ಡೆಲ್ಲಿ vs ಕೆಕೆಆರ್ ಐಪಿಎಲ್ ಪಂದ್ಯ: ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇದೆಯಾ, ವಿಶಾಖಪಟ್ಟಣ ಪಿಚ್ ಹೇಗಿದೆ?
ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ Vs ಕೆಕೆಆರ್ ಐಪಿಎಲ್ ಪಂದ್ಯ: ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇದೆಯಾ, ವಿಶಾಖಪಟ್ಟಣ ಪಿಚ್ ಹೇಗಿದೆ?

ಡೆಲ್ಲಿ vs ಕೆಕೆಆರ್ ಐಪಿಎಲ್ ಪಂದ್ಯ: ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇದೆಯಾ, ವಿಶಾಖಪಟ್ಟಣ ಪಿಚ್ ಹೇಗಿದೆ?

DC vs KKR: ಐಪಿಎಲ್ 2024ರ ಆವೃತ್ತಿಯಲ್ಲಿ ಏಪ್ರಿಲ್‌ 3ರ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶಾಖಪಟ್ಟಣ ಪಂದ್ಯದ ಪಿಚ್‌, ಹವಾಮಾನ ಸೇರಿದಂತೆ ಉಭಯ ತಂಡಗಳ ಮುಖಾಮುಖಿ ದಾಖಲೆ ವಿವರ ಇಲ್ಲಿದೆ.

ಡೆಲ್ಲಿ vs ಕೆಕೆಆರ್ ಐಪಿಎಲ್ ಪಂದ್ಯದ ಪಿಚ್‌, ಹವಾಮಾನ ವರದಿ
ಡೆಲ್ಲಿ vs ಕೆಕೆಆರ್ ಐಪಿಎಲ್ ಪಂದ್ಯದ ಪಿಚ್‌, ಹವಾಮಾನ ವರದಿ (PTI)

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಐಪಿಎಲ್ 2024ರ (IPL 2024) 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ (Delhi Capitals vs Kolkata Knight Riders)‌ ತಂಡಗಳು ಎದುರಾಗುತ್ತಿವೆ. ಕೊನೆಯ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಭರ್ಜರಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಇದೀಗ ನಾಲ್ಕನೇ ಪಂದ್ಯವಾಡಲು ಸಜ್ಜಾಗಿದೆ. ಅತ್ತ ಟೂರ್ನಿಯಲ್ಲಿ ಈವರೆಗೆ ಅಜೇಯವಾಗಿರುವ ಕೋಲ್ಕತಾ, ಪ್ರಸಕ್ತ ಋತುವಿನ ಮೂರನೇ ಗೆಲುವಿಗೆ ಎದುರು ನೋಡುತ್ತಿದೆ.

ಕೋಲ್ಕತ್ತಾ ಆಡಿರುವ ಎರಡು ಪಂದ್ಯಗಳಲ್ಲಿಯೂ ಅಜೇಯವಾಗಿದ್ದು, ಡೆಲ್ಲಿ ಪ್ರಸಕ್ತ ಋತುವಿನಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದ ಎರಡು ಪಂದ್ಯಗಳಲ್ಲಿ ಸೋತು ಗೆಲುವಿನ ಹುಡುಕಾಟದಲ್ಲಿದೆ. ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು 20 ರನ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಡೆಲ್ಲಿ ಮೊದಲ ಗೆಲುವು ದಾಖಲಿಸಿತ್ತು.‌ ಇದೇ ವೇಳೆ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅದರದ್ದೇ ತವರಿನಲ್ಲಿ 7 ವಿಕೆಟ್‌ಗಳಿಂದ ಸೋಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿದೆ.

ಮುಖಾಮುಖಿ ದಾಖಲೆ

ದೆಹಲಿ ಮತ್ತು ಕೋಲ್ಕತ್ತಾ ತಂಡಗಳು ಇದುವರೆಗೆ 32 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳ ನಡುವೆ ಬಿಗಿ ಪೈಪೋಟಿ ನಡೆದು, ಡೆಲ್ಲಿ 15 ಪಂದ್ಯಗಳಲ್ಲಿ ಗೆದ್ದಿದೆ. ಅತ್ತ ಎರಡು ಬಾರಿಯ ಚಾಂಪಿಯನ್‌ ಕೋಲ್ಕತ್ತಾ 16 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಕೆಕೆಆರ್‌ ವಿರುದ್ಧ ಡೆಲ್ಲಿ ಗಳಿಸಿದ ಗರಿಷ್ಠ ಮೊತ್ತ 228 ರನ್.

ವಿಶಾಖಪಟ್ಟಣ ಪಿಚ್‌ ವರದಿ

ವಿಶಾಖಪಟ್ಟಣದ ಡಾ.ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದ ಪಿಚ್, ಬ್ಯಾಟರ್‌ಗಳಿಗೆ ಅನುಕೂಲಕರವಾಗಿವೆ. ಇದೇ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಡೆಲ್ಲಿ ತಂಡ ಉತ್ತಮ ರನ್‌ ಕಲೆ ಹಾಕಿತ್ತು. ಇದೇ ವೇಳೆ ವೇಗಿಗಳು ಪಂದ್ಯದ ಮೊದಲ ಭಾಗದಲ್ಲಿ ಸ್ವಿಂಗ್ ಪಡೆಯುತ್ತಾರೆ. ಅತ್ತ ಸಂಜೆಯ ಬಳಿಕ ಸ್ಪಿನ್ನರ್‌ಗಳು ಚೆಂಡಿನ ತಿರುವಿನಿಂದಾಗಿ ವಿಕೆಟ್ ಪಡೆಯುವ ಅವಕಾಶ ಪಡೆಯುತ್ತಾರೆ. ಬೌಲರ್‌ಗಳು ಕೂಡಾ ಈ ಪಿಚ್‌ನಲ್ಲಿ ಮೇಲುಗೈ ಸಾಧಿಸುವ ಅವಕಾಶವಿದೆ.

ಇದನ್ನೂ ಓದಿ | ಐಪಿಎಲ್ 2024ರ 2 ಪಂದ್ಯಗಳನ್ನು ಮರುನಿಗದಿಪಡಿಸಿದ ಬಿಸಿಸಿಐ; ಹೊಸ ದಿನಾಂಕ, ವೇಳಾಪಟ್ಟಿ ಬದಲಾವಣೆಗೆ ಕಾರಣ ಹೀಗಿದೆ

ವೈಜಾಗ್ ಹವಾಮಾನ ವರದಿ

ಡೆಲ್ಲಿ ಮತ್ತು ಕೋಲ್ಕತಾ ನಡುವಿನ ಪಂದ್ಯ ಆರಂಭದ ಸಮಯದಲ್ಲಿ ಆಂಧ್ರ ಪ್ರದೇಶದ ಕರಾವಳಿ ನಗರಿ ವಿಶಾಖಪಟ್ಟಣದಲ್ಲಿ ತಾಪಮಾನವು ಸುಮಾರು 33 ಡಿಗ್ರಿಗಳಷ್ಟಿರುವ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆ ಇಲ್ಲ. ಹೀಗಾಗಿ ಸಂಪೂರ್ಣ ಪಂದ್ಯವನ್ನು ಆನಂದಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ಆಡುವ ಬಳಗ

ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ), ಟಿ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಸರ್ ಪಟೇಲ್, ಆನ್ರಿಚ್ ನೋರ್ಟ್ಜೆ, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಆಡುವ ಬಳಗ

ಫಿಲಿಪ್ ಸಾಲ್ಟ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಎ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ರಮಣ್‌ದೀಪ್ ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Whats_app_banner