ಐಪಿಎಲ್ ಫೈನಲ್, ಕ್ವಾಲಿಫೈಯರ್, ಎಲಿಮಿನೇಟರ್ಗೆ ಸ್ಥಳ-ದಿನಾಂಕ ನಿಗದಿ; ಚೆನ್ನೈನ ಚೆಪಾಕ್ನಲ್ಲಿ ಅಂತಿಮ ಫೈಟ್?
IPL 2024 Final Scheduled : 17ನೇ ಆವೃತ್ತಿಯ ಐಪಿಎಲ್ ಫೈನಲ್, ಕ್ವಾಲಿಫೈಯರ್, ಎಲಿಮಿನೇಟರ್ ಪಂದ್ಯಗಳಿಗೆ ಸ್ಥಳ ನಿಗದಿಯಾಗಿದೆ. ಶೀಘ್ರದಲ್ಲೇ ಎರಡನೇ ಹಂತದ ವೇಳಾಪಟ್ಟಿ ಪ್ರಕಟವಾಗಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಫೈನಲ್ ಪಂದ್ಯವು ತಾತ್ಕಾಲಿಕವಾಗಿ ಮೇ 26ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (MA Chidambaram Stadium) ನಡೆಯಲಿದೆ ಎಂದು ಬಿಸಿಸಿಐ (BCCI) ಮೂಲಗಳು ಬಹಿರಂಗಪಡಿಸಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ನಡೆಯಲಿದ್ದು, ಇನ್ನೊಂದು ಕ್ವಾಲಿಫೈಯರ್ ಚೆನ್ನೈನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷದ ಹಾಲಿ ಚಾಂಪಿಯನ್‌ನ ತವರು ಮೈದಾನದಲ್ಲಿ ಆರಂಭಿಕ ಮತ್ತು ಅಂತಿಮ ಪಂದ್ಯ ನಡೆಸುವ ಸಂಪ್ರದಾಯವನ್ನು ಐಪಿಎಲ್ ಆಡಳಿತ ಮಂಡಳಿಯು ಮುಂದುವರೆಸಿಕೊಂಡು ಬಂದಿದೆ. ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಚಾಂಪಿಯನ್ ಆಗಿತ್ತು. ಅದರಂತೆ ಉದ್ಘಾಟನಾ ಮತ್ತು ಫೈನಲ್ ಪಂದ್ಯವನ್ನು ಚೆಪಾಕ್ನಲ್ಲಿ ಆಯೋಜಿಸಲಾಗುವುದು ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
2022ರಲ್ಲಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿತ್ತು. 2023ರ ಐಪಿಎಲ್‌ನಲ್ಲಿ ಆರಂಭಿಕ ಮತ್ತು ಫೈನಲ್ ಪಂದ್ಯವನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಸದ್ಯ ಮಹೇಂದ್ರ ಸಿಂಗ್ ಧೋನಿ ತಮ್ಮ ಕೊನೆಯ ಐಪಿಎಲ್‌ನಲ್ಲಿ ಆಡುವುದರಿಂದ ಚೆನ್ನೈನಲ್ಲಿ ನಾಕೌಟ್ ಪಂದ್ಯಗಳು ಎಲ್ಲಾ ತಲಾ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಲಿವೆ.
