ಲಕ್ನೋ ಬೌಲರ್‌ಗಳ ಮಾರಕ ದಾಳಿ, ಬ್ಯಾಟರ್‌ಗಳ ಸಂಘಟಿತ ವೈಫಲ್ಯ; ತವರಿನಲ್ಲಿ ಸತತ ಎರಡನೇ ಸೋಲು ಕಂಡ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಜಯ ಸಾಧಿಸಿದೆ. ಯುವ ವೇಗಿ ಮಯಾಂಕ್ ಯಾದವ್ ಅಬ್ಬರಕ್ಕೆ ಆರ್‌ಸಿಬಿ ಬ್ಯಾಟರ್‌ಗಳು ಸ್ಫೋಟಕ ಆಟ ಮರೆತು ಸೋಲೊಪ್ಪಿದ್ದಾರೆ. ತವರು ಮೈದಾನದ ಬೆಂಗಳೂರಿನಲ್ಲಿ ಫಾಫ್ ಡುಪ್ಲೆಸಿಸ್ ಪಡೆಯು ಸತತ ಎರಡನೇ ಸೋಲು ಕಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಸತತ ಎರಡನೇ ಸೋಲಿಗೆ ಶರಣಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ 28 ರನ್‌ಗಳಿಂದ ತಂಡ ಸೋಲೊಪ್ಪಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲು ಕಂಡಿದೆ. ಕಳೆದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿಯೂ ಲಕ್ನೋ ತಂಡ ಬೆಂಗಳೂರಿನಲ್ಲಿ ನಡೆದ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಆರ್‌ಸಿಬಿಯನ್ನು ಅವರದ್ದೇ ತವರಿನಲ್ಲಿ ಮಣಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಲ್‌ಎಸ್‌ಜಿ, 181 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಆರ್‌ಸಿಬಿ, 19.4 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್ ಆಯ್ತು. ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳ ರನ್ ಸೋರಿಕೆ ಎಂದಿನಂತೆ ಮುಂದುವರೆದರೆ, ಅತ್ತ ಎಲ್ಲಾ ಬ್ಯಾಟರ್‌ಗಳು ಸಂಘಟಿತ ವೈಫಲ್ಯ ಅನುಭವಿಸಿದರು. ಮ್ಯಾಕ್ಸಿ, ಗ್ರೀನ್ ಮತ್ತೆ ಅಬ್ಬರ ಮರೆತರು. ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡದ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಲಕ್ನೋ ನೀಡಿದ 182 ರನ್ ಚೇಸಿಂಗ್‌ಗಿಳಿದ ಆರ್‌ಸಿಬಿ ಉತ್ತಮ ಆರಂಭ ಪಡೆಯಿತು. ಅನುಭವಿಗಳಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಆರಂಭ ಕೊಟ್ಟರು. 22 ರನ್ ಗಳಿಸಿದ್ದ ಆರೆಂಜ್ ಕ್ಯಾಪ್ ಹೋಲ್ಡರ್ ವಿರಾಟ್, ಪದಾರ್ಪಣೆ ಮಾಡಿದ ಆಟಗಾರ ಸಿದ್ಧಾರ್ಥ್‌ಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಔಟಾದ ಬೆನ್ನಲ್ಲೇ 19 ರನ್ ಗಳಿಸಿದ್ದ ಫಾಫ್ ರನೌಟ್ ಆದರು. ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯದಲ್ಲಿ ವಿಫಲರಾದ ಗ್ಲೆನ್ ಮ್ಯಾಕ್ಸ್‌ವೆಲ್ ಡಕೌಟ್ ಆದರು. ಅವರ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ ಕೂಡಾ 9 ರನ್ ಗಳಿಸಿದ್ದಾಗ ಔಟಾದರು. ಸತತ ಎರಡು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಮಯಾಂಕ್ ಯಾದವ್ ಮುನ್ನಡೆ ತಂದುಕೊಟ್ಟರು. ಈ ಪಂದ್ಯದಲ್ಲೂ ಅಬ್ಬರಿಸಿದ ಮಯಾಂಕ್, ಒಟ್ಟು ಮೂರು ವಿಕೆಟ್ ಕಬಳಿಸಿದರು.
ಟೂರ್ನಿಯಲ್ಲಿ ಮೊದಲ ಬಾರಿಗೆ ತಂಡವೊಂದು ಆಲೌಟ್!
