Explainer: ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ವಿಭಿನ್ನ ಜೆರ್ಸಿ ಧರಿಸಿದ್ಯಾಕೆ? ಮೆರೂನ್ ಹಾಗೂ ಹಸಿರು ಬಣ್ಣಕ್ಕಿಂದೆ ನಂಟು
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ವಿಭಿನ್ನ ಜೆರ್ಸಿ ಧರಿಸಿದ್ಯಾಕೆ? ಮೆರೂನ್ ಹಾಗೂ ಹಸಿರು ಬಣ್ಣಕ್ಕಿಂದೆ ನಂಟು

Explainer: ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ವಿಭಿನ್ನ ಜೆರ್ಸಿ ಧರಿಸಿದ್ಯಾಕೆ? ಮೆರೂನ್ ಹಾಗೂ ಹಸಿರು ಬಣ್ಣಕ್ಕಿಂದೆ ನಂಟು

Lucknow Super Giants: ಕೆಕೆಆರ್‌ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ತಂಡವು ಮೆರೂನ್‌ ಹಾಗೂ ಹಸಿರು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿದಿದೆ. ಈ ಬಣ್ಣಕ್ಕೂ ಫುಟ್‌ಬಾಲ್‌ಗೂ ಒಂದು ನಂಟಿದೆ. ಅಲ್ಲದೆ ಲಕ್ನೋ ತಂಡಕ್ಕೂ ಕೋಲ್ಕತ್ತಾ ನಗರಕ್ಕೂ ವಿಶೇಷ ಒಡನಾಟವಿದೆ.

ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ವಿಭಿನ್ನ ಜೆರ್ಸಿ ಧರಿಸಿದ್ಯಾಕೆ?
ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ವಿಭಿನ್ನ ಜೆರ್ಸಿ ಧರಿಸಿದ್ಯಾಕೆ?

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಏಪ್ರಿಲ್ 14ರ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಡುತ್ತಿವೆ. ತವರಿನ ಹೊರಗೆ ನಡೆಯುತ್ತಿರುವ ಈ ಪಂದ್ಯದಲ್ಲಿ ಲಕ್ನೋ ತಂಡವು ವಿಭಿನ್ನ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದೆ. ಸಾಮಾನ್ಯ ನೀಲಿ ಬಣ್ಣದ ಜೆರ್ಸಿಗಿಂತ ಭಿನ್ನವಾಗಿ, ಕೆಕೆಆರ್‌ ವಿರುದ್ಧ ಮೆರೂನ್‌ ಹಾಗೂ ಹಸಿರು ಬಣ್ಣದ ಜೆರ್ಸಿ ತೊಟ್ಟು ಆಡುತ್ತಿದೆ. ಕೋಲ್ಕತ್ತಾ ತಂಡದ ವಿರುದ್ಧ ಅದು ಕೂಡಾ ತವರಿನ ಹೊರಗೆ ಭಿನ್ನ ಜೆರ್ಸಿಯೊಂದಿಗೆ ಆಡಲು ಕಾರಣವಿದೆ.

ಎರಡು ವರ್ಷಗಳ ಹಿಂದೆ ಐಪಿಎಲ್‌ ಟೂರ್ನಿಗೆ ಕಾಲಿಟ್ಟ ಹೊಸ ಫ್ರಾಂಚೈಸ್‌ ಲಕ್ನೋ ಸೂಪರ್‌ ಜೈಂಟ್ಸ್‌. ಈ ಫ್ರಾಂಚೈಸ್‌ ಮಾಲೀಕ ಭಾರತದ ಬಿಲಿಯನೇರ್ ಉದ್ಯಮಿ ಸಂಜೀವ್ ಗೋಯೆಂಕಾ ಅವರು. ಗೋಯೆಂಕಾ ಕೋಲ್ಕತ್ತಾ ಮೂಲದವರು. ಇವರ ಮಾಲೀಕತ್ವದಲ್ಲಿ ಐಎಸ್‌ಎಲ್‌ ಫ್ರಾಂಚೈಸ್‌ ಕೂಡಾ ಇದೆ. ಹಲವು ವರ್ಷಗಳಿಂದ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಆಡುವ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ತಂಡದ ಮಾಲೀಕ ಕೂಡಾ ಸಂಜಯ್‌ ಅವರೇ. ಈ ತಂಡದ ಜೆರ್ಸಿ ಥೀಮ್‌ ಮೆರೂನ್ ಮತ್ತು ಹಸಿರು ಬಣ್ಣದ್ದು. ಮೋಹನ್‌ ಬಗಾನ್‌ ಫ್ರಾಂಚೈಸ್‌ ಕೋಲ್ಕತ್ತಾ ಮೂಲದ್ದು ಹಾಗೂ ಅದರ ಮಾಲೀಕ ಕೂಡಾ ಅಲ್ಲಿಯವರೇ. ಇತ್ತ ಐಪಿಎಲ್‌ಗೆ ಲಕ್ನೋ ಹೆಸರಿನ ಫ್ರಾಂಚೈಸ್‌ಗೂ ಇವರೇ ಮಾಲೀಕ. ಇದೀಗ ಈ ಪಂದ್ಯ ತಮ್ಮ ತವರು ಮೈದಾನದಲ್ಲಿ ನಡೆಯುತ್ತಿರುವ ಕಾರಣದಿಂದಾಗಿ ಮೋಹನ್‌ ಬಗಾನ್‌ ತಂಡದ ಜೆರ್ಸಿ ಬಣ್ಣದೊಂದಿಗೆ ಎಲ್‌ಎಸ್‌ಜಿ ತಂಡ ಕಣಕ್ಕಿಳಿಯುತ್ತಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತವರಿನಲ್ಲಿ ಸೋತ ಲಕ್ನೋ, ಭಾನುವಾರ ಈಡನ್ ಗಾರ್ಡನ್ಸ್‌ನಲ್ಲಿ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಇದೇ ವೇಳೆ ತಂಡದ ಮಾಲೀಕರ ತವರು ಕೋಲ್ಕತ್ತಾದದಲ್ಲಿ ಅಭಿಮಾನಿಗಳ ಬೆಂಬಲದ ನಿರೀಕ್ಷೆಯಲ್ಲಿದೆ. ಅತ್ತ ಹ್ಯಾಟ್ರಿಕ್‌ ಗೆಲುವಿನ ಬಳಿಕ ಕೊನೆಯ ಪಂದ್ಯದಲ್ಲಿ ಸೋತಿರುವ ಕೆಕೆಆರ್‌ ಕೂಡಾ, ಗೆಲುವಿನ ಹಾದಿಗೆ ಮರಳಲು ತಂತ್ರ ರೂಪಿಸಿದೆ.

