ಅಂಕಪಟ್ಟಿಯ ಅಗ್ರಸ್ಥಾನಿಗಳ ಕಾದಾಟ; ಕೆಕೆಆರ್ vs ರಾಜಸ್ಥಾನ್ ರಾಯಲ್ಸ್ ಪಿಚ್ ಹಾಗೂ ಹವಾಮಾನ ವರದಿ-ipl 2024 kolkata knight riders vs rajasthan royals pitch reports kkr vs rr weather forecast eden gardens samson jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂಕಪಟ್ಟಿಯ ಅಗ್ರಸ್ಥಾನಿಗಳ ಕಾದಾಟ; ಕೆಕೆಆರ್ Vs ರಾಜಸ್ಥಾನ್ ರಾಯಲ್ಸ್ ಪಿಚ್ ಹಾಗೂ ಹವಾಮಾನ ವರದಿ

ಅಂಕಪಟ್ಟಿಯ ಅಗ್ರಸ್ಥಾನಿಗಳ ಕಾದಾಟ; ಕೆಕೆಆರ್ vs ರಾಜಸ್ಥಾನ್ ರಾಯಲ್ಸ್ ಪಿಚ್ ಹಾಗೂ ಹವಾಮಾನ ವರದಿ

KKR vs RR: ಏಪ್ರಿಲ್ 16ರಂದು ನೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಎದುರಾಗುತ್ತಿವೆ. ಕೆಕೆಆರ್‌ ತವರು ನೆಲದಲ್ಲಿ ಪಂದ್ಯ ನಡೆಯುತ್ತಿದ್ದು, ಸತತ ಗೆಲುವಿನ ಶ್ರೇಯಸ್‌ ಅಯ್ಯರ್‌ ಬಳಗ ಎದುರು ನೋಡುತ್ತಿದೆ.

ಕೆಕೆಆರ್ vs ರಾಜಸ್ಥಾನ್ ರಾಯಲ್ಸ್ ಪಿಚ್ ಹಾಗೂ ಹವಾಮಾನ ವರದಿ
ಕೆಕೆಆರ್ vs ರಾಜಸ್ಥಾನ್ ರಾಯಲ್ಸ್ ಪಿಚ್ ಹಾಗೂ ಹವಾಮಾನ ವರದಿ

ಐಪಿಎಲ್‌ 17ನೇ ಆವೃತ್ತಿಯಲ್ಲಿ ಏಪ್ರಿಲ್ 16ರ ಮಂಗಳವಾರ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (KKR vs RR) ತಂಡಗಳು ಸೆಣಸಾಟ ನಡೆಸಲಿವೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಗೆಲುವಿನ ಓಟ ಮುಂದುವರೆಸಲು ಸಜ್ಜಾಗಿವೆ. ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈ ಎರಡು ಬಲಿಷ್ಠ ತಂಡಗಳು, ಈವರೆಗೆ ತಲಾ ಒಂದು ಪಂದ್ಯದಲ್ಲಿ ಮಾತ್ರ ಮುಗ್ಗರಿಸಿವೆ. ಒಂದು ಪಂದ್ಯ ಹೆಚ್ಚು ಆಡಿರುವ ರಾಜಸ್ಥಾನ, 5ರಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದೆ. ಅತ್ತ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಕೆಕೆಆರ್ ತಂಡ 2ನೇ ಸ್ಥಾನದಲ್ಲಿದೆ.

ಉಭಯ ತಂಡಗಳ ನಡುವಿನ ಕದನವು ಬಲಿಷ್ಠ ತಂಡಗಳ ಪೈಪೋಟಿ ಎಂಬುದು ಸ್ಪಷ್ಟ. ಇಲ್ಲಿ ಗೆದ್ದ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಲಿದೆ.

