Gautam Gambhir: ಲಕ್ನೋ ತಂಡಕ್ಕೆ ಗಂಭೀರ್ ಗುಡ್ಬೈ; ಗೌತಮ್ ಮೇಲೆ ಗಮನ ಹರಿಸಿದ ಕೆಕೆಆರ್
Gautam Gambhir: ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಕಾಣುವ ಸಾಧ್ಯತೆ ಇದೆ. ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಿದ್ದ ಗೌತಮ್ ಗಂಭೀರ್ ಅವರಿಗೆ ಗೇಟ್ಪಾಸ್ ನೀಡಲು ಫ್ರಾಂಚೈಸಿ ಚಿಂತಿಸಿದೆ.

ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ಸಿದ್ಧತೆಯ ನಡುವೆಯೇ ಐಪಿಎಲ್ ಫ್ರಾಂಚೈಸಿಗಳು (IPL 2024) ತಮ್ಮ ತಂಡಗಳಲ್ಲಿ ಬದಲಾವಣೆಗೆ ಹೆಚ್ಚು ಒತ್ತು ನೀಡುತ್ತಿವೆ. ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ನೂತನ ಕೋಚ್ ನೇಮಕದ ಬೆನ್ನಲ್ಲೇ ಇದೀಗ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಕಾಣುವ ಸಾಧ್ಯತೆ ಇದೆ. ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಿದ್ದ ಗೌತಮ್ ಗಂಭೀರ್ (Gautam Gambhir) ಅವರಿಗೆ ಗೇಟ್ಪಾಸ್ ನೀಡಲು ಫ್ರಾಂಚೈಸಿ ಚಿಂತಿಸಿದೆ.
ಟ್ರೆಂಡಿಂಗ್ ಸುದ್ದಿ
ಕಳೆದ ಎರಡು ಆವೃತ್ತಿಗಳಿಂದ ಲಕ್ನೋಗೆ ಮಾರ್ಗದರ್ಶನ ನೀಡುತ್ತಿದ್ದ ಆ್ಯಂಡಿ ಫ್ಲವರ್ (Andy Flower) ಬದಲಿಗೆ ಆಸ್ಟ್ರೇಲಿಯಾದ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್ (Justin Langer) ಅವರನ್ನು ನೇಮಿಸಲಾಗಿದೆ. ಇದೀಗ ಎರಡು ಆವೃತ್ತಿಗಳಲ್ಲಿ ಎಲ್ಎಸ್ಜಿ ತಂಡವನ್ನು ಪ್ಲೇ ಆಫ್ಗೇರಿಸುವಲ್ಲಿ ಯಶಸ್ವಿಯಾಗಿದ್ದ ಗೌತಮ್ ಗಂಭೀರ್ ಅವರನ್ನು ಕೈಬಿಡಲು ಚಿಂತನೆ ನಡೆಸಿದೆ. ಬದಲಿಗೆ ಭಾರತದ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ (MSK Prasad) ಅವರನ್ನು ಕಾರ್ಯತಂತ್ರದ ಸಲಹೆಗಾರರಾಗಿ ನೇಮಿಸಿಕೊಳ್ಳಲು ಫ್ರಾಂಚೈಸಿ ಚಿಂತಿಸಿದೆ.
10 ಕೋಟಿ ಪಡೆಯುತ್ತಿದ್ದ ಗಂಭೀರ್
ಲಕ್ನೋ ತಂಡದ ಪರ ಡಗೌಟ್ನಲ್ಲಿ ಹೆಚ್ಚು ಸದ್ದು ಮಾಡಿದ ಗಂಭೀರ್ ಅವರಿಗೆ ಪ್ರತಿ ಐಪಿಎಲ್ ಸೀಸನ್ಗೂ 10 ಕೋಟಿ ವೇತನ ಪಾವತಿ ಮಾಡಲಾಗುತ್ತಿತ್ತು. ಕೋಚ್ ಆಗಿದ್ದ ಆ್ಯಂಡಿ ಫ್ಲವರ್ ಕೂಡ ತಂಡದ ಆಟಗಾರರ ವಿರುದ್ಧ ಕೆಂಡಕಾರುತ್ತಿರಲಿಲ್ಲ. ಆದರೆ, ಗಂಭೀರ್ ಮಾತ್ರ ಪಂದ್ಯ ಸೋತಾಗೆಲ್ಲಾ ಆಟಗಾರರಿಗೆ ತರಾಟೆ ತೆಗೆದುಕೊಳ್ಳುತ್ತಿದ್ದರು. ಆ್ಯಂಡಿ ಫ್ಲವರ್ ನಂತರ ಗಂಭೀರ್ ಈಗ ಐಪಿಎಲ್ ಫ್ರಾಂಚೈಸಿ ತೊರೆಯಲಿದ್ದಾರೆ. ಇದಕ್ಕಿಂತ ಹೆಚ್ಚಿನದನ್ನು ನಾನು ಹೇಳಲಾರೆ ಎಂದು ಮೂಲವೊಂದು ತಿಳಿಸಿದೆ.