ಇದನ್ನೂ ಓದಿ | IPL 2024 Latest Updates: ಕೆಕೆಆರ್ vs ಎಲ್‌ಎಸ್‌ಜಿ, ಮುಂಬೈ vs ಸಿಎಸ್‌ಕೆ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

ಬರೋಬ್ಬರಿ 22 ದಿನಗಳ ಬಳಿಕ ಕೋಲ್ಕತ್ತಾ ತಂಡವು ತಮ್ಮ ತವರು ಮೈದಾನದಲ್ಲಿ ಆಡುತ್ತಿದೆ. ಮೊದಲ ಪಂದ್ಯವನ್ನು ಈಡನ್‌ ಮೈದಾನದಲ್ಲಿ ಆಡಿದ ಬಳಿಕ ಸತತ ಮೂರು ಪಂದ್ಯಗಳನ್ನು ಹೊರಗಡೆ ಆಡಿತ್ತು. 2021ರ ನಂತರ ಇದೇ ಮೊದಲ ಬಾರಿಗೆ ಪ್ಲೇ-ಆಫ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ತಂಡ ಎದುರು ನೋಡುತ್ತಿದೆ.

ಫುಟ್ಬಾಲ್‌ನಲ್ಲಿ ಶ್ರೀಮಂತ ಇತಿಹಾಸ ಹೊಂದಿದೆ ಮೋಹನ್ ಬಗಾನ್

ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಮೋಹನ್ ಬಗಾನ್, ಈ ಎರಡೂ ಫ್ರಾಂಚೈಸ್‌ಗಳು ಕೋಲ್ಕತ್ತಾ ಮೂಲದ ಬಿಸಿನೆಸ್‌ ಸಂಸ್ಥೆ ಆರ್‌ಪಿ ಸಂಜೀವ್ ಗೋಯೆಂಕಾ ಗ್ರೂಪ್‌ನ ಒಡೆತನದಲ್ಲಿದೆ. 2022ರಲ್ಲಿ ಐಪಿಎಲ್ ತಂಡಗಳ ಸಂಖ್ಯೆಯನ್ನು 10ಕ್ಕೆ ವಿಸ್ತರಿಸಿದ ಸಂದರ್ಭದಲ್ಲಿ ಲಕ್ನೋ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡ ಆರ್‌ಪಿಎಸ್‌ಜಿ (RPSG) ಗ್ರೂಪ್, ಅದಕ್ಕೂ ಮುನ್ನವೇ ಮೋಹನ್ ಬಗಾನ್‌ ತಂಡದ ಮಾಲೀಕತ್ವವನ್ನು ಹೊಂದಿತ್ತು. ಭಾರತೀಯ ಫುಟ್‌ಬಾಲ್‌ ಕ್ಷೇತ್ರದಲ್ಲಿ ಮೋಹನ್ ಬಗಾನ್ ಒಂದು ಪರಂಪರೆಯನ್ನು ನಿರ್ಮಿಸಿದೆ. ದೇಶದ ಫುಟ್‌ಬಾಲ್‌ನಲ್ಲಿ ತನ್ನ ಶ್ರೀಮಂತ ಇತಿಹಾಸವನ್ನು ಗೌರವಿಸುವ ಗುರಿಯೊಂದಿಗೆ, ಎಲ್‌ಎಸ್‌ಜಿ ತಂಡದ ಒಂದು ಪಂದ್ಯಕ್ಕೆ ಬೋಹನ್‌ ಬಗಾನ್‌ ತಂಡದ ಥೀಮ್‌ ಇರುವ ಜೆರ್ಸಿ ನೀಡಲಾಗಿದೆ.

ಕೆಕೆಆರ್‌ ತಂಡದ ವಿರುದ್ಧ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಅಜೇಯ ದಾಖಲೆ ಹೊಂದಿದೆ. 2023ರ ಆವೃತ್ತಿಯಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಲಕ್ನೋ ರೋಚಕ ಗೆಲುವು ದಾಖಲಿಸಿತ್ತು.

Whats_app_banner