IPL 2024: ಸಿಎಸ್‌ಕೆ vs ಎಲ್ಎಸ್‌ಜಿ ಎರಡನೇ ಮುಖಾಮುಖಿ; ಸಂಭಾವ್ಯ ತಂಡ, ಚೆಪಾಕ್ ಪಿಚ್ ಹಾಗೂ ಹವಾಮಾನ ವರದಿ
CSK vs LSG: ಐಪಿಎಲ್ 2024ರಲ್ಲಿ ಏಪ್ರಿಲ್ 23ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿದೆ.

ಐಪಿಎಲ್ 2024ರಲ್ಲಿ ತವರು ಮೈದಾನ ಚೆಪಾಕ್‌ನಲ್ಲಿ ಆಡಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್, ಟೂರ್ನಿಯಲ್ಲಿ ಐದನೇ ಗೆಲುವಿಗೆ ಎದುರು ನೋಡುತ್ತಿದೆ. ತವರಿನ ಹೊರಗೆ ಆಡಿದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮತ್ತೊಮ್ಮೆ ಎದುರಿಸುತ್ತಿರುವ ಸಿಎಸ್‌ಕೆ, ತನ್ನದೇ ನೆಲದಲ್ಲಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಈವರೆಗೆ ತವರಿನ ಹೊರಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿರುವ ಚೆನ್ನೈಗೆ, ತವರು ಮೈದಾನವೊಂದೇ ಅದೃಷ್ಟದ ವೇದಿಕೆಯಾಗಿದೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ, ಈಗ ಅದೇ ತಂಡದ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳುವುದು ರುತುರಾಜ್ ಗಾಯಕ್ವಾಡ್ ಪಡೆಯ ತಂತ್ರ.
ಚೆಪಾಕ್ ಮೈದಾನದ ಪಿಚ್ ನಿಧಾನಗತಿಯ ಸ್ವರೂಪದ್ದಾಗಿದ್ದು, ಲಕ್ನೋ ತಂಡದ ತವರು ಮೈದಾನವಾದ ಏಕಾನ ಕ್ರೀಡಾಂಗಣದಂತೆಯೇ ಇಲ್ಲಿನನ ಪಿಚ್ ಕೂಡಾ ವರ್ತಿಸುವ ನಿರೀಕ್ಷೆ ಇದೆ. ಸ್ಲೋ ಪಿಚ್ ಲಕ್ನೋಗೆ ಹೊಸದೇನಲ್ಲ. ಹೀಗಾಗಿ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ನಡೆಯುವ ಸಾಧ್ಯತೆ ಇದೆ.
ಉಭಯ ತಂಡಗಳ ನಡುವೆ ಲಕ್ನೋದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಸಿಎಸ್‌ಕೆ, 6 ವಿಕೆಟ್‌ಗೆ 176 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಚೇಸಿಂಗ್‌ಗಿಳಿದ ಲಕ್ನೋ, ಕೆಎಲ್ ರಾಹುಲ್ 82 ರನ್‌ಗಳ ನೆರವಿಂದ ಎಂಟು ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
ಚೆನ್ನೈ ಪಿಚ್ ವರದಿ
ನಿಧಾನಗತಿಯ ಸಮತೋಲಿತ ಪಿಚ್‌ಗೆ ಹೆಸರಾಗಿರುವ ಚೆಪಾಕ್ ಮೈದಾನದಲ್ಲಿ, ಪ್ರಸಕ್ತ ಆವೃತ್ತಿಯಲ್ಲಿ ಮೂರು ಪಂದ್ಯಗಳು ನಡೆದಿವೆ. ಈ ಮೂರೂ ಪಂದ್ಯಗಳಲ್ಲಿ ಭಿನ್ನ ಸ್ಕೋರ್ ಹಾಗೂ ಫಲಿತಾಂಶ ಬಂದಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಪೈಕಿ ಆರ್‌ಸಿಬಿ 173 ರನ್ ಗಳಿಸಿ ಸೋತರೆ, ಆ ಬಳಿಕ ಸಿಎಸ್‌ಕೆ 206 ರನ್ ಗಳಿಸಿ ಗೆದ್ದಿದೆ. ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 137 ರನ್ ಕಲೆ ಹಾಕಿ ಸೋತಿದೆ. ಹೀಗಾಗಿ ಇಲ್ಲಿನ ಪಿಚ್ ಆಯಾ ದಿನದ ಪಂದ್ಯಕ್ಕನುಗುಣವಾಗಿ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ | RCB vs KKR: ಅಂಪೈರ್ ವಿರುದ್ಧ ಕೆಂಡಕಾರಿದ ವಿರಾಟ್ ಕೊಹ್ಲಿಗೆ ಭಾರಿ ದಂಡ ವಿಧಿಸಿದ ಬಿಸಿಸಿಐ
ಚೆನ್ನೈ ಹವಾಮಾನ ವರದಿ
ಚೆನ್ನೈನಲ್ಲಿ ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ವೇಳೆ ತಾಪಮಾನವು 28 ಡಿಗ್ರಿ ಇರುವ ಮುನ್ಸೂಚನೆ ಇದೆ. ಶುಭ್ರ ಆಕಾಶದೊಂದಿಗೆ ಮಳೆಯ ಸಾಧ್ಯತೆ ಇಲ್ಲ.