ಮುಖಾಮುಖಿ ದಾಖಲೆ

ಕೋಲ್ಕತ್ತಾ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ ಐಪಿಎಲ್ ಇತಿಹಾಸದಲ್ಲಿ 28 ಪಂದ್ಯಗಳಲ್ಲಿ ಎದುರಾಗಿವೆ. ಇದರಲ್ಲಿ ಕೆಕೆಆರ್ 14 ಪಂದ್ಯಗಳಲ್ಲಿ ಗೆದ್ದಿದ್ದರೆ, ರಾಜಸ್ಥಾನವು 13 ಪಂದ್ಯಗಳನ್ನು ಗೆದ್ದು ಬೀಗಿದೆ. ಕೋಲ್ಕತ್ತಾ ವಿರುದ್ಧ ಆಡಿದ ಕೊನೆಯ ಐದು ಪಂದ್ಯಗಳಲ್ಲಿ ರಾಜಸ್ಥಾನವು ಮೂರರಲ್ಲಿ ಗೆದ್ದಿದೆ. 2023ರ ಆವೃತ್ತಿಯ ಐಪಿಎಲ್‌ನಲ್ಲಿ ಯಶಸ್ವಿ ಜೈಸ್ವಾಲ್ 98 ರನ್ ನೆರವಿಂದ ಆರ್‌ಆರ್‌ 9 ವಿಕೆಟ್‌ ಜಯ ಸಾಧಿಸಿತ್ತು.

ಇದನ್ನೂ ಓದಿ | ನಾಲ್ಕೇ ಎಸೆತಗಳಲ್ಲಿ ಧೋನಿ 20 ರನ್; ಮಹೇಂದ್ರನ ರೌದ್ರಾವತಾರಕ್ಕೆ ದಾಖಲೆಗಳು ಛಿದ್ರ! ಬೆಂಕಿ ಬ್ಯಾಟಿಂಗ್ ವಿಡಿಯೋ ನೋಡಿ

ಈಡನ್‌ ಗಾರ್ಡನ್ಸ್‌ ಮೈದಾನದ ಪಿಚ್ ವರದಿ

ಬ್ಯಾಟರ್‌ಗಳ ಸ್ವರ್ಗ ಎನಿಸಿರುವ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನವು ಬ್ಯಾಟರ್‌ಗಳಿಗೆ ಹೆಚ್ಚು ರನ್‌ ಗಳಿಸಲು ನೆರವಾಗುತ್ತದೆ. ಬೌಲಿಂಗ್‌ ವಿಚಾರ ನೋಡುವುದಾದರೆ, ಮೈದಾನದಲ್ಲಿ ವೇಗಿಗಳು ಇದುವರೆಗೆ 519 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೇ ವೇಳೆ ಸ್ಪಿನ್ನರ್‌ಗಳು 390 ವಿಕೆಟ್ ಪಡೆದಿದ್ದಾರೆ. ಇಲ್ಲಿಯವರೆಗೆ ಈ ಮೈದಾನವು 84 ಐಪಿಎಲ್ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಇದರಲ್ಲಿ 50 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಗೆದ್ದಿವೆ. ಇಲ್ಲಿ ಕೆಕೆಆರ್ 79 ಪಂದ್ಯಗಳಲ್ಲಿ ಆಡಿದ್ದು, 47ರಲ್ಲಿ ಗೆದ್ದಿದೆ. ಕೆಕೆಆರ್‌ ಮತ್ತು ಆರ್‌ಆರ್ ಪರಸ್ಪರ ಒಂಬತ್ತು ಪಂದ್ಯಗಳನ್ನು ಆಡಿದ್ದು, ಆರು ಪಂದ್ಯಗಳಲ್ಲಿ ಕೋಲ್ಕತ್ತಾ ಗೆದ್ದಿದೆ.

ಕೋಲ್ಕತ್ತಾ‌ ಹವಾಮಾನ ವರದಿ

ಏಪ್ರಿಲ್ 16ರಂದು ಕೋಲ್ಕತ್ತಾ ನಗರದದಲ್ಲಿ ಭಾರಿ ಬಿಸಿಯ ವಾತಾವರಣ ಇರುತ್ತದೆ ಎಂದು ಅಕ್ಯೂವೆದರ್ ತಿಳಿಸಿದೆ. ಸಂಜೆ ಪಂದ್ಯದ ವೇಳೆಗೆ ತಾಪಮಾನವು ಸುಮಾರು 29 ಡಿಗ್ರಿಗಳಷ್ಟಿರುವ ಸಾಧ್ಯತೆ ಇದೆ. ಮಳೆ ಬರುವ ಸಾಧ್ಯತೆ ಇಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ

ಸುನಿಲ್‌ ನರೈನ್, ಫಿಲ್ ಸಾಲ್ಟ್ (ವಿಕೆಟ್‌ ಕೀಪರ್), ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ರಾಜಸ್ಥಾನ್ ರಾಯಲ್ಸ್‌ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ತನುಷ್ ಕೋಟ್ಯಾನ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್‌ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಕೇಶವ್ ಮಹಾರಾಜ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್.