ತಂಡ ಮೇಲಿಂದ ಮೇಲೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ, ರಜತ್ ಪಾಟೀದಾರ್ ಮತ್ತು ಅನುಜ್ ರಾವತ್ ಕೆಲಕಾಲ ಕ್ರೀಸ್‌ಕಚ್ಚಿ ಆಡಿದರು. ರಾವತ್ 11 ರನ್ ಗಳಿಸಿದರೆ, 29 ರನ್ ಗಳಿಸಿ ಪಾಟೀದಾರ್ ಕೂಡಾ ಪೆವಿಲಿಯನ್ ಸೇರಿದರು. ಡೆತ್ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ ಜೊತೆಗೂಡಿದ ಮಹಿಪಾಲ್ ಲೋಮ್ರರ್ ತಂಡವನ್ನು ಗೆಲ್ಲಿಸುವ ಪ್ರಯತ್ನಕ್ಕೆ ಮುಂದಾದರು. ಡಿಕೆ 4 ರನ್ ಗಳಿಸಿ ಔಟಾದರೆ, ಅಬ್ಬರಿಸಿದ ಲೋಮ್ರರ್ ಕೇವಲ 13 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್‌ಗಳೊಂದಿಗೆ 33 ರನ್ ಕಲೆ ಹಾಕಿದರು. ಪೂರನ್‌ಗೆ ಕ್ಯಾಚ್ ನೀಡಿ ಔಟಾಗುವುದರೊಂದಿಗೆ ತಂಡದ ಸೋಲು ಖಚಿತವಾಯ್ತು. ಕೊನೆಗೆ 153 ರನ್‌ಗೆ ತಂಡ ಆಲೌಟ್ ಆಯ್ತು. ಪ್ರಸಕ್ತ ಆವೃತ್ತಿಯಲ್ಲಿ ತಂಡವೊಂದು ಆಲೌಟ್ ಆದ ಮೊದಲ ನಿದರ್ಶನವಿದು.
ಲಕ್ನೋ ಸ್ಫೋಟಕ ಬ್ಯಾಟಿಂಗ್
ಪಂದ್ಯದಲ್ಲಿ ಕೊದಲು ಬ್ಯಾಟಿಂಗ್ ನಡೆಸಿದ ಲಕ್ನೋ, ಉತ್ತಮ ಆರಂಭ ಪಡೆಯಿತು. ಅನುಭವಿ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿಕಾಕ್, ಮೊದಲ ವಿಕೆಟ್‌ಗೆ 53 ರನ್ ಗಳಿಸಿದರು. 2 ಸಿಕ್ಸರ್ ಸಹಿತ 20 ರನ ಸಿಡಿಸಿದ್ದ ಕನ್ನಡಿಗ ರಾಹುಲ್, ಮ್ಯಾಕ್ಸ್‌ವೆಲ್ ಸ್ಪಿನ್ ಮೋಡಿಗೆ ಬಲಿಯಾದರು. ಟೂರ್ನಿಯಲ್ಲಿ ಮತ್ತೆ ವೈಫಲ್ಯ ಅನುಭವಿಸಿದ ದೇವದತ್ ಪಡಿಕ್ಕಲ್ 6 ರನ್ ಗಳಿಸಿ ಔಟಾದರು.
ಸ್ಟೋಯ್ನಿಸ್ 24 ರನ್ ಗಳಿಸಿದರೆ, ಸ್ಫೋಟಕ ಆಟವಾಡಿದ ಡಿಕಾಕ್ ಆಕರ್ಷಕ ಅರ್ಧಶತಕ ಗಳಿಸಿದರು. 56 ಎಸೆತಗಳನ್ನು ಎದುರಿಸಿದ ಅವರು, 8 ಬೌಂಡರಿ ಹಾಗೂ 5 ಮಾರಕ ಸಿಕ್ಸರ್‌ಗಳ ಸಹಾಯದಿಂದ 81 ರನ್ ಬಾರಿಸಿದರು. ಕೊನೆಗೆ ಟೋಪ್ಲಿ ಎಸೆತದಲ್ಲಿ ಡಾಗರ್‌ಗೆ ಕ್ಯಾಚ್ ನೀಡಿ ಔಟಾದರು. ಡೆತ್ ಓವರ್‌ಗಳಲ್ಲಿ ಅಬ್ಬರಿಸಿದ ಪೂರನ್, ಭರ್ಜರಿ 190.48ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 5 ಸಿಕ್ಸರ್ ನೆರವಿನೊಂದಿಗೆ 40 ರನ್ ಗಳಿಸಿದರು.
ಆರ್‌ಸಿಬಿ ಪರ ಮ್ಯಾಕ್ಸ್‌ವೆಲ್ 2 ವಿಕೆಟ್ ಪಡೆದರೆ, ಟೋಪ್ಲಿ, ಸಿರಾಜ್ ಹಾಗೂ ಯಶ್ ದಯಾಳ್ ತಲಾ 1 ವಿಕೆಟ್ ಪಡೆದರು. ದಯಾಳ್ ಮತ್ತು ಮ್ಯಾಕ್ಸಿ ಉತ್ತಮ ಎಕಾನಮಿ ಕಾಯ್ದುಕೊಂಡರೆ, ಉಳಿದೆಲ್ಲಾ ಬೌಲರ್‌ಗಳು ದುಬಾರಿಯಾದರು.