ಕೆಕೆಆರ್ ಸಿಡಿಗುಂಡುಗಳ ಅಜೇಯ ಓಟಕ್ಕೆ ಬ್ರೇಕ್; ತವರಿನಲ್ಲಿ ಸತತ ಮೂರನೇ ಗೆಲುವು ಸಾಧಿಸಿದ ಸಿಎಸ್‌ಕೆ
CSK vs KKR: ಐಪಿಎಲ್ 2024ರ ಆವೃತ್ತಿಯ 22ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಕೊನೆಯ ಎರಡು ಪಂದ್ಯಗಳಲ್ಲಿ ಸೋತಿದ್ದ ಸಿಎಸ್‌ಕೆ, ಮತ್ತೆ ತನ್ನ ತವರು ಮೈದಾನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗೆಲುವಿನ ಹಳಿಗೆ ಮರಳಿದೆ. ಇದರೊಂದಿಗೆ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಂಡಿದೆ.
ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ಮಾರಕ ದಾಳಿ ಹಾಗೂ ಬ್ಯಾಟಿಂಗ್‌ನಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಗೆಲುವಿನ ಹಳಿಗೆ ಮರಳಿದೆ. ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಸಿಎಸ್‌ಕೆ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಆ ಮೂಲಕ, ಐಪಿಎಲ್ 2024ರಲ್ಲಿ ತವರು ನೆಲದಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿಯೂ ಗೆದ್ದು ಬೀಗಿದೆ. ಅತ್ತ ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿದ್ದ ಕೆಕೆಆರ್ ತಂಡವು, ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಸೋಲು ಕಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಕೇವಲ 137 ರನ್ ಗಳಿಸಿತು. ಇದಕ್ಕುತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್, ರುತುರಾಜ್ ಗಾಯಕ್ವಾಡ್ ಅಜೇಯ ಅರ್ಧಶತಕದ ನೆರವಿನಿಂದ ಕೇವಲ 17.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತು. ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ, ಹಳದಿ ಆರ್ಮಿಗೆ ಇದು ಮೂರನೇ ಗೆಲುವು.
ಕೋಲ್ಕತ್ತಾ ನೀಡಿದ ಸಾಧಾರಣ ಗುರಿಯನ್ನು ಸುಲಭವಾಗಿ ಬೆನ್ನಟ್ಟಲು ಅಖಾಡಕ್ಕಿಳಿದ ಸಿಎಸ್‌ಕೆ, ರಚಿನ್ ರವೀಂದ್ರ (15) ವಿಕೆಟ್ ಅನ್ನು ಅಗ್ಗಕ್ಕೆ ಕಳೆದುಕೊಂಡಿತು. ಈ ವೇಳೆ ಒಂದಾದ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಡೇರಿಲ್ ಮಿಚೆಲ್ ಆಕರ್ಷಕ ಅರ್ಧಶತಕದ ಜೊತೆಯಾಟವಾಡಿದರು. 25 ರನ್ ಗಳಿಸಿದ್ದಾಗ ಮಿಚೆಲ್ ಕ್ಲೀನ್ ಬೋಲ್ಡ್ ಆದರು. ಆದರೆ, ದುಡುಕಿನ ಹೊಡೆತಕ್ಕೆ ಕೈ ಹಾಕದೆ ಜವಾಬ್ದಾರಿಯಿಂದ ಆಡಿದ ನಾಯಕ ಋತುರಾಜ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇದು ಪಂದ್ಯದಲ್ಲಿ ದಾಖಲಾದ ಏಕೈಕ ಫಿಫ್ಟಿ.
