ಅನುಭವಿ ಕಮಿನ್ಸ್ ನಾಯಕತ್ವದ ಸವಾಲಿನಲ್ಲಿ ಶುಭ್ಮನ್ ಗಿಲ್ ಗೆಲುವು; ಹೈದರಾಬಾದ್ ವಿರುದ್ಧ ಗುಜರಾತ್‌ಗೆ ಸುಲಭ ಜಯ
GT vs SRH: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ಸುಲಭ ಜಯ ಒಲಿಸಿಕೊಂಡಿದೆ. ತವರು ಮೈದಾನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ಗೆದ್ದು ಬೀಗಿದೆ. ಕಮಿನ್ಸ್ ಅನುಭವದ ಮುಂದೆ ಶುಭ್ಮನ್ ಗಿಲ್ ಚಾಣಾಕ್ಷ ನಾಯಕತ್ವ ಗೆದ್ದಿದೆ.

ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಗೆಲುವಿನ ಹಳಿಗೆ ಮರಳಿದೆ. ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದ ಶುಭ್ಮನ್ ಗಿಲ್ ಬಳಗವು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಸಕ್ತ ಆವೃತ್ತಿಯ ಐಪಿಎಲ್‌ನ 12ನೇ ಪಂದ್ಯದಲ್ಲಿ, ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಆಲ್‌ರೌಂಡ್ ಪ್ರದರ್ಶನ ನೀಡಿದ ತಂಡವು 7 ವಿಕೆಟ್‌ಗಳಿಂದ ಜಯ ಸಾಧಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬೃಹತ್ ಮೊತ್ತ ಕಲೆಹಾಕುವ ಭರವಸೆಯಲ್ಲಿದ್ದ ಆರೆಂಜ್ ಆರ್ಮಿಗೆ, ಗಿಲ್ ಪಡೆ ಅವಕಾಶ ನೀಡಲಿಲ್ಲ. ಹೀಗಾಗಿ ಹೈದರಾಬಾದ್ ತಂಡವು 8 ವಿಕೆಟ್ ಕಳೆದುಕೊಂಡು 162 ರನ್ ಮಾತ್ರ ಕಲೆ ಹಾಕಿತು. ಸಾಧಾರಣ ಗುರಿ ಬೆನ್ನಟ್ಟಿದ ಆತಿಥೇಯ ಗುಜರಾತ್, 19.1 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿ ಗುರಿ ತಲುಪಿದೆ.
ಮುಂಬೈ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಬ್ಬರಿಸಿ ದಾಖಲೆಯ ಮೊತ್ತ ಕಲೆ ಹಾಕಿದ್ದ ಸನ್‌ರೈಸರ್ಸ್ ತಂಡವನ್ನು, ಈ ಪಂದ್ಯದಲ್ಲಿ ಸ್ಫೋಟಿಸಲು ಗುಜರಾತ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಆರಂಭ ಉತ್ತಮವಾಗಿದ್ದರೂ, ಮಯಾಂಕ್ ಅಗರ್ವಾಲ್ 16 ರನ್ ಗಳಿಸಿ ಔಟಾದರೆ ಟ್ರಾವಿಸ್ ಹೆಡ್ 19 ರನ್ ಗಳಿಸಿದ್ದಾಗ ನೂರ್ ಅಹ್ಮದ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು.
ಇದನ್ನೂ ಓದಿ | ಮಯಾಂಕ್ ಯಾದವ್ ಟಿ20 ವಿಶ್ವಕಪ್ಗೆ ಆಯ್ಕೆ ಆಗಬೇಕಾ; ಮಹತ್ವದ ಹೇಳಿಕೆ ನೀಡಿದ ವೇಗಿಯ ಕೋಚ್ ದೇವಾಂಗ್ ಗಾಂಧಿ
ಅಭಿಷೇಕ್ ಶರ್ಮಾ ಒಮ್ಮ ಜೀವದಾನ ಪಡೆದರೂ, ಕೊನೆಗೆ 29 ರನ್ ಗಳಿಸಿದ್ದಾಗ ಶುಭ್ಮನ್ ಗಿಲ್‌ಗೆ ಕ್ಯಾಚ್ ನೀಡಿ ಔಟಾದರು. ಅನುಭವಿ ಮರ್ಕ್ರಾಮ್ ಆಟ 17 ರನ್‌ಗೆ ಅಂತ್ಯವಾದರೆ, ಕಳೆದೆರಡು ಪಂದ್ಯಗಳಲ್ಲಿ ಸಿಡಿದಿದ್ದ ಕ್ಲಾಸೆನ್, 24 ರನ್ ಗಳಿಸಿದ್ದಾಗ ರಶೀದ್ ಖಾನ್ ಸ್ಪಿನ್ ಮೋಡಿಗೆ ಬಲಿಯಾದರು. ಆರ್‌ಸಿಬಿ ಮಾಜಿ ಆಟಗಾರ ಶಹಬಾಜ್ ಅಹ್ಮದ್ 22 ರನ್ ಕಲೆ ಹಾಕಿದರೆ, ವಾಷಿಂಗ್ಟನ್ ಸುಂದರ್ ಡಕೌಟ್ ಆದರು. ಡೆತ್ ಓವರ್‌ಗಳಲ್ಲಿ ಅಬ್ದುಲ್ ಸಮದ್ ಅಬ್ಬರಿಸಿ 29 ರನ್ ಗಳಿಸಿದರು.
ಯಶಸ್ವಿ ಚೇಸಿಂಗ್
ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಈ ನಡುವೆ ವೃದ್ಧಿಮಾನ್ ಸಾಹಾ 2 ಸಿಕ್ಸರ್ ಸಹಿತ 25 ರನ್ ಗಳಿಸಿದ್ದಾಗ, ಶಹಬಾಜ್ ಅಹ್ಮದ್ ಹೈದರಾಬಾದ್‌ಗೆ ಮೊದಲ ಮುನ್ನಡೆ ತಂದುಕೊಟ್ಟರು. ತಾಳ್ಮೆಯ ಆಟವಾಡಿದ ನಾಯಕ ಗಿಲ್ 36 ರನ್ ಗಳಿಸಿ ಔಟಾದರು. ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಸಾಯಿ ಸುದರ್ಶನ್ 45 ರನ್ ಗಳಿಸಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ ಹಾಗೂ ವಿಜಯ್ ಶಂಕರ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 27 ಎಸೆತಗಳನ್ನು ಎದುರಿಸಿದ ಮಿಲ್ಲರ್, 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 44 ರನ್ ಗಳಿಸಿ ಸಿಕ್ಸರ್ ಮೂಲಕ ತಂಡವನ್ನು ಗೆಲ್ಲಿಸಿದರು.
ಈ ಗೆಲುವಿನೊಂದಿಗೆ ರನ್ ಚೇಸಿಂಗ್‌ನಲ್ಲಿ ಗುಜರಾತ್ ಅಮೋಘ ದಾಖಲೆ ಮುಂದುವರೆಸಿದೆ. ಈವರೆಗೆ ಒಟ್ಟು 20 ಪಂದ್ಯಗಳಲ್ಲಿ ಚೇಸಿಂಗ್ ಮಾಡಿರುವ ತಂಡವು, 15 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಇದನ್ನೂ ಓದಿ | ಐಪಿಎಲ್ 2024ರ ವೇಗದ ಬೌಲಿಂಗ್ ಬಳಿಕ ಮಯಾಂಕ್ ಯಾದವ್ ಏನಂದ್ರು; ಭಾರತೀಯ ವೇಗದೂತನಿಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಆದರ್ಶವಂತೆ
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