ಗಾಯದ ಅಪ್ಡೇಟ್
ಸಿಎಸ್‌ಕೆ ತಂಡದ ಕೊನೆಯ ಎರಡು ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಜಿಂಕ್ಯ ರಹಾನೆ, ಸದ್ಯ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಅವರು ತಮ್ಮ ಹಳೆಯ ಕ್ರಮಾಂಕಕ್ಕೆ ಮರಳುವ ನಿರೀಕ್ಷೆ ಇದೆ. ಪಂದ್ಯದಲ್ಲಿ ಚೆನ್ನೈ ಮೊದಲು ಬೌಲ್ ಮಾಡಿದರೆ ಶಿವಂ ದುಬೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಚೇಸಿಂಗ್ ವೇಳೆ ಆಡುವುದು ಬಹುತೇಕ ಖಚಿತ. ಇಲ್ಲವಾದಲ್ಲಿ ಮತೀಶ ಪತಿರಾಣ ಇಂಪ್ಯಾಕ್ಟ್ ಆಟಗಾರನಾಗಲಿದ್ದಾರೆ.
ಅತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭರವಸೆಯ ವೇಗಿ ಮಯಾಂಕ್ ಯಾದವ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಹೀಗಾಗಿ ಚೆನ್ನೈ ವಿರುದ್ಧ ಆಡುವುದು ಅನುಮಾನ. ಕನ್ನಡಿಗ ದೇವದತ್ ಪಡಿಕ್ಕಲ್ ಆಡುವ ಬಳಗಕ್ಕೆ ಮರಳುವ ಸಾಧ್ಯತೆ ಇದೆ. ಪಡಿಕ್ಕಲ್ ಮತ್ತು ಮೊಹ್ಸಿನ್ ಖಾನ್ ತಂಡದ ಇಂಪ್ಯಾಕ್ಟ್ ಆಟಗಾರರಾಗಿ ಆಡುವ ನಿರೀಕ್ಷೆ ಇದೆ.
ಸಿಎಸ್‌ಕೆ ಸಂಭಾವ್ಯ ತಂಡ
ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹಾರ್, ತುಷಾರ್ ದೇಶ್, ಮುಸ್ತಫಿಜುರ್ ರೆಹಮಾನ್, ಮಥೀಶ ಪತಿರಾಣ (ಇಂಪ್ಯಾಕ್ಟ್ ಪ್ಲೇಯರ್).
ಲಕ್ನೋ ಸಂಭಾವ್ಯ ಆಡುವ ಬಳಗ
ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್ (ಇಂಪ್ಯಾಕ್ಟ್ ಪ್ಲೇಯರ್).
ಇದನ್ನೂ ಓದಿ | ಐಪಿಎಲ್ನಲ್ಲಿ ಯುಜ್ವೇಂದ್ರ ಚಹಾಲ್ ವಿಕೆಟ್‌ಗಳ ದ್ವಿಶತಕ; ವಿಶೇಷ ಮೈಲಿಗಲ್ಲು ತಲುಪಿದ ಮೊದಲ ಹಾಗೂ ಏಕೈಕ ಬೌಲರ್
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