ಇದನ್ನೂ ಓದಿ | ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿ ಅತ್ಯಂತ ಯಶಸ್ವಿ ನಾಯಕ; ಆ ಹಂತ ತಲುಪಲು ಯಾರಿಂದಲೂ ಸಾಧ್ಯವಿಲ್ಲ ಎಂದ ಗೌತಮ್ ಗಂಭೀರ್
ಕೊನೆಗೆ ಅಜೇಯ 67 ರನ್ ಗಳಿಸಿದ ರುತು ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ದುಬೆ, 3 ಸಿಕ್ಸರ್ ಸಹಿತ 28 ರನ್ ಗಳಿಸಿದ್ದಾಗ ಗೆಲುವಿನ ಅಂಚಿನಲ್ಲಿ ಎಡವಿದರು. ಅಂತಿಮವಾಗಿ ಎಂಎಸ್ ಧೋನಿ ಮೈದಾನಕ್ಕೆ ಇಳಿದರು. ತವರಿನಲ್ಲಿ ಈ ಬಾರಿ ಮಾಹಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದರು.
ಕೆಕೆಆರ್ ಸಿಡಿಗುಂಡಗಳ ಸದ್ದಡಗಿಸಿದ ಸಿಎಸ್‌ಕೆ ಬೌಲರ್‌ಗಳು
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪಂದ್ಯದ ಮೊದಲ ಎಸೆತದಲ್ಲಿ ಫಿಲ್ ಸಾಲ್ಟ್ ಜಡೇಜಾಗೆ ಕ್ಯಾಚ್ ನೀಡಿ ಗೋಲ್ಡನ್ ಡಕ್ ಆದರು. ಈ ವೇಳೆ ಸುನೈಲ್ ನರೈನ್ ಜೊತೆ ಸೇರಿಕೊಂಡ ಅಂಗ್ಕ್ರಿಶ್ ರಘುವಂಷಿ ಅರ್ಧಶತಕದ ಜೊತೆಯಾಟವಾಡಿದರು. 24 ರನ್ ಗಳಿಸಿದ್ದ ರಘುವಂಶಿ, ಜಡೇಜಾ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಅವರ ಬೆನ್ನಲ್ಲೇ ನರೈನ್ ಕೂಡಾ 2 ಸಿಕ್ಸರ್ ಸಹಿತ 27 ರನ್ ಗಳಿಸಿ ಔಟಾದರೆ, ವೆಂಕಟೇಶ್ ಅಯ್ಯರ್ ಆಟ 3 ರನ್‌ಗೆ ಅಂತ್ಯವಾಯ್ತು. ಸತತ ಮೂರು ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ತಂಡಕ್ಕೆ ಭಾರಿ ಮುನ್ನಡೆ ತಂದುಕೊಟ್ಟರು.
ರಮಣ್‌ದೀಪ್ ಸಿಂಗ್ 13, ರಿಂಕು ಸಿಂಗ್ 9 ಮತ್ತು ಡೇಂಜರಸ್ ಬ್ಯಾಟರ್ ರಸೆಲ್ ಕೇವಲ 10 ರನ್ ಗಳಿಸಿ ನಿರ್ಗಮಿಸಿದರು. ತೀಕ್ಷಣ ಮತ್ತು ತುಷಾರ್ ದೇಶಪಾಂಡೆ ತಂಡವನ್ನು ಸುಸ್ಥಿತಿಗೆ ತಂದರು. ನಿಧಾನ ಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದ ನಾಯಕ ಶ್ರೇಯಸ್ ಅಯ್ಯರ್, 34 ರನ್ ಗಳಿಸಿ ಮುಸ್ತಫಿಜುರ್ ಎಸೆತದಲ್ಲಿ ಔಟಾದರು. ಸ್ಫೋಟಕ ಆಟಕ್ಕೆ ಹೆಸರಾದ ತಂಡದ ಯಾರಿಂದಲೂ, ಅಬ್ಬರಿಸಲೂ ಸಾಧ್ಯವಾಗಲಿಲ್ಲ. ಸಿಎಸ್‌ಕೆ ಬೌಲರ್‌ಗಳು ಕೆಕೆಆರ್ ಸಿಡಿಗುಂಡುಗಳ ಸದ್ದಡಗಿಸಿದರು.
ಸಿಎಸ್‌ಕೆ ಪರ ಜಡೇಜಾ ಹಾಗೂ ತುಷಾರ್ ತಲಾ 3 ವಿಕೆಟ್ ಪಡೆದು ಮಿಂಚಿದರು.