IPL 2024: ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್; ವಾಂಖೆಡೆ ಸ್ಟೇಡಿಯಂ ಪಿಚ್, ಹವಾಮಾನ ವರದಿ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024: ಮುಂಬೈ ಇಂಡಿಯನ್ಸ್ Vs ರಾಜಸ್ಥಾನ್ ರಾಯಲ್ಸ್; ವಾಂಖೆಡೆ ಸ್ಟೇಡಿಯಂ ಪಿಚ್, ಹವಾಮಾನ ವರದಿ ಹೀಗಿದೆ

IPL 2024: ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್; ವಾಂಖೆಡೆ ಸ್ಟೇಡಿಯಂ ಪಿಚ್, ಹವಾಮಾನ ವರದಿ ಹೀಗಿದೆ

MI vs RR: ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಏಪ್ರಿಲ್ 1ರಂದು ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಹಾರ್ದಿಕ್‌ ಪಾಂಡ್ಯ ನೇತೃತ್ವದ ಎಂಐ ತಂಡಕ್ಕೆ ತವರು ನೆಲದಲ್ಲಿ ಮೊದಲ ಪಂದ್ಯವಾಗಿದೆ.

ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ
ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ

ಐಪಿಎಲ್‌ 2024ರ ಆವೃತ್ತಿಯಲ್ಲಿ ಮೊದಲ ಪಂದ್ಯದ ಆತಿಥ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ಸಜ್ಜಾಗಿದೆ. ಹೊಸ ತಿಂಗಳು ಏಪ್ರಿಲ್ 1ರಂದು ತವರು ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಪಂದ್ಯವಾಡುತ್ತಿದೆ. ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಹಾರ್ದಿಕ್‌ ಪಾಂಡ್ಯ ಬಳಗವು, ಟೂರ್ನಿಯ ಅಜೇಯ ತಂಡವಾದ ರಾಜಸ್ಥಾನ್ ರಾಯಲ್ಸ್ (Mumbai Indians vs Rajasthan Royals) ವಿರುದ್ಧ ಸೆಣಸಲಿದೆ. ಸೋಮವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಸತತ ಗೆಲುವಿನ ನಿರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ಬಳಗವಿದೆ. ಇದೇ ವೇಳೆ, ಮೊದಲ ಗೆಲುವು ಕಾಣಲು ಪಾಂಡ್ಯ ಬಳಗ ಹಾತೊರೆಯುತ್ತಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 6 ರನ್‌ಗಳಿಂದ ಸೋತ ಮುಂಬೈ , ಆ ಬಳಿಕ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಚಂಡ ಹೋರಾಟದ ನಡುವೆಯೂ 31 ರನ್‌ಗಳಿಂದ ಸೋತಿತು. ಆಡಿದ ಎರಡು ಪಂದ್ಯಗಳಿಂದ ಗೆಲುವು ದೂರದ ಬೆಟ್ಟವಾಗಿರುವ ಮುಂಬೈ, ಇನ್ನೂ ಅಂಕಗಳ ಖಾತೆ ತೆರದಿಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಲಕ್ನೋ ಸೂಪರ್‌ ಜೈಂಟ್ಸ್ ವಿರುದ್ಧ 20 ರನ್‌ಗಳಿಂದ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದ ರಾಜಸ್ಥಾನ್‌, ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈವರೆಗೆ ಆಡಿದ ಎರಡು ಪಂದ್ಯಗಳಿಂದ ತಂಡವು 4 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ | ಅರ್ಜುನ್ ತೆಂಡೂಲ್ಕರ್, ಮೊಹಮ್ಮದ್ ನಬಿ ಇನ್-ಡೇವಿಡ್, ಮಫಕಾ ಔಟ್; ರಾಜಸ್ಥಾನ್ ಕದನಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್​ XI

ಉಭಯ ತಂಡಗಳು ಐಪಿಎಲ್‌ ಇತಿಹಾಸದಲ್ಲಿ ಈವರೆಗೆ ಒಟ್ಟು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡವು 15 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದ್ದರೆ, ರಾಜಸ್ಥಾನ್ 12 ಪಂದ್ಯಗಳಲ್ಲಿ ಗೆದ್ದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿರುವ ಕೊನೆಯ 5 ಪಂದ್ಯಗಳಲ್ಲಿ ಎಂಐ 4ರಲ್ಲಿ ಗೆಲುವು ಸಾಧಿಸಿದೆ. ಇದೇ ವೇಳೆ ವಾಂಖೆಡೆ ಮೈದಾನದಲ್ಲಿ ಮುಂಬೈ ತಂಡ ಆರ್‌ಆರ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಬೀಗಿದೆ.

ವಾಂಖೆಡೆ ಕ್ರೀಡಾಂಗಣದ ಪಿಚ್ ವರದಿ

ವಾಂಖೆಡೆ ಮೈದಾನದ್ದು ಬ್ಯಾಟಿಂಗ್ ಪಿಚ್. ಮೈದಾನದಲ್ಲಿ ಹೆಚ್ಚಿನ ರನ್‌ ಕಲೆಹಾಕಬಹುದು. ಇಲ್ಲಿನ ಬೌಂಡಿಗಳು ಕೂಡಾ ಸಣ್ಣದಾಗಿದ್ದು, ಹಿಟ್ಟರ್‌ಗಳು ದೊಡ್ಡ ಹೊಡೆತಕ್ಕೆ ಬೇಗನೆ ಮುಂದಾಗುತ್ತಾರೆ. ಬೌಲರ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಪಿಚ್‌ ನೆರವಾಗುತ್ತದೆ. ಐದು ಬಾರಿಯ ಚಾಂಪಿಯನ್‌ ಮುಂಬೈ ತಂಡವು ಈ ಮೈದಾನದಲ್ಲಿ ಆಡಿದ 78 ಪಂದ್ಯಗಳಲ್ಲಿ 49ರಲ್ಲಿ ಗೆಲುವು ದಾಖಲಿಸಿದೆ.

ವಾಣಿಜ್ಯ ನಗರಿ ಮುಂಬೈ ಹವಾಮಾನ ವರದಿ

ಪಂದ್ಯದ ಆರಂಭದ ಸಮಯದಲ್ಲಿ ಮುಂಬೈ ತಾಪಮಾನವು ಸುಮಾರು 30 ಡಿಗ್ರಿ ಆಸುಪಾಸಿನಲ್ಲಿರುವ ಸಾಧ್ಯತೆ ಇದೆ. ಪಂದ್ಯದ ಮುಂದುವರೆದಂತೆ 27 ಡಿಗ್ರಿಗಳಿಗೆ ಇಳಿಯುವ ನಿರೀಕ್ಷೆ ಇದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.

ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ ಬಳಗ

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್​), ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಮೊಹಮ್ಮದ್ ನಬಿ, ರೊಮಾರಿಯೊ ಶೆಫರ್ಡ್, ಜೆರಾಲ್ಡ್ ಕೊಯೆಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ , ಅರ್ಜುನ್ ತೆಂಡೂಲ್ಕರ್.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ಸಂದೀಪ್ ಶರ್ಮಾ, ಆವೇಶ್ ಖಾನ್.

Whats_app_banner