ಸಾರ್ವತ್ರಿಕ ಚುನಾವಣಾ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಐಪಿಎಲ್‌ನ ಉಳಿದ ವೇಳಾಪಟ್ಟಿಯನ್ನು ಅಂತಿಮಗೊಳಿಸಿದೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಮೊದಲ ಹಂತದ ಐಪಿಎಲ್ ಪಂದ್ಯಗಳು ಮಾರ್ಚ್ 22ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ 7ರ ತನಕ ನಡೆಯಲಿವೆ. ಎರಡನೇ ವೇಳಾಪಟ್ಟಿ ಕುರಿತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಾಗಾಗಿ ಉಳಿದ ವೇಳಾಪಟ್ಟಿಗಾಗಿ ಕೆಲಸ ನಡೆಯುತ್ತಿದ್ದು, ಮತದಾನದ ದಿನಾಂಕಗಳೊಂದಿಗೆ ಘರ್ಷಣೆ ಉಂಟಾಗದಂತೆ ತಪ್ಪಿಸಲು ಯೋಜನೆ ರೂಪಿಸುತ್ತಿದ್ದೇವೆ. ಮತದಾನ ನಡೆಯುವ ದಿನಗಳಂದು ಪಂದ್ಯಗಳು ಆಯೋಜಿಸದಿರಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಐಪಿಎಲ್ ಜಿಸಿ ಅಧ್ಯಕ್ಷ ಅರುಣ್ ಧುಮಾಲ್ (Arun Dhumal) ಅವರು ನ್ಯೂಸ್ 18ಗೆ ತಿಳಿಸಿದ್ದಾರೆ.
ಐಪಿಎಲ್ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ಎಲ್ಲಿ?
ಫೈನಲ್ - ಚೆಪಾಕ್ ಕ್ರಿಕೆಟ್ ಮೈದಾನ (ಮೇ 26 ಫೈನಲ್ ಸಾಧ್ಯತೆ)
ಕ್ವಾಲಿಫೈಯರ್ 1 - ನರೇಂದ್ರ ಮೋದಿ ಸ್ಟೇಡಿಯಂ (ದಿನಾಂಕ ಬಹಿರಂಗಗೊಂಡಿಲ್ಲ)
ಎಲಿಮಿನೇಟರ್ - ನರೇಂದ್ರ ಮೋದಿ ಸ್ಟೇಡಿಯಂ (ದಿನಾಂಕ ಬಹಿರಂಗಗೊಂಡಿಲ್ಲ)
ಕ್ವಾಲಿಫೈಯರ್ 2 - ಚೆಪಾಕ್ ಕ್ರಿಕೆಟ್ ಮೈದಾನ (ದಿನಾಂಕ ಬಹಿರಂಗಗೊಂಡಿಲ್ಲ)
ತಂಡಗಳು | ಕ್ಯಾಪ್ಟನ್ |
---|---|
ಮುಂಬೈ ಇಂಡಿಯನ್ಸ್ (MI) | ಹಾರ್ದಿಕ್ ಪಾಂಡ್ಯ |
ಚೆನ್ನೈ ಸೂಪರ್ ಕಿಂಗ್ಸ್ (CSK) | ಎಂಎಸ್ ಧೋನಿ |
ಗುಜರಾತ್ ಟೈಟಾನ್ಸ್ (GT) | ಶುಭ್ಮನ್ ಗಿಲ್ |
ಡೆಲ್ಲಿ ಕ್ಯಾಪಿಟಲ್ಸ್ (DC) | ರಿಷಭ್ ಪಂತ್ |
ಲಕ್ನೋ ಸೂಪರ್‌ಜೈಂಟ್ಸ್ (LSG) | ಕೆಎಲ್ ರಾಹುಲ್ |
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) | ಫಾಫ್ ಡು ಪ್ಲೆಸಿಸ್ |
ರಾಜಸ್ಥಾನ್ ರಾಯಲ್ಸ್ (RR) | ಸಂಜು ಸ್ಯಾಮ್ಸನ್ |
ಕೋಲ್ಕತ್ತಾ ನೈಟ್ ರೈಡರ್ಸ್ (KKR) | ಶ್ರೇಯಸ್ ಅಯ್ಯರ್ |
ಸನ್‌ರೈಸರ್ಸ್ ಹೈದರಾಬಾದ್ (SRH) | ಪ್ಯಾಟ್ ಕಮಿನ್ಸ್ |
ಪಂಜಾಬ್ ಕಿಂಗ್ಸ್ (PBKs) | ಶಿಖರ್ ಧವನ್ |