ಕೆಕೆಆರ್ ಕಡೆಗೆ ಗಂಭೀರ್ ಗಮನ
ಇತ್ತೀಚಿನ ವರದಿಯ ಪ್ರಕಾರ, ಗೌತಮ್ ಗಂಭೀರ್ ಐಪಿಎಲ್ 2024ಕ್ಕೆ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ನಾಯಕನಾಗಿ ಕೆಕೆಆರ್ ತಂಡಕ್ಕೆ 2 ಟ್ರೋಫಿ ಗೆದ್ದುಕೊಟ್ಟಿರುವ ಗಂಭೀರ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಫ್ರಾಂಚೈಸಿ ಸರ್ವಪ್ರಯತ್ನ ನಡೆಸುತ್ತಿದೆ ಎಂದು ವರದಿಯಾಗಿದೆ. ಗಂಭೀರ್ ತಂಡ ತೊರೆದ ನಂತರ ಕೆಕೆಆರ್, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಇಯಾನ್ ಮಾರ್ಗನ್ ನಾಯಕತ್ವದಲ್ಲಿ 2021ರಲ್ಲಿ ಕೆಕೆಆರ್ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಗೆದ್ದಿರಲಿಲ್ಲ.
ಗಂಭೀರ್ ಮೇಲೇಕೆ ಕಣ್ಣು?
ಗಂಭೀರ್ ಕೆಕೆಆರ್ಗೆ 2 ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು. 2011 ರಿಂದ 2017ರವರೆಗೂ ತಂಡವನ್ನು ಮುನ್ನಡೆಸಿದ್ದ ಗಂಭೀರ್, ಅತ್ಯಂತ ಬಲಿಷ್ಠ ತಂಡವನ್ನಾಗಿ ಸಿದ್ಧಪಡಿಸಿದ್ದರು. ಚಂದ್ರಕಾಂತ್ ಪಂಡಿತ್ ಪ್ರಸ್ತುತ ಕೆಕೆಆರ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಬಾರಿ ತಂಡವನ್ನು ಪ್ಲೇಆಫ್‌ಗೇರಿಸುವಲ್ಲಿ ವಿಫಲರಾಗಿದ್ದರು. 2014ರ ಬಳಿಕ ಐಪಿಎಲ್ ಟ್ರೋಫಿ ಬರ ನೀಗಿಸಲು ಕೆಕೆಆರ್ ಸಿದ್ಧವಾಗುತ್ತಿದೆ. ಅದರಂತೆ ಗಂಭೀರ್ಗೆ ಮಣೆ ಹಾಕಲು ಚಿಂತನೆ ರೂಪಿಸಿದೆ.
ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್‌ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್ 2024ರ ಋತುವಿನ ಆರಂಭಕ್ಕೂ ಮೊದಲೇ ತಮ್ಮ ಕೋಚಿಂಗ್ ಸಿಬ್ಬಂದಿ ಬದಲಿಸಿವೆ. ಈ 3 ತಂಡಗಳ ಮುಖ್ಯ ಕೋಚ್‌ಗಳು ಬದಲಾಗಿದ್ದಾರೆ. ಇದೀಗ ಲಕ್ನೋ ಮೆಂಟರ್ ಗೌತಮ್ ಗಂಭೀರ್ ಕೂಡ ತಂಡವನ್ನು ಬದಲಾಯಿಸಲಿದ್ದಾರೆ ಎಂಬ ವರದಿಗಳಿದ್ದು, ಇದು ನಿಜವಾಗುತ್ತಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.
ಸಂಬಂಧಿತ ಲೇಖನ
ವಿಭಾಗ