ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ; ಆಡುವ ಬಳಗದಲ್ಲಿ ಅಲ್ಜಾರಿ ಜೋಸೆಫ್
Chennai Super Kings vs Royal Challengers Bangalore : ಐಪಿಎಲ್ 2024ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದ ಟಾಸ್ ಅಪ್ಡೇಟ್ ಮತ್ತು ಆಡುವ ಬಳಗ ಹೀಗಿದೆ.

ಐಪಿಎಲ್ 2024ರ ಆವೃತ್ತಿಯ ಮೊದಲ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸವಾಲೆಸಯುತ್ತಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ(MA Chidambaram Stadium) ನಡೆಯುತ್ತಿರುವ ರಣರೋಚಕ ಮುಖಾಮುಖಿಯಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ವಿರುದ್ಧ ಒಂದು ಬಾರಿ ಮಾತ್ರ ಗೆದ್ದಿರುವ ಆರ್‌ಸಿಬಿಗೆ, ಈ ಪಂದ್ಯ ದೊಡ್ಡ ಸವಾಲಾಗಿದೆ. 5 ಬಾರಿಯ ಚಾಂಪಿಯನ್ ಪಟ್ಟ ಹೊತ್ತಿರುವ ಸಿಎಸ್‌ಕೆ ತಂಡವನ್ನು ಅವರದೇ ನೆಲದಲ್ಲಿ ಮಣಿಸುವುದು ಫಾಫ್ ಡುಪ್ಲೆಸಿಸ್ ಪಡೆಗೆ ಸವಾಲಾಗಿದೆ. ಮೊದಲ ಪಂದ್ಯಕ್ಕಾಗಿ ಉಭಯ ತಂಡಗಳು ಬಲಿಷ್ಠ ಆಡುವ ಬಳಗವನ್ನೇ ಕಣಕ್ಕಿಳಿಸಿದೆ. ಅತ್ತ ಸಿಎಸ್‌ಕೆ ತಂಡಕ್ಕೂ ಈ ಬಾರಿ ಹೊಸ ಸವಾಲು ಎದುರಾಗಿದೆ. ನಾಯಕನಾಗಿ ಅನನುಭವಿಯಾಗಿರುವ ಋತುರಾಜ್ ಗಾಯಕ್ವಾಡ್, ಯಶಸ್ವಿ ತಂಡವೊಂದನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ.
ಸಿಎಸ್‌ಕೆ ಪರ ಮಿಸ್ಟರಿ ಸ್ಪಿನ್ನರ್ ಸಮೀರ್ ರಿಜ್ವಿ ಐಪಿಎಲ್ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ವೇಳೆ ರಚಿನ್ ರವೀಂದ್ರ ಕೂಡಾ ಮೊದಲ ಪಂದ್ಯ ಆಡುತ್ತಿದ್ದಾರೆ. ಅವರೊಂದಿಗೆ ಡೇರಿಲ್ ಮಿಚೆಲ್, ಮಹೇಶ್ ತೀಕ್ಷಣ ಹಾಗೂ ಮುಸ್ತಫಿಜುರ್ ರೆಹಮಾನ್ ಇತರ ವಿದೇಶಿ ಆಟಗಾರರಾಗಿದ್ದಾರೆ.
ಇದನ್ನೂ ಓದಿ | ಎಂಎ ಚಿದಂಬರಂ ಕ್ರೀಡಾಂಗಣ; ಸಿಎಸ್‌ಕೆ vs ಆರ್‌ಸಿಬಿ ನಡುವಿನ ಐಪಿಎಲ್ ಅಂಕಿಅಂಶಗಳು ಮತ್ತು ದಾಖಲೆಗಳು
ನಾಯಕತ್ವ ಕುರಿತಂತೆ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಪ್ರಶ್ನೆಗೆ ಉತ್ತರಿಸಿದ ಋತುರಾಜ್, ನನಗೆ ಒಂದು ವಾರದ ಹಿಂದಷ್ಟೇ ಹೇಳಿದರು ಎಂದರು. ಇದೇ ವೇಳೆ ಧೋನಿ ಅವರು ಕಳೆದ ವರ್ಷವೇ ಸುಳಿವು ನೀಡಿದ್ದರು ಎಂದು ತಿಳಿಸಿದ್ದಾರೆ.
ಆರ್‌ಸಿಬಿ ಪರ ವಿದೇಶಿ ಆಟಗಾರರಾಗಿ ಕ್ಯಾಮರೂನ್ ಗ್ರೀನ್ ಮತ್ತು ಅಲ್ಜಾರಿ ಜೋಸೆಫ್ ಮೊದಲ ಪಂದ್ಯವಾಡುತ್ತಿದ್ದಾರೆ. ಮಯಾಂಕ್ ಡಾಗರ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಚೆಪಾಕ್ ಅಂಗಳದಲ್ಲಿ ಕೊನೆಯ ಬಾರಿಗೆ 2008ರ ಉದ್ಘಾಟಾನ ಆವೃತ್ತಿಯಲ್ಲಿ ಸಿಎಸ್‌ಕೆ ಮಣಿಸಿದ್ದ ಬೆಂಗಳೂರು, ಈ ಬಾರಿ ಗೆಲ್ಲುವ ಪಣ ತೊಟ್ಟಿದೆ. ಹಳದಿ ಆರ್ಮಿ ವಿರುದ್ಧ ಒಟ್ಟಾರೆ ಮುಖಾಮುಖಿಯಲ್ಲೂ ಆರ್‌ಸಿಬಿಇ ತಂಡದ ರೆಕಾರ್ಡ್ ಹೇಳಿಕೊಳ್ಳುವಂತಿಲ್ಲ. ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ 20ರಲ್ಲಿ ಗೆದ್ದು ಬೀಗಿದೆ. ಆದರೆ, ಬೆಂಗಳೂರು 10ರಲ್ಲಿ ಮಾತ್ರ ಗೆಲುವಿನ ಗಡಿ ತಲುಪಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನುಜ್ ರಾವತ್, ಕರ್ಣ್ ಶರ್ಮಾ, ಅಲ್ಜಾರಿ ಜೋಸೆಫ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ
ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ
ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ; ಐಪಿಎಲ್ ರೋಚಕ ಕದನದಲ್ಲಿ ಈ 5 ಆಟಗಾರರತ್ತ ಅಭಿಮಾನಿಗಳ ಚಿತ್ತ
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
