ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿಗೆ ಇಂದೆಥಾ ಅವಮಾನ; ಕೋಡಂಗಿ ಕೊಹ್ಲಿ, ಕ್ರೈಬೇಬಿ ಎಂದು ಅಣಕಿಸಿದ ಮಾಧ್ಯಮ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸ್ಯಾಮ್ ಕಾನ್ಸ್ಟಾಸ್ ವಿರುದ್ಧದ ನಡೆಗೆ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಮಾಧ್ಯಮಗಳು ಅವಮಾನಿಸಿವೆ. ಸುದ್ದಿಯಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರನನ್ನು ‘ಕ್ರೈಬೇಬಿ’, ‘ಕೋಡಂಗಿ’ ಎಂಬ ಪದ ಬಳಸಿ, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಲು ಕಳೆದ ತಿಂಗಳು ವಿರಾಟ್ ಕೊಹ್ಲಿ ಪರ್ತ್‌ಗೆ ಬಂದಿಳಿದಾಗ, ಆಸೀಸ್ ಮಾಧ್ಯಮಗಳು ಕಿಂಗ್ ಕೊಹ್ಲಿ ಗುಣಗಾನ ಮಾಡಿದ್ದವು. ಕೊಹ್ಲಿಗೆ ಇದು ಕೊನೆಯ ಆಸೀಸ್ ಪ್ರವಾಸವೂ ಆಗಿರಬಹುದು. ಹೀಗಾಗಿ ಕ್ರಿಕೆಟ್ ಕಿಂಗ್ ಮರಳುವಿಕೆಯನ್ನು ಆಸ್ಟ್ರೇಲಿಯಾ ಮಾಧ್ಯಮಗಳು ಶ್ಲಾಘಿಸಿದವು. ಅದರಲ್ಲೂ ಭಾರತೀಯರ ಗಮನ ಸೆಳೆಯಲು, ಒಂದು ಪತ್ರಿಕೆಯಂತೂ ಹಿಂದಿಯಲ್ಲಿ ಹೆಡ್‌ಲೈನ್ ಹಾಕಿತ್ತು. ಇದಾದ ಒಂದು ತಿಂಗಳ ನಂತರ, ಅದೇ ಮಾಧ್ಯಮವು ವಿರಾಟ್ ಕೊಹ್ಲಿಯನ್ನು ಕೋಡಂಗಿ, ಕ್ರೈ ಬೇಬಿ ಎಂದು ಟೀಕಿಸಿದೆ. ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಸ್ಯಾಮ್ ಕಾನ್ಸ್ಟಾಸ್ ಮತ್ತು ಕೊಹ್ಲಿ ನಡುವಣ ಘಟನೆಯನ್ನು ಇಟ್ಟುಕೊಂಡು ಕೊಹ್ಲಿಗೆ “ಕೋಡಂಗಿ” (clown Kohli) ಎಂಬ ಹಣೆಪಟ್ಟಿ ಕಟ್ಟಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಕಾನ್ಸ್ಟಾಸ್ ಮತ್ತು ಕೊಹ್ಲಿ ನಡುವೆ ಪಿಚ್ ಬಳಿ ಮಾತಿನ ಸಮರ ನಡೆಯಿತು. 10ನೇ ಓವರ್‌ನ ಕೊನೆಯಲ್ಲಿ ಕ್ರೀಸ್‌ನ ಇನ್ನೊಂದು ಬದಿಗೆ ಕಾನ್ಸ್ಟಾಸ್ ನಡೆಯುತ್ತಿದ್ದಾಗ, ಕೊಹ್ಲಿ ಕ್ರೀಸ್‌ನ ಹೊರಗಿನಿಂದ ನಡೆದು ನೇರವಾಗಿ ಯುವ ಆಟಗಾರನಿಗೆ ಡಿಕ್ಕಿಯಾದರು. ಆಗ ಅಂಪೈರ್ ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸಿದರು. ಮೇಲ್ನೋಟಕ್ಕೆ ಅದು ಕೊಹ್ಲಿಯದ್ದೇ ತಪ್ಪು ಎಂಬುದು ಕಾಣುತ್ತದೆ.
ಈ ಘಟನೆಯ ನಂತರ, ಆಸ್ಟ್ರೇಲಿಯಾದ ಪತ್ರಿಕೆ 'ದಿ ವೆಸ್ಟ್ ಆಸ್ಟ್ರೇಲಿಯನ್' ಭಾರತದ ಮಾಜಿ ನಾಯಕನನ್ನು ಕಟುವಾಗಿ ಟೀಕಿಸಿ ಅವಮಾನಿಸಿದೆ. ಕೊಹ್ಲಿಯ ಸುದ್ದಿಗೆ 'ಕೋಡಂಗಿ ಕೊಹ್ಲಿ' ಎಂಬ ಶೀರ್ಷಿಕೆಯನ್ನು ಬಳಸಲಾಗಿದೆ. ಇದು ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಾನ್ಸ್ಟಾಸ್ ಜತೆಗಿನ ಕೊಹ್ಲಿ ನಡೆಗೆ ತಜ್ಞರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ವಿವರಿಸುವ ಲೇಖನದಲ್ಲಿ ಹೀಗೆ ಬರೆಯಲಾಗಿದೆ. “ಹದಿಹರೆಯದ ಯುವಕನ ಕನಸಿನ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲಿ ಡಿಕ್ಕಿ ಹೊಡೆದ ಭಾರತೀಯ ಕ್ರೈಬೇಬಿ (sook) ನಡೆಗೆ ವ್ಯಾಪಕ ವಿರೋಧ,” ಎಂದು ಬರೆಯಲಾಗಿದೆ. ಪತ್ರಿಕೆಯು ಕೊಹ್ಲಿಗೆ ಇಂಗ್ಲೀಷ್‌ನ sook ಎಂಬ ಪದ ಬಳಸಿದೆ. 'ಸೂಕ್' ಎಂಬ ಪದಕ್ಕೆ ಹೇಡಿ ಮತ್ತು ಅಳುಮೂತಿ ಎಂಬ ಅರ್ಥವಿದೆ.
ವಿರಾಟ್ ಕೊಹ್ಲಿಗೆ ಐಸಿಸಿ ದಂಡ
ಕಾನ್ಸ್ಟಾಸ್ ವಿರುದ್ಧದ ನಡೆಯ ಬಳಿಕ, ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ದಂಡ ವಿಧಿಸಿದೆ. ಕೊಹ್ಲಿಯನ್ನು ಅಮಾನತುಗೊಳಿಸಬೇಕು ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗರು ಆಗ್ರಹಿಸಿದ್ದರು. ಆದರೆ, ಕೊಹ್ಲಿಗೆ ಪಂದ್ಯದ ಶುಲ್ಕದ ಶೇಕಡಾ 20ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ಡಿಮೆರಿಟ್ ಪಾಯಿಂಟ್ ಕೂಡಾ ನೀಡಲಾಗಿದೆ.
ಆನ್ ಫೀಲ್ಡ್ ಅಂಪೈರ್ ಗಳಾದ ಜೋಯಲ್ ವಿಲ್ಸನ್ ಮತ್ತು ಮೈಕೆಲ್ ಗೌಫ್, ಥರ್ಡ್ ಅಂಪೈರ್ ಶರ್ಫುದ್ದೀನ್ ಇಬ್ನೆ ಶಾಹಿದ್ ಮತ್ತು ನಾಲ್ಕನೇ ಅಂಪೈರ್ ಶಾನ್ ಕ್ರೇಗ್ ಅವರು, ಕೊಹ್ಲಿಯು ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.