆಎಲ್ ನಮ್ಮ ನಂ.1 ವಿಕೆಟ್ ಕೀಪರ್ ಎಂದು ಗಂಭೀರ್ ಹೇಳಿದ್ದರು. ಹಾಗಾಗಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡೋಣ.
